ಮಂಗಳೂರು,ಸೆಪ್ಟೆಂಬರ್.22: ವಿಶಿಷ್ಠ ಭಾಷೆ,ಸಂಸ್ಕೃತಿ,ಧರ್ಮ, ಆಚಾರವಿಚಾರಗಳನ್ನು ಮೈಳೈಸಿಕೊಂಡಿರುವ ದ.ಕ.ಜಿಲ್ಲೆಯ ರಾಜಧಾನಿ ಮಂಗಳೂರಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕರಾವಳಿ ಉತ್ಸವವನ್ನು ಹಮ್ಮಿಕೊಡಿದ್ದು, ಈ ಉತ್ಸವವು ಕಾಟಾಚಾರದ ಉತ್ಸವವಾಗದೇ ಈ ನೆಲದ ಸಂಸ್ಕೃತಿ ಕಲೆ, ಜಾನಪದದ ಸೊಗಡನ್ನು ಬಿಂಬಿಸುವ ಅರ್ಥಪೂರ್ಣ ಉತ್ಸವವಾಗಲೀ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು.ಕರಾವಳಿ ಉತ್ಸವ ವಸ್ತುಪ್ರದರ್ಶನದಲ್ಲಿ ಸರ್ಕಾರಿ, ಖಾಸಗಿ ಹಾಗೂ ಸಾರ್ವಜನಿಕ ರಂಗದ ಬ್ಯಾಂಕುಗಳು ತಮ್ಮ ಪ್ರಗತಿಯನ್ನು ಬಿಂಬಿಸುವ ಆಕರ್ಷಕ ಮಳಿಗೆಗಳನ್ನು ಪ್ರದರ್ಶಿಸಬೇಕು, ಪ್ರತಿಯೊಂದು ಇಲಾಖೆ ತನ್ನ “ಇಲಾಖಾ ದಿನಾಚರಣೆಯ”ನ್ನು ಆಚರಿಸುವ ಮೂಲಕ ಇಲಾಖೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ನೌಕರ/ಸಿಬ್ಬಂದಿಗಳನ್ನು ಅಥವಾ ಸಾರ್ವಜನಿಕರನ್ನಾಗಲೀ ಈ ಸಂಧರ್ಬದಲ್ಲಿ ಸನ್ಮಾನಿಸುವ ಬಗ್ಗೆ ಚಿಂತನೆ ನಡೆಸುವಂತೆ ಸಚಿವರು ತಿಳಿಸಿದರು.
ಕರಾವಳಿ ಉತ್ಸವ ವಸ್ತುಪ್ರದರ್ಶನ 30 ದಿನಗಳು ನಡೆಯಲಿದ್ದು ,ಸಾಂಸ್ಕೃತಿಕ ಕಾರ್ಯಕ್ರಮಗಳು ಡಿಸೆಂಬರ್ 20 ರಿಂದ 31 ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರನ್ನು ಆಹ್ವಾನಿಸಲು ಯತೀಶ್ ಬೈಕಂಪಾಡಿ ಅವರು ಸಲಹೆಯಿತ್ತರು. ಕರಾವಳಿ ಉತ್ಸವ ಕೇವಲ ಮಂಗಳೂರಿಗೆ ಸೀಮಿತವಾಗದೇ, ಉತ್ಸವವನ್ನು ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲೂ ಆಚರಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಪೋಲೀಸ್ ಅಧೀಕ್ಷಕ ಡಾ{ಶರಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವಪ್ರಭು ,ಮಹಾನಗರ ಪಾಲಿಕೆ ಪ್ರಭಾರ ಆಯುಕ್ತ ಗೋಪಾಲದಾಸ್ ನಾಯಕ್, ಉಪ ಮೇಯರ್ ಕವಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಬ್ಯಾರಿ ಅಕಾಡೆಮಿ ಅಧ್ಯ ಹನೀಫ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಮುಂತಾದವರು ಹಾಜರಿದ್ದರು.


