ಮಂಗಳೂರು ,ಸೆಪ್ಟೆಂಬರ್ .22 : ಮಂಗಳೂರು ಮಹಾನಗರಪಾಲಿಕೆ ಹಾಗೂ ಉಳ್ಳಾಲ ಪುರಸಭೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ 96103 ಪಡಿತರ ಚೀಟಿ ಹೊಂದಿದವರಿದು, ಇವರಲ್ಲಿ 23875 ಬಿಪಿಎಲ್/ಎಪಿಎಲ್ ಪಡಿತರ ಚೀಟಿದಾರರಿದ್ದು, 7500 ಕುಟುಂಬಗಳಿಗೆ ಇಲ್ಲಿಯ ವರೆಗೆ ಅನಿಲ ಸಂಪರ್ಕವಿರುವುದಿಲ್ಲ. ಆದ್ದರಿಂದ ಈ ಕುಟುಂಬಗಳಿಗೆ ಹಂತಹಂತವಾಗಿ ಅನಿಲ ಸಂಪರ್ಕ ಕಲ್ಪಿಸಲು ಮುಂದಾಗುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆ ಹಾಗೂ ಉಳ್ಳಾಲ ಪುರಸಭೆ ವ್ಯಾಪ್ತಿ ಪ್ರದೇಶವನ್ನು ಸೀಮೆ ಎಣ್ಣೆ ಮುಕ್ತ ನಗರವನ್ನಾಗಿಸುವ ಕುರಿತಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಮಹಾನಗರಪಾಲಿಕೆ ಮತ್ತು ಉಳ್ಳಾಲ ಪುರಸಭೆ ವತಿಯಿಂದ ಅನುದಾನ ಪಡೆಯಲು ಅರ್ಹತೆ ಇಲ್ಲದವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಯ ಬ್ಯಾಂಕುಗಳಿಂದ ಸರಳ ಬಡ್ಡಿ ದರದ ಸಾಲದ ಮೂಲಕ ಅನಿಲ ಸಂಪರ್ಕ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದರು.
ಅನಿಲ ಸಂಪರ್ಕ ಪಡೆಯಲು ಪಡಿತರ ಚೀಟಿ ಕಡ್ಡಾಯವಲ್ಲ. ಆದರೆ ಮತದಾರರ ಗುರುತಿನ ಚೀಟಿ,ವಾಸದ ದೃಢೀಕರಣ ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿ ನೀಡುವುದು ಕಡ್ಡಾಯ ಎಂದು ಅವರು ತಿಳಿಸಿದರು. ಅನಿಲ ಸಂಪರ್ಕ ನೀಡುವ ಸಮಯದಲ್ಲಿ ಫಲಾನುಭವಿಗಳಿಗೆ ಹೆಚ್ಚಿನ ತೊಂದರೆಯಾಗದಂತೆ ನಿಗಾವಹಿಸಿ ತ್ವರಿತವಾಗಿ ಸಂಪರ್ಕಗಳನ್ನು ನೀಡಲು ಆದೇಶಿಸಿದ್ದು, ಈ ನಿಟ್ಟಿನಲ್ಲಿ ಅಕ್ಟೋಬರ್ 8 ಮತ್ತು 9 ರಂದು ಮಂಗಳೂರು ಮಹಾನಗರಪಾಲಿಕೆಯ ಲಾಲ್‌ಭಾಗ್, ಸುರತ್ಕಲ್ ,ಕಾವೂರು ಮತ್ತು ಉಳ್ಳಾಲ ಪುರಸಭೆ ಕಚೇರಿ ಆವರಣದಲ್ಲಿ ವಿಶೇಷ ಆಂದೋಲನ ರೀತಿಯಲ್ಲಿ ಅನಿಲ ಸಂಪರ್ಕ ನೀಡಲು ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ.ನಂತರ ಅಕ್ಟೋಬರ್ 18 ಮತ್ತು 19 ರಂದು ಸಹ ಅದೇ ಸ್ಥಳಗಳಲ್ಲಿ ಎರಡನೇ ಶಿಬಿರವನ್ನು ಏರ್ಪಡಿಸಲಾಗಿದೆ.
ಸಭೆಯಲ್ಲಿ ಶಾಸಕ ಜೆ.ಆರ್. ಲೋಬೋ,ಮೊದಿನ್‌ಬಾವಾ,ಐವನ್ ಡಿಸೋಜ,ಜಿಲ್ಲಾ ಪಂಚಾಯತ್ ಅದ್ಯಕ್ಷ್ದೆಆಶಾ ತಿಮ್ಮಪ್ಪ, ಮೇಯರ್ ಮಹಾಬಲ ಮಾರ್ಲ ಮುಂತಾದವರು ಹಾಜರಿದ್ದರು.

