
ಬೆಂಗಳೂರು, ಸೆ.19: ಹೊಸ ರಾಜ್ಯವಾಗಿರುವ ಸೀಮಾಂಧ್ರ ಈಗ ದಾರಿತಪ್ಪಿದ ಮಗ ಇದ್ದಂತೆ. ಹಾಗಂತ ನಾವು ದಾರಿತಪ್ಪಿದ ಮಗ ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹೊಸ ರಾಜ್ಯ ಎಂಬ ಕಾರಣಕ್ಕಾಗಿ ಕೈಗಾರಿಕೆಗಳ ಸ್ಥಾಪನೆಯ ವಿಷಯದಲ್ಲಿ ಸೀಮಾಂಧ್ರ ಹಾದಿ ಬಿಟ್ಟು ನಡೆಯುತ್ತಿದೆ. ನಾವು ಅವರ ರೀತಿ ದಾರಿತಪ್ಪಿ ನಡೆಯಲು ಸಾಧ್ಯವಿಲ್ಲ. ಅವರಂತೆ ಕೈಗಾರಿಕೆಗಳಿಗೆ ಪುಗಸಟ್ಟೆ ಭೂಮಿಕೊಡಲೂ ಸಾಧ್ಯವಿಲ್ಲ. ಬೇಕಿದ್ದವರು ಬರಲಿ, ಹೋಗಬೇಕೆಂದಿರುವವರು ಹೋಗಲಿ ಎಂದು ಅವರು ಗುಡುಗಿದ್ದಾರೆ.
ಇದು ಬಂಡವಾಳಗಾರರ ಸ್ವರ್ಗ. ಕರ್ನಾಟಕದಂತೆ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ಬೇರೆ ರಾಜ್ಯಗಳಲ್ಲಿ ಇಲ್ಲ. ಇಲ್ಲಿನಂತೆ ಕಾನೂನೂ ಸುವ್ಯವಸ್ಥೆ ಸಿಗಲು ಸಾಧ್ಯವಿಲ್ಲ. ಹೀಗಾಗಿ ಕೈಗಾರಿಕೆಗಳಿಗೆ ಎಷ್ಟು ಸವಲತ್ತು ಬೇಕೋ ಅಷ್ಟು ಸವಲತ್ತು ಕೊಡುತ್ತೇವೆ. ಸೀಮಾಂಧ್ರದ ಹಾಗೆ ಹಾದಿ ಬಿಟ್ಟು ನಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದಅವರು, ಹೀರೋ ಮೋಟೋಕಾಪ್ಸ್‌ನ ಕಂಪೆನಿ ಉತ್ತರಕರ್ನಾಟಕ ಭಾಗದಲ್ಲಿ ಸ್ಥಾಪನೆಯಾಗುತ್ತದೆ. ನಾಲ್ಕೈದು ಸಾವಿರ ಜನರಿಗೆ ಉದ್ಯೋಗಾವಕಾಶ ನೀಡುತ್ತದೆ ಎಂಬ ಕಾರಣಕ್ಕಾಗಿಅಗತ್ಯಕ್ಕಿಂತ ಜಾಸ್ತಿ ಸವಲತ್ತು ನೀಡಿದೆವು. ಆದರೆ ಅವರು ಹೇಳದೆ ಕೇಳದೆ ಸೀಮಾಂಧ್ರಕ್ಕೆ ಹೋಗಿದ್ದಾರೆ ಎಂದರು. ಸೀಮಾಂಧ್ರ ಹೊಸ ರಾಜಧಾನಿಯಾಗಿರುವುದರಿಂದ ಅಲ್ಲಿ ಹೆಚ್ಚಿನ ಸವಲತ್ತು ಸಿಗುತ್ತದೆ ಎಂದು ಅವರು ಹೋಗಿರಬಹುದು.
ಕೇಂದ್ರ ಸರಕಾರ ಹತ್ತು ವರ್ಷಗಳ ಕಾಲ ಅಲ್ಲಿಗೆ ಬರುವ ಕೈಗಾರಿಕೆಗಳಿಗೆ ವಿನಾಯಿತಿ ನೀಡಿರುವ ಕ್ರಮದಿಂದ ಆಕರ್ಷಿತರಾಗಿರಲೂ ಬಹುದು.
ಹಾಗಂತ ಅವರು ಹೋದರು ಎಂದು ಎಲ್ಲರೂ ಹೋಗಲು ಸಾಧ್ಯವಿಲ್ಲ.ಇವರು ಉತ್ತರ ಕರ್ನಾಟಕ ಭಾಗದಲ್ಲಿಕೈಗಾರಿಕೆ ಸ್ಥಾಪಿಸುತ್ತೇವೆ ಎಂದಾಗ ಮೂವತ್ತೆರಡು ಲಕ್ಷರೂಗೆ ಒಂದು ಎಕರೆಯಂತೆ ಐನೂರು ಎಕರೆ ಭೂಮಿ ಕೊಡಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿತು. ಅದೇ ರೀತಿ ಹಲವು ರೀತಿಯ ವಿನಾಯಿತಿಗಳನ್ನು ನೀಡಿತು. ಆದರೆ ಕನ್ನಡಿಗರಿಗೆ ಉದ್ಯೋಗ ನೀಡುವುದಿಲ್ಲ ಎಂದಾಗ ಮಾತ್ರ ನಾವು ಮಧ್ಯೆ ಪ್ರವೇಶಿಸಿ, ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದರೆ ಶೇಕಡಾ ಎಪ್ಪತ್ತರಷ್ಟು ಜನರಿಗೆ ಉದ್ಯೋಗ ನೀಡಬೇಕು ಎಂದು ಕರಾರು ಹಾಕಿದೆವು. ಇದನ್ನು ಹೊರತುಪಡಿಸಿದರೆ ಅವರಿಗೆ ಬೇರೆಯವರಿಗಿಂತ ಹೆಚ್ಚಿನ ಸವಲತ್ತು ನೀಡಿದ್ದೆವು.
ಇದೇ ರೀತಿ ಕೋಲಾರದಲ್ಲಿ ಹೋಂಡಾ ಕಂಪನಿಯವರು ಕೈಗಾರಿಕೆ ಆರಂಭಿಸಿದ್ದಾರೆ.ಶೇಕಡಾ ಎಂಭತ್ತರಷ್ಟು ಸ್ಥಳೀಯರಿಗೆ ಕೆಲಸ ಕೊಟ್ಟಿದ್ದಾರೆ. ಒಂದು ಎಕರೆಗೆ ನಲವತ್ತೇಳು ಲಕ್ಷ ರೂಗಳಂತೆ ಹಣಕೊಟ್ಟಿದ್ದಾರೆ. ಆದರೂ ಇವರು ಸೀಮಾಂಧ್ರಕ್ಕೆ ಹೋಗುತ್ತಾರೆ ಎಂದರೆ ಹೋಗಲಿ ಎಂದರು.
ನಾವು ಸೀಮಾಂಧ್ರದವರ ತರಹ ಕೈಗಾರಿಕೆ ಸ್ಥಾಪಿಸಲು ಪುಗಸಟ್ಟೆ ಭೂಮಿಕೊಡಲು ಸಾಧ್ಯವಿಲ್ಲ. ಹೋಗುವವರಿಗೆ ಇಲ್ಲಿನ ರೀತಿಯ ಕೈಗಾರಿಕಾ ಸ್ನೇಹಿ ವಾತಾವರಣವೂ ಸಿಗುವುದಿಲ್ಲ. ಮಾನವ ಕೌಶಲ್ಯವೂ ಸಿಗುವುದಿಲ್ಲ ಎಂದು ನುಡಿದರು.
ಸೀಮಾಂಧ್ರ ಹೊಸ ರಾಜ್ಯ. ಹೀಗಾಗಿ ಮೊದಲು ರಾಜಧಾನಿಯಾಗಿದ್ದ ಹೈದರಾಬಾದ್ ಇದೀಗ ತೆಲಂಗಾಣಕ್ಕೆ ಸೇರಿದೆ. ಹೆಚ್ಚಿನ ಕೈಗಾರಿಕೆಗಳು ಅಲ್ಲೇ ಇದ್ದವು. ಹೀಗಾಗಿ ಅವರು ಹಾದಿ ಬಿಟ್ಟು ನಡೆಯುತ್ತಿರಬಹುದು. ಆದರೆ ನಾವು ನಡೆಯಲು ಸಾಧ್ಯವಿಲ್ಲ ಎಂದರು.