ರಾಷ್ಟ್ರೀಯ

‘ಭಾರತೀಯ ಮುಸ್ಲಿಮರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿ ಸಾಯುತ್ತಾರೆ’

Pinterest LinkedIn Tumblr

Modi

ಹೊಸದಿಲ್ಲಿ, ಸೆ.19: ‘ಭಾರತೀಯ ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವಂತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ (ಸಿಎನ್‌ಎನ್) ನೀಡಿದ ಸಂದರ್ಶನದಲ್ಲಿ ಅವರು ಈ ಮೇಲಿನಂತೆ ಹೇಳಿದ್ದಾರೆ.

‘ಭಾರತೀಯ ಮುಸ್ಲಿಮರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿಯೇ ಸಾಯುತ್ತಾರೆ. ಭಾರತೀಯ ಮುಸ್ಲಿಮರು ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂಬುದು ಕೇವಲ ಅಲ್ ಖೈದಾ ಸಂಘಟನೆಯ ಭ್ರಮೆಯಾಗಿದೆ’ ಎಂದು ಅವರು ಹೇಳಿದರು.

ಮೋದಿ ಅವರು ಇದೇ ತಿಂಗಳ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಭಾರತ ಮತ್ತು ಅಮೆರಿಕಗಳ ಇತಿಹಾಸ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಬಹಳ ಸಾಮ್ಯತೆ ಇದೆ ಎಂದು ಅವರು ನುಡಿದರು.

ಈ ಹಿಂದೆ ಭಾರತ-ಅಮೆರಿಕ ನಡುವಿನ ಸಂಬಂಧಗಳಲ್ಲಿ ಹಲವು ಬಗೆಯ ಏರಿಳಿತಗಳು ಆಗಿವೆ ಎಂಬುದನ್ನು ಮೋದಿ ಒಪ್ಪಿಕೊಂಡರು. ಆದರೆ 21ನೆ ಶತಮಾನದಲ್ಲಿ ನಮ್ಮ ನಡುವಿನ ಸಂಬಂಧಗಳು ಹೊಸ ರೂಪವನ್ನು ಪಡೆದುಕೊಂಡಿವೆ ಎಂದರು.

‘ಭಾರತ ಮತ್ತು ಅಮೆರಿಕಗಳು ನೈಜವಾದ ವ್ಯೆಹಾತ್ಮಕ ಮೈತ್ರಿಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂಬ ವಿಶ್ವಾಸ ನನಗಿದೆ’ ಎಂದು ಅವರು ಹೇಳಿದರು.

‘ಭಾರತ-ಅಮೆರಿಕ ಸಂಬಂಧಗಳನ್ನು ದಿಲ್ಲಿ ಮತ್ತು ವಾಷಿಂಗ್ಟನ್‌ಗಳ ವ್ಯಾಪ್ತಿಯಲ್ಲಿ ನೋಡಬಾರದು. ನಮ್ಮ ನಡುವಿನ ಸಂಬಂಧವನ್ನು ಇನ್ನಷ್ಟು ದೊಡ್ಡ ವ್ಯಾಪ್ತಿಯಲ್ಲಿ ಎರಡೂ ದೇಶಗಳು ನೋಡಬೇಕು’ ಎಂದು ಮೋದಿ ಹೇಳಿದರು.

ಸಂದರ್ಶನದ ಪೂರ್ಣಪಾಠ
ಪ್ರಶ್ನೆ: ಅಮೆರಿಕ ಮತ್ತು ಭಾರತದಲ್ಲಿರುವ ಬಹಳಷ್ಟು ಜನರು ಎರಡೂ ದೇಶಗಳ ನಡುವೆ ಬಹಳ ಆಪ್ತವಾದ ಸಂಬಂಧವನ್ನು ಬಯಸುತ್ತಾರೆ. ಆದರೆ ಇದು ಆಗಲಿಲ್ಲ. ಯಾವಾಗಲೂ ಘರ್ಷಣೆಗಳು ಮತ್ತು ಕಷ್ಟಕರ ಸನ್ನಿವೇಶಗಳು ಸಂಭವಿಸುತ್ತಲೇ ಬಂದವು. ಭಾರತ ಮತ್ತು ಅಮೆರಿಕಗಳು ನೈಜವಾದ ವ್ಯೆಹಾತ್ಮಕ ಮೈತ್ರಿಯನ್ನು ಹೊಂದುವುದು ಸಾಧ್ಯವಿದೆ ಎಂದು ಭಾವಿಸುತ್ತೀರಿ?

ಪ್ರಧಾನಿ: ಈ ಪ್ರಶ್ನೆಗೆ ಒಂದೇ ಶಬ್ಧದಲ್ಲಿ ಬಹಳ ವಿಶ್ವಾಸದಿಂದ ಉತ್ತರ ಹೇಳುತ್ತೇನೆ- ಹೌದು, ಇದು ಸಾಧ್ಯವಿದೆ. ಇದನ್ನು ವಿವರಿಸಿ ಹೇಳುವುದಾದಲ್ಲಿ, ಭಾರತ ಮತ್ತು ಅಮೆರಿಕಗಳ ನಡುವೆ ಹಲವಾರು ಸಾಮ್ಯತೆಗಳಿವೆ. ಕಳೆದ ಕೆಲವು ಶತಮಾನಗಳ ಬೆಳವಣಿಗೆಗಳನ್ನು ಗಮನಿಸಿ ಹೇಳುವುದಾದಲ್ಲಿ, ಅಮೆರಿಕವು ಜಗತ್ತಿನಾದ್ಯಂತ ಜನರನ್ನು ತೆರೆದ ತೋಳುಗಳಿಂದ ಬರಮಾಡಿಕೊಂಡಿದೆ.

ಜಗತ್ತಿನ ಪ್ರತಿಯೊಂದು ಪ್ರದೇಶದಲ್ಲೂ ಒಬ್ಬ ಭಾರತೀಯನಿದ್ದಾನೆ. ಇದು ಈ ಎರಡೂ ಸಮಾಜಗಳ ಲಕ್ಷಣವಾಗಿದೆ. ಭಾರತೀಯರು ಮತ್ತು ಅಮೆರಿಕನ್ನರು ತಮ್ಮ ನೈಸರ್ಗಿಕ ಮನೋಧರ್ಮದಲ್ಲಿ ಒಟ್ಟಾಗಿ ಜೀವಿಸುತ್ತಿದ್ದಾರೆ. ಹೌದು, ಕಳೆದ ಶತಮಾನದಲ್ಲಿ ನಮ್ಮ ಸಂಬಂಧಗಳಲ್ಲಿ ಏರಿಳಿತಗಳಿದ್ದವು. ಆದರೆ 20ನೆ ಶತಮಾನದ ಕೊನೆಯಲ್ಲಿ ಮತ್ತು 21ನೆ ಶತಮಾನದ ಮೊದಲ ದಶಕದಲ್ಲಿ ಬಹಳ ದೊಡ್ಡ ಬದಲಾವಣೆಗಳಾಗಿವೆ. ನಮ್ಮ ನಡುವಣ ಸಂಬಂಧಗಳು ಆಳವಾದುದು. ಇತಿಹಾಸ ಮತ್ತು ಸಂಸ್ಕೃತಿಗಳ ದೃಷ್ಟಿಯಿಂದ ಭಾರತ ಮತ್ತು ಅಮೆರಿಕಗಳು ಪರಸ್ಪರ ಒಗ್ಗೂಡಿವೆ. ಈ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ.

ಪ್ರಶ್ನೆ: ಒಬಾಮಾ ಆಡಳಿತದೊಂದಿಗೆ ನಿಮ್ಮ ಸರಕಾರದ ಮಾತುಕತೆಗಳ ನಿಟ್ಟಿನಲ್ಲಿ ಹಲವು ಮಂದಿ ಸಂಪುಟ ಸದಸ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಭಾರತದೊಂದಿಗಿನ ಸಂಬಂಧಗಳನ್ನು ಸುಧಾರಿಸುವ ದಿಸೆಯಲ್ಲಿ ವಾಷಿಂಗ್ಟನ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ನೀವು ಭಾವಿಸುವಿರಾ?

ಪ್ರಧಾನಿ: ಭಾರತ ಮತ್ತು ಅಮೆರಿಕಗಳ ನಡುವಣ ಸಂಬಂಧವನ್ನು ದಿಲ್ಲಿ ಮತ್ತು ವಾಷಿಂಗ್ಟನ್‌ಗಳ ವ್ಯಾಪ್ತಿಯಿಂದ ನೋಡಬಾರದು. ಇದು ಇನ್ನಷ್ಟು ವಿಸ್ತಾರವಾದುದು. ದಿಲ್ಲಿ ಮತ್ತು ವಾಷಿಂಗ್ಟನ್‌ಗಳ ಮನಸ್ಥಿತಿ ಸೌಹಾರ್ದಯುತವಾಗಿದೆ ಮತ್ತು ಪರಸ್ಪರ ತಿಳಿವಳಿಕೆಯನ್ನು ಹೊಂದಿದೆ. ಎರಡೂ ದೇಶಗಳು ಈ ದಿಸೆಯಲ್ಲಿ ಪಾತ್ರ ವಹಿಸಿವೆ.

ಪ್ರಶ್ನೆ: ಭಾರತದಲ್ಲಿ/ದಕ್ಷಿಣ ಏಷ್ಯಾದಲ್ಲಿ ಅಲ್ ಖಾಯಿದಾ ಸೃಷ್ಟಿಸುವ ಮನವಿಯನ್ನು ಒಳಗೊಂಡ ವಿಡಿಯೋವೊಂದನ್ನು ಅಲ್ ಖಾಯಿದಾ ಮುಖ್ಯಸ್ಥರು ಬಿಡುಗಡೆ ಮಾಡಿದ್ದಾರೆ. ಕಾಶ್ಮೀರ, ಗುಜರಾತ್‌ಗಳಲ್ಲಿ ಮುಸ್ಲಿಮರು ಎದುರಿಸುತ್ತಿರುವ ದಬ್ಬಾಳಿಕೆಗಳಿಂದ ಅವರನ್ನು ಬಿಡುಗಡೆಗೊಳಿಸಲು ಬಯಸಿರುವುದಾಗಿ ಅವರು ಹೇಳುತ್ತಿದ್ದಾರೆ. ಅಂತಹ ಯಾವುದಾದರೂ ಬೆಳವಣಿಗೆ ನಡೆಯದು ಎಂದು ನೀವು ಭಾವಿಸುವಿರಾ?

ಪ್ರಧಾನಿ: ನಮ್ಮ ದೇಶದ ಮುಸ್ಲಿಮರಿಗೆ ಅವರು ಅನ್ಯಾಯ ಮಾಡುತ್ತಿದ್ದಾರೆ ಎಂಬುದು ನನ್ನ ನಂಬಿಕೆ. ಭಾರತೀಯ ಮುಸ್ಲಿಮರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂದು ಯಾರಾದರೂ ಭಾವಿಸಿದ್ದರೆ ಅದು ಭ್ರಮೆಯಾಗುತ್ತದೆ. ಭಾರತೀಯ ಮುಸ್ಲಿಮರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿಯೇ ಸಾಯುತ್ತಾರೆ. ಭಾರತಕ್ಕೆ ಕೆಟ್ಟದ್ದು ಮಾಡಲು ಅವರು ಬಯಸುವುದಿಲ್ಲ.

ಪ್ರಶ್ನೆ: ಭಾರತದಲ್ಲಿ 170 ದಶಲಕ್ಷ ಮುಸ್ಲಿಮರಿದ್ದಾರೆ. ಅಕ್ಕಪಕ್ಕದ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಲ್ಲಿ ಖಾಯಿದಾ ಸಂಘಟನೆ ಸಕ್ರಿಯವಾಗಿದೆ. ಆದರೂ ಇಲ್ಲಿ ಅಲ್‌ಖಾಯಿದಾ ಇಲ್ಲವೇ ಇಲ್ಲ ಅಥವಾ ಬೆರಳೆಣಿಕೆಯಷ್ಟು ಖಾಯಿದಾ ಸದಸ್ಯರಿದ್ದಾರೆ. ಈ ಸಮುದಾಯವು ಯಾವುದೇ ಪ್ರಭಾವಕ್ಕೆ ಒಳಗಾಗದೇ ಇರಲು ಕಾರಣವೇನಿರಬಹುದು?

ಪ್ರಧಾನಿ: ಮೊತ್ತಮೊದಲಿಗೆ ಈ ವಿಚಾರದಲ್ಲಿ ಮನಶಾಸ್ತ್ರೀಯ ಮತ್ತು ಧಾರ್ಮಿಕ ವಿಶ್ಲೇಷಣೆ ನಡೆಸಲು ನಾನು ಪ್ರಬುದ್ಧನಲ್ಲ. ಈ ಜಗತ್ತಿನಲ್ಲಿ ಮಾನವೀಯತೆಯನ್ನು ರಕ್ಷಿಸಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆ. ಪ್ರಶ್ನೆ ಏನೇ ಇರಲಿ, ಮಾನವೀಯತೆಯಲ್ಲಿ ನಂಬಿಕೆ ಇರಿಸುವವರು ಒಗ್ಗೂಡಬೇಕು. ಇದು ಒಂದು ಜನಾಂಗ, ಒಂದು ದೇಶದ ವಿರುದ್ಧದ ಬಿಕ್ಕಟ್ಟು ಅಲ್ಲ. ಮಾನವೀಯತೆಗೆ ಎದುರಾಗಿರುವ ಬಿಕ್ಕಟ್ಟು. ಆದ್ದರಿಂದ ನಾವು ಇದನ್ನು ಮಾನವೀಯತೆ ಮತ್ತು ಮಾನವೀಯತೆಯ ವಿರುದ್ಧದ ಹೋರಾಟ ಎಂದೇ ಪರಿಭಾವಿಸಬೇಕು. ಅದಕ್ಕಿಂತ ಬೇರೇನೂ ಅಲ್ಲ.

Write A Comment