Uncategorized

ಪತ್ರಕರ್ತರ ಚಟುವಟಿಕೆಗೆ ದಾಖಲೀಕರಣ ಅಗತ್ಯ : ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ ಬಿಡುಗಡೆಗೊಳಿಸಿ ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಗ್ರಾಮ ವಾಸ್ತವ್ಯ, ಬ್ರಾೃಂಡ್ ಮಂಗಳೂರು ಸಹಿತ ದ.ಕ.ಜಿಲ್ಲೆಯ ಪತ್ರಕರ್ತರ ಸಂಘದ ಚಟುವಟಿಕೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದು, ಇಂತಹ ಕಾರ್ಯಗಳ ದಾಖಲೀಕರಣ ಅಗತ್ಯ. ಈ ಹಿನ್ನೆಲೆಯಲ್ಲಿ ‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ಇ- ಪತ್ರಿಕೆ ಒಂದು ಉತ್ತಮ ವೇದಿಕೆಯಾಗಲಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ಇ- ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ‘ ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ ಸಹಿತ ಅನೇಕ ಸಾಧಕರನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ದಕ್ಷಿಣ ಕನ್ನಡದ ಮಾಧ್ಯಮ ಪ್ರತಿನಿಧಿಗಳಿಗೆ ಸಲ್ಲುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ ಕನ್ನಡದ ಪತ್ರಿಕೋದ್ಯಮಕ್ಕೆ ಮುನ್ನುಡಿ ಬರೆದ ‘ಮಂಗಳೂರು ಸಮಾಚಾರ‘ ದಿಂದ ‘ಮಂಗಳೂರು ಪ್ರೆಸ್‌ಕ್ಲಬ್ ಸಮಾಚಾರ’ ತನಕ ಪತ್ರಿಕಾ ರಂಗದಲ್ಲಿ ಮಂಗಳೂರು
ಐತಿಹಾಸಿಕ ಮಹತ್ವ ಹೊಂದಿದೆ ಎಂದರು.

ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮುಖ್ಯ ಅತಿಥಿಯಾಗಿದ್ದರು.

ದ.ಕ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

Comments are closed.