Uncategorized

ನಾಳೆ ಮೂಲ್ಕಿಯಲ್ಲಿ ಪ್ರಧಾನಿ ಮೋದಿ ಸಮಾವೇಶ – ಜಾಗತಿಕ ನಾಯಕನ ಸ್ವಾಗತಕ್ಕೆ ಕರಾವಳಿ ಸಜ್ಜು : 2.5 ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ.

Pinterest LinkedIn Tumblr

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂಲ್ಕಿ ಬಳಿ ಸಜ್ಜುಗೊಳಿಸಲಾದ ವಿಶಾಲ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಎಲ್ಲ ಸಿದ್ಧತೆ ನಡೆದಿದೆ.

ಜಾಗತಿಕ ನಾಯಕನ ಸ್ವಾಗತಕ್ಕೆ ಕರಾವಳಿಯ ಜನತೆ ತವಕದಿಂದ ಕಾಯುತ್ತಿದ್ದು, ಮೋದೀಜಿ ಅವರ ಪ್ರೇರಣಾದಾಯಕ ಮಾತುಗಳನ್ನು ಆಲಿಸಲು ಉತ್ಸಾಹದಿಂದ ಸಜ್ಜಾಗಿದ್ದಾರೆ. ಪ್ರಧಾನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರತಿ ಬೂತ್ ಮಟ್ಟದಲ್ಲಿ ಪೂರ್ವಭಾವಿ ಸಭೆಗಳು ನಡೆದಿವೆ. ಪ್ರತಿ ಬೂತ್‌ಗಳಿಂದ ಕಾರ್ಯಕರ್ತರು ಮತ್ತು ಮತದಾರರು ಆಗಮಿಸಲಿದ್ದಾರೆ.

ಈ ಬಾರಿ ಪ್ರಧಾನಿ ಮೋದಿ ಅವರ ಸಮಾವೇಶವನ್ನು ಗ್ರಾಮಾಂತರ ಪ್ರದೇಶದಲ್ಲಿ ನಡೆಸಲಾಗುತ್ತಿದ್ದು, ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಎರಡೂ ಜಿಲ್ಲೆಗಳ ಮಧ್ಯಭಾಗದಲ್ಲಿ ಕಾರ್ಯಕ್ರಮ ಆಯೋಜಿಸಿರುವುದರಿಂದ ದ.ಕ ಮತ್ತು ಉಡುಪಿ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಲು ಅನುಕೂಲವಾಗುತ್ತದೆ. ಈಗಾಗಲೇ ವೇದಿಕೆ ಮತ್ತು ಪೆಂಡಾಲ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ವಾಹನಗಳ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶ ಒದಗಿಸಲಾಗಿದೆ.

ಮಂಗಳವಾರ ಮಧ್ಯಾಹ್ನದೊಳಗೆ ಎಲ್ಲ ಕೆಲಸ ಪೂರ್ಣಗೊಂಡು ಇಡೀ ಪ್ರದೇಶವನ್ನು ಭದ್ರತಾ ಸಿಬ್ಬಂದಿಗಳಿಗೆ ಬಿಟ್ಟುಕೊಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಬೆಳಗ್ಗೆ 9 ಗಂಟೆಯೊಳಗೆ ಬನ್ನಿ:

ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆ ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದು, ಆಗಮಿಸುವ ಕಾರ್ಯಕರ್ತರು, ಸಾರ್ವಜನಿಕರು ಬೆಳಗ್ಗೆ 9 ಗಂಟೆಯೊಳಗೆ ಸಮಾವೇಶದ ಸ್ಥಳಕ್ಕೆ ಆಗಮಿಸುವಂತೆ ಸುದರ್ಶನ್ ಅವರು ಮನವಿ ಮಾಡಿದರು. ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಆಗಮಿಸುವ ಹೊತ್ತಿಗೆ ಸಮಾವೇಶದ ಪರಿಸರದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಹೀಗಾಗಿ ಪ್ರಧಾನಿ ಅವರು ಸ್ಥಳಕ್ಕೆ ಆಗಮಿಸುವ ಮೊದಲೇ ಸಾರ್ವಜನಿಕರು ಸಮಾವೇಶದ ಮೈದಾನದಲ್ಲಿರಬೇಕು ಎಂದು ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ.

ಪ್ರಧಾನಿಗೆ ಕುಡ್ಲದ ಆತಿಥ್ಯ:

ಪ್ರಧಾನಿ ನರೇಂದ್ರ ಮೋದಿ ಅವರು ಕರಾವಳಿಯ ತಿಂಡಿ ತಿನಿಸುಗಳನ್ನು ವಿಶೇಷವಾಗಿ ಇಷ್ಟಪಡುತ್ತಿದ್ದು, ಅವರಿಗಾಗಿ ಉಪ್ಪಿಟ್ಟು ಅವಲಕ್ಕಿ, ಮೂಡೆ, ನೀರ್‌ದೋಸೆ ಮುಂತಾದ ಎಲ್ಲ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ.

ಮೂರು ಕಡೆ ಹೆಲಿಪ್ಯಾಡ್:

ದಿಲ್ಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಬಜಪೆಯಿಂದ ಹೆಲಿಕಾಪ್ಟರ್ ಮೂಲಕ ಸಮಾವೇಶದ ಸ್ಥಳಕ್ಕೆ ಆಗಮಿಸುತ್ತಾರೆ. ಹೆಲಿಕಾಪ್ಟರ್‌ ಇಳಿಯಲು ಪಣಂಬೂರಿನ ಎನ್‌ಎಂಪಿಎ, ಸುರತ್ಕಲ್‌ನ ಎನ್‌ಐಟಿಕೆ, ಹಾಗೂ ಮೂಲ್ಕಿಯ ಸಸಮಾವೇಶದ ಸ್ಥಳದ ಪಕ್ಕದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

ಪ್ರಧಾನಿ ಮೋದಿ ಅವರ ಸಮಾವೇಶಗಳು ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಒಂದಕ್ಕಿಂತ ಒಂದು ಭರ್ಜರಿ ಯಶಸ್ಸು ಕಾಣುತ್ತಿದೆ. ಕಾರ್ಯಕರ್ತರು, ಮತದಾರರ ಉತ್ಸಾಹ, ಹುಮ್ಮಸ್ಸು ಇಮ್ಮಡಿಯಾಗುತ್ತಿದೆ. ಮೂಲ್ಕಿಯಲ್ಲಿ ಬುಧವಾರ ನಡೆಯುವ ಸಮಾವೇಶ ಈ ಭಾಗದಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಪಕ್ಷದ ಮುಖಂಡರು ಭರವಸೆ ವ್ಯಕ್ತಪಡಿಸಿದ್ದಾರೆ.

ಎರಡೂವರೆ ಲಕ್ಷಕ್ಕೂ ಹೆಚ್ಚಿನ ಜನರ ನಿರೀಕ್ಷೆ :

ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆದ್ದು, ಎರಡೂ ಜಿಲ್ಲೆಗಳ ಒಟ್ಟು 13 ಕ್ಷೇತ್ರಗಳ ಅಭ್ಯರ್ಥಿಗಳೂ ಹಾಜರಿರುತ್ತಾರೆ.
ಪ್ರಧಾನಿ ಮೋದಿ ಅವರು ಮೂಲ್ಕಿಯ ಸಮಾವೇಶದ ಬಳಿಕ ಅಂಕೋಲಕ್ಕೆ ತೆರಳಲಿದ್ದಾರೆ. ಬಳಿಕ ಕಿತ್ತೂರಿನಲ್ಲಿ ಸಾರ್ವಜನಿಕ ಸಮಾವೇಶ ನಡೆಲಿಸದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

Comments are closed.