Uncategorized

ಏಪ್ರಿಲ್, 2ರಂದು ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ರಜತಮಹೋತ್ಸವ : ಹೊಸ ಸೌಲಭ್ಯಗಳ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು : ದುಡಿಯುವ ಮನಸ್ಸು ಮತ್ತು ಸಾಧಿಸುವ ಛಲ ಇರುವ ಸಾವಿರಾರು ಕಿರು ಕಸುಬುದಾರರಿಗೆ ನೆರವಿನ ಹಸ್ತಚಾಚುವ ಮೂಲಕ ಜನಸಾಮಾನ್ಯರಿಗೂ ಬದುಕು ಕಟ್ಟುವ ಭರವಸೆ ನೀಡಿದ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇದೀಗ ರಜತ ಮಹೋತ್ಸವ ಸಂಭ್ರಮದಲ್ಲಿದೆ ಎಂದು ಸಂಘದ ಅಧ್ಯಕ್ಷರಾದ ಜೆ. ಕೃಷ್ಣ ಪಾಲೇಮಾರ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಿರಂತರ 25 ವರ್ಷಗಳ ಸಾರ್ಥಕ ಸಹಕಾರ ಸೇವಾ ಪರಂಪರೆಯನ್ನು ಮುಂದುವರಿಸಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ರಜತಮಹೋತ್ಸವ ಸವಿನೆನಪಿಗಾಗಿ ಮಂಗಳೂರಿನ ಜೆಪ್ಪು ಮೋರ್ಗನ್ಸ್ ಗೇಟ್ ರಾಮಕ್ಷತ್ರಿಯ ಮಂದಿರದ ಬಳಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ನೂತನ ಕಟ್ಟಡದಲ್ಲಿ ಹೊಸ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.

ಸಹಕಾರಿ ಸಂಘದ ಬೆಳ್ಳಿಹಬ್ಬದ ಸಂಭ್ರಮ ಹಾಗೂ ನೂತನ ಕಟ್ಟಡದಲ್ಲಿ ಸೌಲಭ್ಯಗಳ ಲೋಕಾರ್ಪಣೆ ಸಮಾರಂಭವು ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೇಮಾರ್ ಅಧ್ಯಕ್ಷತೆಯಲ್ಲಿ ದಿನಾಂಕ 02.-04-.2023ರಂದು ಜರಗಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದ ಕ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಡಿ. ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಜಯಾನಂದ ಅಂಚನ್, ನಿಟ್ಟೆ ವಿಶ್ವ ವಿದ್ಯಾಲಯದ ಸಹಕುಲಪತಿಗಳಾದ ಡಾ. ಶಾಂತಾರಾಮ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ) ಇದರ ಅಧ್ಯಕ್ಷರಾದ ಶ್ರೀ ಎಂ.ಎನ್. ರಾಜೇಂದ್ರ ಕುಮಾರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೊ, ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀ ಹೆಚ್.ಎನ್. ರಮೇಶ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಭಾನುಮತಿ ಪಿ.ಎಸ್. ಭಾಗವಹಿಸಲಿದ್ದಾರೆ ಎಂದು ಪಾಲೆಮಾರ್ ವಿವರ ನೀಡಿದರು.

ಸಮಾಜದ ಉನ್ನತಿ ಮತ್ತು ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುವ ಮಹತ್ತರ ಉದ್ದೇಶದಿಂದ ಮಾಜಿ ಸಚಿವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರ ಮಾರ್ಗದರ್ಶನದಲ್ಲಿ ೧೯೯೭ರ ಡಿಸೆಂಬರ್ ೭ರಂದು
ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ವನ್ನು ಸ್ಥಾಪಿಸಲಾಯಿತು.

ವೃತ್ತಿ ಬದುಕಿನ ಆಸರೆ ಅರಸುವ ಶ್ರೀಸಾಮಾನ್ಯರಿಗೆ ಸಂಘವು ದಾರಿದೀಪವಾಗಿದೆ. ೨೫೦೦ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿಗೆ ಸಾಲ ಸೌಲಭ್ಯವನ್ನು ಒದಗಿಸಿ ಮಾಲಕರನ್ನಾಗಿ ರೂಪಿಸಿದ ಸಂಘವು ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಮುಂತಾದ ಸಾವಿರಾರು ಸಣ್ಣಪುಟ್ಟ ವೃತ್ತಿಬಾಂಧವರಿಗೆ ಮೂಲ ಬಂಡವಾಳಕ್ಕಾಗಿ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದೆ. ಸಾಲ ಸಹಕಾರದೊಂದಿಗೆ ಗ್ರಾಹಕರಿಗೆ ಸೂಕ್ತ ವೃತ್ತಿ ಮಾರ್ಗದರ್ಶನ ಕೂಡಾ ಕಾಲಕಾಲಕ್ಕೆ ನೀಡಲಾಗುತ್ತಿದೆ.

ಸಂಘವು ಉಚಿತ ಕಣ್ಣು ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮತ್ತು ಹಲವು ಸಂಘ ಸಂಸ್ಥೆಗಳಿಗೆ ಸಹಾಯಧನ ನೀಡುವುದರ ಮೂಲಕ ಸಮಾಜ ಸೇವೆಗೂ ಬದ್ಧವಾಗಿದೆ.

ಇಂದು ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಮೋರ್ಗನ್ಸ್ ಗೇಟ್‌ನಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ಹಂಪನಕಟ್ಟೆ, ಕಾವೂರು, ಕಾಟಿಪಳ್ಳ-ಕೈಕಂಬ ಮತ್ತು ಉಳ್ಳಾಲ ಮುಂತಾದೆಡೆ ೫ ಶಾಖಾ ಕಚೇರಿಗಳನ್ನು ಹೊಂದಿದೆ.

ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ. ದಿನೇಶ್ ರಾವ್, ನಿರ್ದೇಶಕರುಗಳಾದ ರಾಮಚಂದ್ರ ಕೆ.ಎಸ್., ಜೆ.ಕೆ.ರಾವ್, ಪಿ. ಬಾಬು, ಕೆ.ಎಸ್. ರಂಜನ್, ಶ್ರೀಮತಿ ವಾರಿಜ ಕೆ., ಡಾ. ಎಚ್. ಪ್ರಭಾಕರ್, ಡಾ. ಮಂಜುಳಾ ಎ. ರಾವ್, ಕೆ. ರವೀಂದ್ರ, ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎ. ಉಪಸ್ಥಿತರಿದ್ದರು.

Comments are closed.