Uncategorized

ಗ್ರಾ.ಪಂ. ನೌಕರರ ಬೇಡಿಕೆ ಈಡೇರಿಸದಿದ್ದರೆ ಫೆ.6ರಿಂದ ರಾಜ್ಯವ್ಯಾಪಿ ಪ್ರತಿಭಟನೆ : ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ

Pinterest LinkedIn Tumblr

ಮಂಗಳೂರು: “ರಾಜ್ಯದ ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೆಗೇರಿಸ ಬೇಕು ಮತ್ತು ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ಮುಂದಾಗಬೇಕು. ಸರಕಾರ 15 ದಿನಗಳೊಳಗಾಗಿ ಈ ಕುರಿತು ತೀರ್ಮಾನ ತೆಗೆದುಕೊಳ್ಳದಿದ್ದರೆ ಫೆ.6ರಿಂದ ರಾಜ್ಯದ ಸಮಸ್ತ ಪಂಚಾಯತ್ ನೌಕರರನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತೇವೆ” ಎಂದು ರಾಜ್ಯ ಗ್ರಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೆಳ್ಮ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.

“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಾದ ನಾವುಗಳು ಇಲಾಖೆಯ ಅಭಿವೃದ್ಧಿಗೆಕಳೆದ ಮೂರು  ದಶಕಗಳಿಂದ ಹಗಲಿರುಳು ದುಡಿಯುತ್ತಿದ್ದು ಬಡ ಗ್ರಾಮ ಪಂಚಾಯತ್ ನೌಕರರಾದ ಬಿಲ್ ಕಲೆಕ್ಟರ್‌, ಕ್ಲರ್ಕ್ ಅಥವಾ ಡಿಇಓ, ಡಾಟಾ ಎಂಟ್ರಿ ಅಪರೇಟರ್, ವಾಟರ್ ಮೆನ್, ಪಂಪ್ ಚಾಲಕ, ಶುಚಿತ್ವ ನೌಕರರು ಹಾಗೂ ಅಟೆಂಡರ್ ಗಳು ಭವಿಷ್ಯ ನಿಧಿ ಇಲ್ಲದೇ ಆರೋಗ್ಯ ಭದ್ರತೆ ಇಲ್ಲದೇ ಸರಿಯಾದ ವೇತನ ಶ್ರೇಣಿ ಇಲ್ಲದೇ, ಉದ್ಯೋಗ ಭದ್ರತೆ ಇಲ್ಲದೇ, ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೇ ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ.

ಪಂಚಾಯತ್ ನೌಕರರಿಗೆ ಸೂಕ್ತ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡದೇ ಕೇವಲ ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ಹಗಲಿರುಳುದುಡಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿನ ರಾಜಕೀಯ ಒತ್ತಡ, ಮೇಲಾಧಿಕಾರಿಗಳ ಒತ್ತಡದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರಾದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪಂಚಾಯತ್ ನೌಕರರೇ ಸೇರಿ 19-12-2022 ರಿಂದ ಬೆಳಗಾವಿ ಸುವಣ ಸೌಧದ ಎದುರು ಗ್ರಾಮೀಣ ಭಾಗದಲ್ಲಿನ ಎಲ್ಲಾ ಕಾರ್ಯಗಳನ್ನು ನಿಲ್ಲಿಸಿ ರಾಜ್ಯ ಮಟ್ಟದ ಬೃಹತ್ ಹೋರಾಟ ನಡೆಸಿದ್ದೇವೆ” ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸೂಚನೆಯಂತೆ ಸಚಿವರ ಗೋವಿಂದ ಕಾರಜೋಳರವರು ಆಗಮಿಸಿ ಮನವಿಯಲ್ಲಿ ನೀಡಲಾದ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರಕಾರದ ಪರವಾಗಿ ಆಶ್ವಾಸನೆ ನೀಡಿರುತ್ತಾರೆ. ವಿಪಕ್ಷ ನಾಯಕ ಸಿದ್ಧರಾಮಯ್ಯರವರ ಸೂಚನೆಯಂತೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಗಮಿಸಿ ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆಗೆ ಹಾಕಿ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿರುತ್ತಾರೆ.

ಆದ್ದರಿಂದ ಪಂಚಾಯತ್ ನೌಕರರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಗದೇ ಇದ್ದರೆ ಬೆಂಗಳೂರಿನಲ್ಲಿ ರಾಜ್ಯದ 5955 ಗ್ರಾಮ ಪಂಚಾಯತಿಗಳ ಎಲ್ಲಾ 65000ಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರನ್ನು ಸೇರಿಸಿ ಹೋರಾಟವನ್ನು ನಡೆಸುತ್ತೇವೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್. ಕುಲಾಲ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ದ. ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧರ ಮೂಡಬಿದ್ರೆ, ದ. ಕ. ಜಿಲ್ಲಾಧ್ಯಕ್ಷ ಅಶ್ರಫ್, ಜಿಲ್ಲಾ ಮಹಿಳಾ ಹೋರಾಟ ಸಮಿತಿ ಅಧ್ಯಕ್ಷ ನಯನಾ ಮೂಡಬಿದ್ರೆ, ಪ್ರಿಯಾ ಉಪಸ್ಥಿತರಿದ್ದರು.

Comments are closed.