Uncategorized

ಬೀಚ್‍ಗಳಲ್ಲಿ ಮೈಮರೆತು ಜೀವಕ್ಕೆ ಅಪಾಯ ತರುವ ಪ್ರವಾಸಿಗರ ರಕ್ಷಣೆಗೆ ನಮ್ಮ ಆದ್ಯತೆ : ಡಾ.ಚೂಂತಾರು

Pinterest LinkedIn Tumblr

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆ ತನ್ನ ಮನಮೋಹಕ ಬೀಚ್‍ನಿಂದಾಗಿ ಬಹಳಷ್ಟು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಬೀಚ್‍ಗಳಲ್ಲಿ ಪ್ರವಾಸಿಗಳು ಮೈಮರೆತು ಜೀವಕ್ಕೆ ಅಪಾಯ ಆಹ್ವಾನಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಪ್ರವಾಸಿಗರನ್ನು ಎಚ್ಚರಿಸಿ, ರಕ್ಷಿಸುವ ಹೊಣೆಗಾರಿಕೆ ಜಿಲ್ಲಾ ಗೃಹರಕ್ಷಕ ಮತ್ತು ಪೌರರಕ್ಷಣಾ ತಂಡಕ್ಕೆ ಇದೆ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕ ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು.

ಅವರು ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ವತಿಯಿಂದ ಕಛೇರಿಯಲ್ಲಿ ಉಳ್ಳಾಲ ಗೃಹರಕ್ಷಕ ದಳದ ಗೃಹರಕ್ಷಕ ಪ್ರಸಾದ್ ಸುವರ್ಣ ರವರನ್ನು ಸನ್ಮಾನಿಸಿ ಮಾತನಡಿದರು.

ಮಾರ್ಚ್ 14 ರಂದು ಉಳ್ಳಾಲ ಬೀಚ್‍ನಲ್ಲಿ ಸಂಜೆ ಹೊತ್ತು ಹಾಸನದ ವ್ಯಕ್ತಿ ತನ್ನ ಮಗಳೊಂದಿಗೆ ಆಟವಾಡುತ್ತಿದ್ದಾಗ ದೊಡ್ಡ ಅಲೆಯೊಂದು 4 ವರ್ಷದ ಬಾಲಕಿಯನ್ನು ತನ್ನಡೆ ಸೆಳೆದುಕೊಂಡಿತ್ತು. ಅಲ್ಲೇ ಸಮುದ್ರತೀರದಲ್ಲಿ ಇದನ್ನು ಗಮನಿಸುತ್ತಿದ್ದ ಉಳ್ಳಾಲ ಗೃಹರಕ್ಷಕ ದಳದ ಗೃಹರಕ್ಷಕ ಪ್ರಸಾದ್ ಸುವರ್ಣ (ಮೆ. ನಂ. 297) ಅವರು ತನ್ನ ಜೀವದ ಹಂಗನ್ನು ತೊರೆದು ಸಮುದ್ರಕ್ಕೆ ಹಾರಿ ಮಗುವನ್ನು ರಕ್ಷಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ ಎಂದರು.

ಅವರ ಹೆಸರನ್ನು ವಿಶೇಷ ನಗದು ಬಹುಮಾನಕ್ಕೆ ಆರಕ್ಷಕ ಮಹಾನಿರ್ದೇಶಕರು, ಗೃಹರಕ್ಷಕದಳದ ಮಹಾ ಸಮಾದೇಷ್ಟರು ಮತ್ತು ನಿರ್ದೇಶಕರು ಪೌರರಕ್ಷಣೆ ಬೆಂಗಳೂರು ಅವರ ಕಛೇರಿಗೆ ಶಿಫಾರಸು ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಗೃಹರಕ್ಷಕದಳ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದು, ಬೀಚ್‍ಗಳಿಗೆ ಬರುವ ಎಲ್ಲಾ ಪ್ರವಾಸಿಗರ ರಕ್ಷಣೆಗೆ ಕಟಿಬದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಛೇರಿ ಅಧೀಕ್ಷಕರಾದ ರತ್ನಾಕರ್, ಉಳ್ಳಾಲ ಘಟಕದ ಗೃಹರಕ್ಷಕರಾದ ಸುನಿಲ್ ಕುಮಾರ್, ಸುನಿಲ್ ಪೂಜಾರಿ, ದಿವ್ಯ ಪೂಜಾರಿ, ದಿವಾಕರ್, ಸುಲೋಚನಾ, ಜಯಲಕ್ಷ್ಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.