Uncategorized

ಅತ್ತಾವರ ಶಿವಾನಂದ ಕರ್ಕೇರಾ ಅವರ ಕ್ರಿಯಾಶೀಲತೆ ಎಳೆಯರಿಗೆ ಮಾದರಿ: ಹರಿಕೃಷ್ಣ ಪುನರೂರು

Pinterest LinkedIn Tumblr

ಮಂಗಳೂರು: ‘ಸಾಹಿತ್ಯದ ಮೇಲಿನ ಆಸಕ್ತಿಯ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದ ಎ.ಶಿವಾನಂದ ಕರ್ಕೇರಾ ಅವರದು ಅಪರೂಪದ ವ್ಯಕ್ತಿತ್ವ . ಎಪ್ಪತ್ತೆರಡರ ಹರೆಯದಲ್ಲೂ ಎದ್ದು ತೋರುತ್ತಿದ್ದ ಅವರ ಕ್ರಿಯಾಶೀಲತೆ ಎಳೆಯರಿಗೆ ಮಾದರಿಯಾದುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಹರಿಕಥಾ ಪರಿಷತ್ತಿನ ಸಹಯೋಗದೊಂದಿಗೆ ಅಗಲಿದ ಹಿರಿಯ ಕವಿ, ನಾಟಕಕಾರ ಮತ್ತು ಯಕ್ಷಾಂಗಣದ ಉಪಾಧ್ಯಕ್ಷ ಅತ್ತಾವರ ಶಿವಾನಂದ ಕರ್ಕೇರಾ ಅವರ ಗೌರವಾರ್ಥ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ ‘ಸರಳವಾದರೂ ಸತ್ವಯುತವಾದ ಬರವಣಿಗೆಯ ಮೂಲಕ ಗುರುತಿಸಿಕೊಂಡಿದ್ದ ದಿ.ಕರ್ಕೇರಾರು ಎಲ್ಲ ಸ್ತರದ ಜನರಿಗೂ ಬೇಕಾದವರಾಗಿದ್ದರು. ಅವರ ಬರಹಗಳನ್ನೆಲ್ಲಾ ಒಂದೇ ಸಂಪುಟದಲ್ಲಿ ಸಂಗ್ರಹಿಸಿ ಪ್ರಕಟಿಸಿದರೆ ಅವರನ್ನು ಶಾಶ್ವತವಾಗಿ ನೆನಪಿಸಿಕೊಂಡಂತಾಗುವುದು’ ಎಂದರು. ಹರಿಕಥಾ ಪರಿಷತ್ತಿನ ಅಧ್ಯಕ್ಷ ಮಹಾಬಲ ಶೆಟ್ಟಿ ಕೂಡ್ಲು ಪರಿಷತ್ತಿನ ಪರವಾಗಿ ಶ್ರದ್ದಾಂಜಲಿ ಸಲ್ಲಿಸಿದರು.

ತುಂಬು ಜೀವನೋತ್ಸಾಹಿ :

ನುಡಿ ನಮನ ಸಲ್ಲಿಸಿ ಮಾತನಾಡಿದ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಶಿವಾನಂದ ಕರ್ಕೇರಾರು ಸ್ವಂತ ಪರಿಶ್ರಮದಿಂದ ಮೇಲೆ ಬಂದ ಸಾಧಕ. ಇಳಿವಯಸ್ಸಿನಲ್ಲಿಯೂ ಅದಮ್ಯ ಆತ್ಮವಿಶ್ವಾಸ ಹೊಂದಿದ್ದ ಅವರು ತುಂಬು ಜೀವನೋತ್ಸಾಹಿ. ತುಳು-ಕನ್ನಡ ಸಾಹಿತಿಯಾಗಿ, ಪ್ರಶಸ್ತಿವಿಜೇತ ನಾಟಕಕಾರರಾಗಿ, ಗೋಕರ್ಣನಾಥ ಬ್ಯಾಂಕಿನ ಅಧ್ಯಕ್ಷರಾಗಿ, ತುಳು ಅಕಾಡೆಮಿ ಸದಸ್ಯರಾಗಿ , ತುಳುನಾಟಕ ಒಕ್ಕೂಟದ ಉಪಾಧ್ಯಕ್ಷರಾಗಿ, ಸ್ವೀಕಾರ್ ಸಾಹಿತ್ಯ-ಸಾಂಸ್ಕೃತಿಕ ಕೂಟದ ಸಂಸ್ಥಾಪಕರಾಗಿ ಅವರು ಮಾಡಿದ ಕೆಲಸ ಅನ್ಯಾದೃಶ. ತುಳು ಸ್ನಾತಕೋತ್ತರ ಪದವಿಯ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಅಂತಿಮ ಪರೀಕ್ಷೆ ಬರೆದಿದ್ದ ಅವರು ಫಲಿತಾಂಶ ಬರುವ ಮುನ್ನವೇ ಅಂತಿಮ ಯಾತ್ರೆಗೆ ಸಂದಿದ್ದು ದುರದೃಷ್ಟಕರ’ ಎಂದರು.

ಯಕ್ಷಾಂಗಣದ ಕಾರ್ಯದರ್ಶಿ ಹಾಗೂ ಹರಿಕಥಾ ಪರಿಷತ್ತಿನ ಸಂಚಾಲಕ ತೋನ್ಸೆ ಪುಷ್ಕಳ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿನ್ನಿಗೋಳಿ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕದ್ರಿ ಶ್ರೀಕೃಷ್ಣ ಯಕ್ಷಸಭಾದ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ಮತ್ತು ಹರಿಕಥಾ ಪರಿಷತ್ತಿನ ಕಾರ್ಯದರ್ಶಿ ಡಾ.ಎಸ್.ಪಿ.ಗುರುದಾಸ್ ಮೃತರ ಗುಣಗಾನ ಮಾಡಿದರು.

ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಮಧುಸೂದನ ಅಯ್ಯರ್, ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು, ಯಕ್ಷಾಂಗಣದ ಮಹಿಳಾ ಪ್ರತಿನಿಧಿ ನಿವೇದಿತಾ ಎನ್.ಶೆಟ್ಟಿ, ಸದಸ್ಯರಾದ ಸಿದ್ಧಾರ್ಥ ಅಜ್ರಿ, ನಾರಾಯಣರಾವ್, ಮಾಧವ ರಾವ್ ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಗಣ್ಯರಿಗೆ ಸಂತಾಪ :

ಇದೇ ಸಂದರ್ಭದಲ್ಲಿ ಈಚೆಗೆ ನಿಧನರಾದ ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ, ಮೀನುಗಾರ ಮುಖಂಡ ಲೋಕನಾಥ ಬೋಳೂರು, ನಮ್ಮಕುಡ್ಲ ಸಂಸ್ಥಾಪಕಿ ಲಕ್ಷ್ಮೀ ಬಿ.ಕರ್ಕೇರ ಮತ್ತು ರಂಗನಟ ಮಾಧವ ಜೆಪ್ಪುಪಟ್ಣ ಮೊದಲಾದ ಗಣ್ಯರ ಅಗಳುವಿಕೆಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಿ, ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Comments are closed.