Uncategorized

ಪಾಕ್ ನ ಐಎಸ್‍ಐಗೆ ಮಾಹಿತಿ ನೀಡುತ್ತಿದ್ದ ಭಾರತೀಯ ವಾಯುಪಡೆ ಅಧಿಕಾರಿ ಅರೆಸ್ಟ್

Pinterest LinkedIn Tumblr

ನವದೆಹಲಿ: ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ-ಐಎಸ್‍ಐಗಾಗಿ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಗೂಢಚರ್ಯೆ ಮಾಡುತ್ತಿದ್ದ ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನಕ್ಕೆ ಅತ್ಯಂತ ರಹಸ್ಯ ದಾಖಲೆಪತ್ರಗಳನ್ನು ಒದಗಿಸಿದ ಆರೋಪದ ಮೇಲೆ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾರ್ ಅವರನ್ನು ದೆಹಲಿ ಪೊಲೀಸ್‍ನ ವಿಶೇಷ ಘಟಕದ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಭಾರತೀಯ ವಾಯು ಪಡೆಯ ಕಾರ್ಯಾಚರಣೆಗಳ ವಿವರ ಒಳಗೊಂಡ ದಾಖಲೆಪತ್ರಗಳನ್ನು ಐಎಸ್‍ಐಗೆ ಕ್ಯಾಪ್ಟನ್ ಅರುಣ್ ಸೋರಿಕೆ ಮಾಡಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಸಂಬಂಧ ಅಧಿಕಾರಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

ಜ.31 ರಂದು ಅರುಣ್ ಮರ್ವಾಹ ಅವರ ಸ್ಮಾರ್ಟ್‌ಫೋನ್‌ ಅನ್ನು ವಶಕ್ಕೆ ಪಡೆದಿದ್ದ ವಾಯುಪಡೆ ಗುಪ್ತಚರ ಸಂಸ್ಥೆ ತನಿಖೆಗೆ ಒಳಪಡಿಸಿತ್ತು. ನಂತರ ಮಾಹಿತಿ ಹಂಚಿಕೊಂಡದ್ದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು..

ಅಧಿಕೃತ ರಹಸ್ಯ ಕಾಯ್ದೆಯಡಿ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ದೆಹಲಿಯ ವಿಶೇಷ ಪೊಲೀಸ್‌ ಆಯುಕ್ತ ಎಂ.ಎಂ. ಒಬೆರಾಯ್‌ ತಿಳಿಸಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಖಾತೆಗಳನ್ನು ಒಳಗೊಂಡಿದ್ದ ಐಎಸ್‌ಐನ ಮಹಿಳಾ ಏಜೆಂಟ್‌ಗಳು ಅರುಣ್ ಮರ್ವಾಹ ಅವರಿಗೆ ಫೇಸ್‌ಬುಕ್‌ ಮೂಲಕ ಲೈಂಗಿಕ ಸಂದೇಶಗಳನ್ನು ಕಳುಹಿಸುವ ಮೂಲಕ ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕುವಂತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ವಾಯುಪಡೆಯ ಅಧಿಕಾರಿಗಳು ದೆಹಲಿಯ ಲೋಧಿ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರುಣ್‌ ಅವರ ಮೊಬೈಲ್‌ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೊಬೈಲ್‌ನಲ್ಲಿ ಕೆಲವು ಆಕ್ಷೇಪಾರ್ಹ ಸಂಭಾಷಣೆ ಮತ್ತು ಚಿತ್ರಗಳು ಕಂಡು ಬಂದಿವೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.