ಬೆಂಗಳೂರು, ಜೂ. ೨೮- ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಇನ್ನು ಮೂರು ತಿಂಗಳಲ್ಲಿ ಜಾಗ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ನಡೆದಿರುವ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓಗಳು ಹಾಗೂ ಪ್ರಾದೇಶಿಕರ ಆಯುಕ್ತರ ಎರಡನೇ ದಿನದ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಜಿಲ್ಲೆಗಳಲ್ಲಿ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಜಾಗ ನೀಡಿಲ್ಲ. ಆದಷ್ಟು ಬೇಗ ಜಾಗ ನೀಡಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಬರುವ ನವೆಂಬರ್ ತಿಂಗಳಲ್ಲಿ ಮತ್ತೆ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಅಷ್ಟರಲ್ಲಿ ಹಾಸ್ಟೆಲ್‌ಗಳಿಗೆ ಜಾಗ ನೀಡಿರಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.
ಸೇವಾ ಪುಸ್ತಕದಲ್ಲಿ ನಮೂದು
ಅರಣ್ಯ ಹಕ್ಕು ಕಾಯ್ದೆ ಅರ್ಜಿಗಳ ವಿಲೇವಾರಿಯಲ್ಲೂ ವಿಳಂಬವಾಗುತ್ತಿರುವುದಕ್ಕೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಾಗಲೇ ತಿರಸ್ಕರಿಸಿರುವ ಅರ್ಜಿಗಳ ಮರುಪರಿಶೀಲನೆಗೆ ಆದೇಶಿಸಿದರು. ಕಾಲಮಿತಿಯೊಳಗೆ ಈ ಅರಣ್ಯ ಹಕ್ಕು ಕಾಯ್ದೆಯ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಯನ್ನು ಮುಖ್ಯಮಂತ್ರಿ ನೀಡಿದರು.
ಅರ್ಜಿ ವಿಲೇವಾರಿ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ನಿರ್ಲಕ್ಷ್ಯ ತೋರಿದರೆ ಇಂತಹ ಡಿಸಿಗಳ ವಿರುದ್ಧ ಶಿಸ್ತು ಕ್ರಮದ ಜತೆಗೆ ಸೇವಾಪುಸ್ತಕದಲ್ಲೂ ನಮೂದು ಮಾಡುವ ಎಚ್ಚರಿಕೆಯನ್ನು ಮುಖ್ಯಮಂತ್ರಿ ನೀಡಿದರು.
ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. ತಾಂತ್ರಿಕ ಆಡಚಣೆ ಎಂದು ಜಾರಿಕೊಳ್ಳಬೇಡಿ. ಸಹಾಯ ಮಾಡಲು ಹೃದಯವಂತಿಕೆ ಬೇಕು ಎಂದು ಅಧಿಕಾರಿಗಳಿಗೆ ಮಾತಿನ ಬಿಸಿ ಮುಟ್ಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಏನೇ ಆಡಚಣೆ ಇದ್ದರೂ ಕಂದಾಯ ಅರಣ್ಯ, ಕಾನೂನು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪಷ್ಟೀಕರಣ ಪಡೆದು ಹಕ್ಕುಪತ್ರ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.
Comments are closed.