Uncategorized

ಅಡ್ಡೂರು : ವಿಎಚ್‌ಪಿ ಮುಖಂಡ ಜಗದೀಶ್ ಶೇಣವ ಕಾರಿಗೆ ಕಲ್ಲೂ ತೂರಾಟ

Pinterest LinkedIn Tumblr

ಮಂಗಳೂರು: ಪೊಳಲಿ ಸಮೀಪದ ಅಡ್ಡೂರು ಮತಗಟ್ಟೆಯಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ಕಾರಿಗೆ ಕಲ್ಲುತೂರಾಟ ನಡೆಸಿ ಕಾರಿನ ಗಾಜಿಗೆ ಹಾನಿಗೊಳಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದ್ದು,. ಘಟನೆಯಿಂದ ಸ್ವಲ್ಪಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.

ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಗುರುಪುರ ಜಿ.ಪಂ. ಬಿಜೆಪಿ ಅಭ್ಯರ್ಥಿ ಹರೀಶ್ ಮೂಡುಶೆಡ್ಡೆ ಜೊತೆಗೆ ವಿಹಿಂಪ ಮುಖಂಡ ಜಗದೀಶ್ ಶೇಣವ ಅವರು ಇಂದು ಬೆಳಿಗ್ಗೆ ೧೧ರ ಸುಮಾರಿಗೆ ಕಾರಿನಲ್ಲಿ ಗುರುಪುರ ಜಿ.ಪಂ., ತಾಪಂ., ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಾದ ಅಡ್ಡೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಅಡ್ಡೂರು ಮತಗಟ್ಟೆಯ ಸ್ವಲ್ಪ ದೂರದಲ್ಲಿ ದುಷ್ಕರ್ಮಿಗಳು ಕಾರಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಕಲ್ಲೇಟಿನ ರಭಸಕ್ಕೆ ಕಾರಿನ ಗಾಜಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾವಣೆಗೊಂಡಿದ್ದು, ಸ್ವಲ್ಪ ಹೊತ್ತು ವಾಗ್ವಾದ ನಡೆದಿತ್ತು. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಶಮನಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಅಡ್ಡೂರು ಮತಗಟ್ಟೆ ಅತ್ಯಂತ ಕೋಮುಸೂಕ್ಷ್ಮ ಮತಗಟ್ಟೆ ಎಂಬ ಕುಖ್ಯಾತಿ ಪಡೆದಿದ್ದು, ಈ ಹಿಂದೆಯೂ ಕಲ್ಲುತೂರಾಟ, ವಾಗ್ವಾದದಂತಹ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ.

Write A Comment