Uncategorized

ಈಜಾಡುವ ಬನ್ನಿ…

Pinterest LinkedIn Tumblr

psmec10swim1

-ಕೆ.ಎಂ.ಸತೀಶ್‌ ಬೆಳ್ಳಕ್ಕಿ
ದಿನೇ ದಿನೇ ಏರುತ್ತಿರುವ ತಾಪಮಾನಕ್ಕೆ ಮೈಯೊಡ್ಡುತ್ತಿರುವ ಬೆಂಗಳೂರಿಗರೀಗ ಈಜುಕೊಳಗಳತ್ತ ಮುಖ ಮಾಡುತ್ತಿದ್ದಾರೆ. ಮನಸ್ಸು ಹಾಗೂ ದೇಹಕ್ಕೆ ತಂಪೆರೆಯುವ ನೀರಿನ ತೆಕ್ಕೆಯಲ್ಲಿ ಬೀಳುವವರು ಹೆಚ್ಚಾದ್ದರಿಂದ ತರಬೇತುದಾರರಿಗೆ ವಿಪರೀತ ಬೇಡಿಕೆ ಬಂದಿದೆ. ಈ ಕುರಿತ ಲೇಖನ ಇಲ್ಲಿದೆ.

ದಿನಕಳೆದಂತೆ ಬಿಸಿಲಿನ ತಾಪ ತಾರಕಕ್ಕೇರುತ್ತಿದೆ. ಬೇಸಿಗೆಯಲ್ಲಿ ಮನೆ ಒಳಗಿದ್ದರೂ, ಹೊರಗಿದ್ದರೂ ಧಗೆ ಸಹಿಸುವುದು ಅಸಾಧ್ಯ.  ಫ್ಯಾನ್‌ ಇಲ್ಲದೆ ರಾತ್ರಿ ಮಲಗುವುದಕ್ಕೂ ಆಗುವುದಿಲ್ಲ. ಸೊಳ್ಳೆಗಳು ಇದ್ದರಂತೂ ನಿದ್ದೆ ಮಾಡುವುದು ಕನಸಿನ ಮಾತೇ ಸರಿ. ಬೇಸಿಗೆಯಲ್ಲಿ ಮೈ ಮೇಲಿರುವ ಬಟ್ಟೆಯೂ ಕಿರಿಕಿರಿ ಅನಿಸುತ್ತದೆ. ದೇಹದ ತಾಪ ತಗ್ಗಿಸುವ ತಣ್ಣೀರು ಮೈಮೇಲೆ ಬಿದ್ದರೆ ಹಾಯೆನಿಸುತ್ತದೆ. ಅದರಲ್ಲೂ ಈಜುಕೊಳ್ಳಕ್ಕೆ ಹಾರಿದರೆ ದೇಹ, ಮನಸ್ಸು ಎರಡೂ ಪ್ರಫುಲ್ಲಗೊಳ್ಳುತ್ತವೆ.

ನಗರದಲ್ಲಿ ತಾಪಮಾನ ಅಧಿಕಗೊಂಡಿರುವುದರಿಂದ ಹೆಚ್ಚಿನ ಜನರು ಈಗ ಈಜುಕೊಳದತ್ತ ಮುಖ ಮಾಡುತ್ತಿದ್ದಾರೆ. ಮೊದಲೆಲ್ಲಾ ಮೇಲ್ವರ್ಗದವರಷ್ಟೇ ಎಡತಾಕುತ್ತಿದ್ದ ಈಜುಕೊಳಗಳಲ್ಲಿ ಈಗ ಮಧ್ಯಮ ವರ್ಗದವರೂ ಕಾಣಿಸಿ ಕೊಳ್ಳುತ್ತಿದ್ದಾರೆ. ಬೆರಳೆಣಿಕೆಯಷ್ಟಿದ್ದ ಈಜುಕೊಳಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಇದಕ್ಕೆ ಕಾರಣ. ಇತ್ತ, ಬೇಸಿಗೆಯಲ್ಲಿ ಸ್ವಿಮ್ಮಿಂಗ್‌ ಹೇಳಿಕೊಡುವ ಮಹಿಳಾ ಕೋಚ್‌ಗಳಿಗೆ ವಿಪರೀತ ಬೇಡಿಕೆ ಕುದುರಿದೆ. ಇನ್ನೊಂದೆಡೆ ಈಜುಕೊಳ ಸಂಭಾಳಿಸುವವರಿಗೆ ನೀರಿನ ಅಭಾವವೂ ಕಾಡುತ್ತಿದೆ.

ನೀರಿನತ್ತ ನೀರೆಯರ ಚಿತ್ತ
ಈಗ ಬೇಸಿಗೆಯಾದದ್ದರಿಂದ ಮಧ್ಯಮ ವರ್ಗದ ಯುವತಿಯರು, ಗೃಹಿಣಿಯರೂ ಈಜುಡುಗೆ ಧರಿಸಿ ನೀರಿಗಿಳಿಯುವ ಧೈರ್ಯ ತೋರುತ್ತಿದ್ದಾರೆ. ಮೊದಲ ಬಾರಿಗೆ ನೀರಿಗಿಳಿಯುವ ಆಸೆ ಹೊತ್ತ ಗೃಹಿಣಿಯರು ತಮ್ಮ ಮನಸ್ಸಿನಲ್ಲಿ ಅಡಗಿರುವ ಗೊಂದಲ ಹಾಗೂ ಸಂಕೋಚ ನಿವಾರಿಸಿಕೊಳ್ಳಲು ಈಜುಕೊಳದವರನ್ನು ಸಂಪರ್ಕಿಸುತ್ತಿದ್ದಾರೆ. ತಮ್ಮಲ್ಲಿನ ಗೊಂದಲಗಳಿಗೆ ಸರಿಯಾದ ಉತ್ತರ ಸಿಕ್ಕ ನಂತರವಷ್ಟೇ ಅವರು ಈಜು ಕಲಿಯುವ ಮನಸ್ಸು ಮಾಡುತ್ತಿದ್ದಾರೆ.

‘ಎಲ್ಲ ವರ್ಗದವರೂ ಈಗ ಈಜು ಕಲಿಯುವ ಆಸಕ್ತಿ ತೋರುತ್ತಿದ್ದಾರೆ. ಬೇಸಿಗೆಯಲ್ಲಿ ತಾಪಮಾನ ಹೆಚ್ಚಿರುವುದರಿಂದ ದೇಹದ ಬೇಗೆ ತಣಿಸಿಕೊಳ್ಳಲು ಹೆಚ್ಚಿನ ಜನರು ಈಜುಕೊಳಕ್ಕೆ ಬರುತ್ತಾರೆ. ಈಜು ಕಲಿಯುವವರ ಸಂಖ್ಯೆ ಮಾಮೂಲಿ ದಿನಗಳಿಗಿಂತ ಬೇಸಿಗೆಯಲ್ಲಿ ಹೆಚ್ಚಿರುತ್ತದೆ.  ಬೇಸಿಗೆ ರಜೆ ಇರುವುದರಿಂದ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮೊದಲ ಬಾರಿ ಈಜು ಕಲಿಯಲು ಬಯಸುವವರು ತಮ್ಮ ಲ್ಲಿನ ಸಂದೇಹ ನಿವಾರಿಸಿಕೊಳ್ಳಲು ಕರೆ ಮಾಡುತ್ತಾರೆ. ಅವರಲ್ಲಿ ಹೆಚ್ಚಿನವರು ಯುವತಿಯರು/ಗೃಹಿಣಿಯರೇ ಆಗಿರುತ್ತಾರೆ. ‘ನಿಮ್ಮಲ್ಲಿ ಹೆಣ್ಣು ಮಕ್ಕಳಿಗೆ ಈಜು ಕಲಿಸಲು ಪ್ರತ್ಯೇಕ ಕೋಚ್‌ಗಳಿದ್ದಾರೆಯೇ? ಮಹಿಳೆಯರಿಗೇ ಪ್ರತ್ಯೇಕ ಬ್ಯಾಚ್‌ ಇವೆಯೇ? ಇದ್ದರೆ, ಎಷ್ಟು ಬ್ಯಾಚ್‌ಗಳಿವೆ? ಎಂಬ ಬಗ್ಗೆ ಮಾಹಿತಿ ಕೇಳುತ್ತಾರೆ. ಹೀಗೆ ತಮ್ಮ ಮನಸ್ಸಿನಲ್ಲಿರುವ ಅನೇಕ ಗೊಂದಲಗಳನ್ನು ನಿವಾರಿಸಿಕೊಂಡ ನಂತರವಷ್ಟೇ ಅವರು ಈಜುಕೊಳಕ್ಕೆ ಬರುತ್ತಾರೆ’ ಎನ್ನುತ್ತಾರೆ ಸದಾಶಿವನಗರದಲ್ಲಿರುವ ಗ್ಲೋಬಲ್‌ ಸ್ವಿಮ್ಮಿಂಗ್‌ ಪೂಲ್‌ನ ಅನಿಲ್‌ ಕುಮಾರ್‌.

ಚಳಿ ಹಾಗೂ ಮಳೆಗಾಲದಲ್ಲಿ ಬಹುತೇಕ ಬಣಗುಟ್ಟುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಬೇಸಿಗೆಯಲ್ಲಿ ಭರ್ಜರಿ ಜನರಿರುತ್ತಾರೆ. ಸಾಮಾನ್ಯವಾಗಿ ಎಲ್ಲ ಈಜುಕೊಳದಲ್ಲೂ ಬೆಳಿಗ್ಗೆ 5.30ಕ್ಕೆ  ಈಜುಕಲಿಕೆ ‌ತರಗತಿಗಳು ಆರಂಭಗೊಂಡು, ರಾತ್ರಿ 8.30ರವರೆಗೆ ಮುಂದುವರಿಯುತ್ತದೆ. ನಿತ್ಯವೂ ಸಾವಿರಾರು ಜನ ಮಕ್ಕಳು, ಪುರುಷರು, ಹಿರಿಯರು ಈಜು ಕಲಿಯುತ್ತಾರೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಬ್ಯಾಚ್‌ಗಳಿರುತ್ತವೆ. ಕೆಲವು ಈಜುಕೊಳಗಳು ಗಂಡ ಹೆಂಡತಿ ಇಬ್ಬರು ಒಟ್ಟಾಗಿ ನೀರಿಗಿಳಿದು ಈಜುವ ಅವಕಾಶ ಕಲ್ಪಿಸಿವೆ.

ನೀರಿನ ಅಭಾವದ ಬಿಸಿ
ಬೇಸಿಗೆಯಲ್ಲಿ ಬಿಸಿಲು ಹೆಚ್ಚಾದಂತೆ ಕುಡಿಯುವ ನೀರಿಗೂ ತೊಂದರೆ ಎದುರಾಗುತ್ತದೆ. ಬೇಸಿಗೆಯಲ್ಲಿ ಈಜುಕೊಳಗಳಿಗೂ ಇದರ ಬಿಸಿ ತಟ್ಟುತ್ತದೆ. ಈಜುವವರ ಆರೋಗ್ಯದ ದೃಷ್ಟಿಯಿಂದ ಕೊಳದ ನೀರನ್ನು ನಿರಂತರವಾಗಿ ಫಿಲ್ಟರ್‌ ಮಾಡುತ್ತಿರಬೇಕು. ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಈಜುಕೊಳಕ್ಕೆ ಬೇಕಿರುವ ಅಗತ್ಯ ನೀರು ಹೊಂದಿಸುವುದೇ ದೊಡ್ಡ ಸವಾಲು.

‘ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ವೇಳೆ ದಿನಕ್ಕೆ 8–10 ಲೋಡು ನೀರು ಬೇಕಾಗುತ್ತದೆ. ಪ್ರತಿ ಲೋಡ್‌ ನೀರಿಗೆ ₨450 ಭರಿಸಬೇಕು. ಫಿಲ್ಟರ್‌ ಮಷಿನ್‌ ದಿನದ 24 ಗಂಟೆಯೂ ಚಾಲೂ ಇರುವುದರಿಂದ ತಿಂಗಳಿಗೆ ವಿದ್ಯುತ್‌ ಬಿಲ್‌ ₨1.8 ಲಕ್ಷ ಬರುತ್ತದೆ. ಜನರ ಆರೋಗ್ಯದ ದೃಷ್ಟಿಯಿಂದ ನಾವು ಇಂತಹ ಸೌಕರ್ಯಗಳನ್ನು ಕಟ್ಟುನಿಟ್ಟಾಗಿ ಕಲ್ಪಿಸಿಕೊಡುತ್ತೇವೆ. ನಮ್ಮ ಪೂಲ್‌ನಲ್ಲಿರುವ ನೀರಿನಲ್ಲಿ ಸದಾಕಾಲ ಒಂದು ಪಿಸಿಎಂ ಕ್ಲೋರಿನ್‌ ಇರುವಂತೆ ನೋಡಿಕೊಳ್ಳುತ್ತೇವೆ. ಹಾಗಾಗಿ, ಇದುವರೆಗೂ ನಮ್ಮಲ್ಲಿಗೆ ಬರುವ ಯಾವ ಕಲಿಕಾರ್ಥಿಗೂ ಸ್ಕಿನ್‌ ಅಲರ್ಜಿ ಆಗಿಲ್ಲ’ ಎನ್ನುತ್ತಾರೆ ಹಂಪಿನಗರದಲ್ಲಿರುವ ವಿಜಯನಗರ ಸ್ವಿಮ್‌ ಸೆಂಟ್‌ನ ಕುಮಾರ್‌.

ಸದಾಶಿವನಗರದಲ್ಲಿರುವ ಗ್ಲೋಬಲ್‌ ಈಜುಕೊಳದವರಿಗೆ ಯಾವ ಕಾಲದಲ್ಲೂ ನೀರಿನ ಅಭಾವ ಕಾಡುವುದಿಲ್ಲವಂತೆ. ‘ನಮ್ಮವೇ ಮೂರು ಸ್ವಂತ ಬೋರ್‌ಗಳಿವೆ. ಈ ಭಾಗದಲ್ಲಿ ಸ್ಯಾಂಕಿ ಕೆರೆ ಇರುವುದರಿಂದ ಅಂತರ್ಜಲದ ಮಟ್ಟವೂ ಚೆನ್ನಾಗಿದೆ. ಹಾಗಾಗಿ, ಇದುವರೆಗೂ ನಮಗೆ ನೀರಿನ ಅಭಾವ ಕಾಡಿಲ್ಲ’ ಎನ್ನುತ್ತಾರೆ ಅನಿಲ್‌.

ಮಹಿಳಾ ಕೋಚ್‌ಗಳಿಗೆ ಬೇಡಿಕೆ
ಬೇಸಿಗೆ ಕಾಲದಲ್ಲಿ ಈಜು ಕಲಿಸುವ ಮಹಿಳಾ ಕೋಚ್‌ಗಳಿಗೆ ಹೆಚ್ಚಿನ ಬೇಡಿಕೆ ಕುದುರುತ್ತದೆ. ನಗರದಲ್ಲಿರುವ ಮಹಿಳಾ ಕೋಚ್‌ಗಳು ಈ ಸಂದರ್ಭದಲ್ಲಿ ಹೆಚ್ಚಾಗಿ ಅಪಾರ್ಟ್‌ಮೆಂಟ್‌, ಕ್ಲಬ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಕೋಚ್‌ ಆಗಲು ಆಸಕ್ತಿ ತೋರುತ್ತಾರೆ. ಸಾರ್ವಜನಿಕರಿಗೆ ಪ್ರವೇಶವಿರುವ ಸ್ವಿಮ್ಮಿಂಗ್‌ ಪೂಲ್‌ಗೆ ಬರುವವರ ಸಂಖ್ಯೆ ವಿಪರೀತವಾಗಿರುತ್ತದೆ. ಅವರಿಗೆಲ್ಲಾ ಈಜು ಕಲಿಸುವುದು, ಸಂಭಾಳಿಸುವುದು ತುಂಬ ಕಷ್ಟದ ಕೆಲಸ. ಅದೇ ಪಂಚತಾರಾ ಹೋಟೆಲ್‌ಗಳಲ್ಲಾದರೇ ಅಲ್ಲಿನ ಈಜುಕೊಳಕ್ಕೆ ಬರುವವರೂ ಕಮ್ಮಿ. ಹೆಚ್ಚಿನ ಸಂಬಳವೂ ಸಿಗುತ್ತದೆ. ಈ ಕಾರಣದಿಂದಾಗಿ ಇಂದು ಅನೇಕ ಈಜುಕೊಳದಲ್ಲಿ ಮಹಿಳಾ ಕೋಚ್‌ಗಳ ಸಮಸ್ಯೆ ಕಾಡುತ್ತಿದೆ. ಒಂದು ಪೂಲ್‌ನಲ್ಲಿ 15–20 ಕೋಚ್‌ಗಳಿದ್ದರೆ, ಆ ತಂಡದಲ್ಲಿ  ಇಬ್ಬರು ಮಹಿಳಾ ಕೋಚ್‌ಗಳಿದ್ದರೆ ಅದೇ ಹೆಚ್ಚು. ಹಾಗಾಗಿ, ನಗರದ ಕೆಲವು ಈಜುಕೊಳದವರು ಕೇರಳ ಹಾಗೂ ಕಾರವಾರದ ಕಡೆಯಿಂದ ಮಹಿಳಾ ಕೋಚ್‌ಗಳನ್ನು ಕರೆತರುತ್ತಿದ್ದಾರೆ.  ಇನ್ನು ಕೆಲವೆಡೆ ಹೆಣ್ಮಕ್ಕಳಿಗೆ ಪುರುಷ ಕೋಚ್‌ಗಳೇ ಈಜು ಕಲಿಸಿಕೊಡುತ್ತಿದ್ದಾರೆ.

ಸ್ವಿಮ್ಮಿಂಗ್‌ ಟಿಪ್ಸ್
* ಈಜುಕೊಳಕ್ಕೆ ಹೋಗುವ ಎರಡು ಗಂಟೆ ಮುನ್ನ ಲಘು ಆಹಾರ/ಊಟ ಸೇವಿಸಿ
* ಈಜುಕೊಳಕ್ಕೆ ಇಳಿಯುವ ಮುನ್ನ ಕಡ್ಡಾಯವಾಗಿ 10 ನಿಮಿಷದ ಲಘು ವ್ಯಾಯಾಮ ಮಾಡಿ
* ನೀರಿಗಿಳಿಯುವಾಗ ಸ್ವಿಮ್ಮಿಂಗ್ ಹೆಡ್ ಕ್ಯಾಪ್ ಹಾಗೂ ಗಾಗಲ್ಸ್‌ ಹಾಕಿಕೊಳ್ಳಿ.
* ಈಜು ಮುಗಿಸಿದ ನಂತರ ಸ್ನಾನ ಮಾಡಿ ಲಘು ಆಹಾರ ಸೇವಿಸಿ
* ತಾಜಾ ಹಣ್ಣಿನ ರಸ, ಪ್ರೊಟೀನ್‌ ಶೇಕ್ಸ್‌, ಎನರ್ಜಿ ಡ್ರಿಂಕ್‌ ಕುಡಿದರೆ ಶಕ್ತಿ ಸಂಚಯಿಸುತ್ತದೆ.

Write A Comment