Uncategorized

14 ವರ್ಷದ ಬಿಂಗ್ಟಾಯ್‌ ಎದುರು ಸೋತ ಬೆಂಗಳೂರಿನ ಆಟಗಾರ: ವಿಶ್ವ ಸ್ನೂಕರ್‌: ಪಂಕಜ್‌ ಪ್ರಶಸ್ತಿ ಕನಸು ಭಗ್ನ

Pinterest LinkedIn Tumblr

pvec29xpankaj

ಬೆಂಗಳೂರು: ತವರಿನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ಪಂಕಜ್‌ ಅಡ್ವಾಣಿ ಕನಸು ಭಗ್ನಗೊಂಡಿದೆ. 14 ವರ್ಷದ ಚೀನಾದ ಯಾನ್ ಬಿಂಗ್ಟಾಯ್‌ ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಹನ್ನೆ­ರಡು ಬಾರಿಯ ವಿಶ್ವ ಚಾಂಪಿಯನ್‌ಗೆ ಸೋಲುಣಿಸಿ ಬೆರಗು ಮೂಡಿಸಿದರು.

ಲೀಗ್‌ ಹಂತದ ಪಂದ್ಯಗಳಲ್ಲಿ ಬಿಂಗ್ಟಾಯ್‌ ಅಮೋಘ ಪ್ರದರ್ಶನ ತೋರಿದ್ದರು. ಆದ್ದರಿಂದ ಇವರ ನಡುವಿನ ಎಂಟರ ಘಟ್ಟದ ಸೆಣಸಾಟ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ತವರೂರ ಆಟಗಾರನಿಗೆ ಬೆಂಬಲ ನೀಡುವ ಸಲುವಾಗಿ ಬಂದಿದ್ದ ಕೆಲ ಸ್ನೂಕರ್‌ ಪ್ರೇಮಿಗಳಿಗೆ ‘ಗೋಲ್ಡನ್‌ ಬಾಯ್’ ನಿರಾಸೆ ಮೂಡಿಸಿದರು. ಬಿಂಗ್ಟಾಯ್‌ 6–4 ಫ್ರೇಮ್‌ಗಳಿಂದ ಜಯಭೇರಿ ಮೊಳಗಿಸಿದರು.

ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದ ಪಂಕಜ್‌ ಅವರಿಗೆ ಎಂಟರ ಘಟ್ಟದ ಮೊದಲ ಎರಡು ಫ್ರೇಮ್‌ಗಳಲ್ಲಿ ಕ್ರಮವಾಗಿ 63–38 ಮತ್ತು 75–47 ಗೆಲುವು ಲಭಿಸಿತು. ಎರಡನೇ ಫ್ರೇಮ್‌ನಲ್ಲಿ ಚೀನಾದ ಆಟಗಾರ ಒಂದೇ ಬ್ರೇಕ್‌ನಲ್ಲಿ 44 ಪಾಯಿಂಟ್ಸ್‌ ಗಳಿಸಿ ಅಪಾಯಕಾ­ರಿ­ಯಾಗುವ ಸೂಚನೆ ನೀಡಿದ್ದರು. ನಾಲ್ಕನೇ ಫ್ರೇಮ್‌ನ ಒಂದೇ ಬ್ರೇಕ್‌ನಲ್ಲಿ 107 ಪಾಯಿಂಟ್‌ಗಳನ್ನು ಕಲೆ ಹಾಕಿ ಬಿಂಗ್ಟಾಯ್‌ ತಿರುಗೇಟು ನೀಡಿದರು. ಈ ವೇಳೆ ಪಂದ್ಯದ ಕುತೂಹಲ ಮತ್ತಷ್ಟು ಹೆಚ್ಚಿತು.

ನಾಲ್ಕನೇ ಫ್ರೇಮ್‌ನಲ್ಲಿ ಪಂಕಜ್‌ಗೆ ಒಂದೇ ಒಂದು ಪಾಯಿಂಟ್ಸ್‌ ಗಳಿಸಲು ಬಿಂಗ್ಟಾಯ್‌ ಅವಕಾಶವೇ ನೀಡಲಿಲ್ಲ. ತವರಿನ ಆಟಗಾರನಿಗೆ ಬೆಂಬಲ ನೀಡಲು ಬಂದಿದ್ದ ಅಭಿಮಾನಿಗಳು ಚೀನಾದ ಪುಟ್ಟ ಹುಡುಗಲು ಆಟಕ್ಕೆ ಮನ ಸೋಲ­ಬೇಕಾಯಿತು!  ಈ ವೇಳೆಗಾಗಲೇ ಪಂಕಜ್‌ ಒತ್ತಡಕ್ಕೆ ಒಳಗಾಗಿದ್ದರು.

ಇಂದು ಫೈನಲ್‌
ಮೂರೂ ವಿಭಾಗಗಳ ಫೈನಲ್‌ ಪಂದ್ಯಗಳು ಶನಿವಾರ ನಡೆಯಲಿವೆ. ಈ ಪಂದ್ಯಗಳು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದ್ದು, ಕಂಠೀರವ ಒಳಾಂಗಣ  ಕ್ರೀಡಾಂಗಣಕ್ಕೆ ಉಚಿತ ಪ್ರವೇಶವಿದೆ.

ಆರಂಭಿಕ ನಿರಾಸೆಯನ್ನು ಸಮರ್ಥವಾಗಿ ಮೆಟ್ಟಿ ನಿಂತು ನಂತರದಲ್ಲಿ ಗೆಲುವಿನ ಸೌಧ ಕಟ್ಟಿದ ಬಿಂಗ್ಟಾಯ್‌ ನಂತರದ ಎರಡೂ ಫ್ರೇಮ್‌ಗಳಲ್ಲಿ 68–10, 60–16ರಲ್ಲಿ ಜಯ ಪಡೆದು ಮುನ್ನಡೆ­ಯನ್ನು 3–2ಕ್ಕೆ ಹೆಚ್ಚಿಸಿಕೊಂಡರು. ಹೀಗೆ ಪಂದ್ಯದಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತು. ಆದರೆ, ಕೊನೆಯ ಎರಡೂ ಫ್ರೇಮ್‌ಗಳಲ್ಲಿ ಚೀನಾದ ಆಟಗಾರ 71–26, 59–40ರಲ್ಲಿ ಜಯ ಪಡೆದಾಗ ಭಾರಿ ಕರತಾಡನ ಲಭಿಸಿತು.

ತಪ್ಪಿದ ಪ್ರಶಸ್ತಿ: ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್‌ 2003ರಲ್ಲಿ ಪ್ರಶಸ್ತಿ ಜಯಿಸಿದ್ದರು. ಆಗ ಟೂರ್ನಿ ಚೀನಾದಲ್ಲಿ ನಡೆದಿತ್ತು. 2010ರಲ್ಲಿ ಸಿರಿಯಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತದ ಆಟಗಾರ ರನ್ನರ್‌ ಅಪ್‌ ಆಗಿದ್ದರು. ಆದರೆ, ತವರಿನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ, ಈ ಬಾರಿ ಇದ್ದ ಅವಕಾಶದಲ್ಲಿಯೂ ಅವರಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.

ಬೆಂಗಳೂರಿನ ಚಿತ್ರಾ ಹೋರಾಟ ಅಂತ್ಯ
ಮಹಿಳಾ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಬೆಂಗಳೂರಿನ ಚಿತ್ರಾ ಮಗಿಮೈರಾಜ್‌ ಎಂಟರ ಘಟ್ಟದ ಪಂದ್ಯದಲ್ಲಿ  1–4ರಲ್ಲಿ ಬ್ರೆಜಿಲ್‌ನ ವೆಂಡಿ ಜಾನ್ಸ್‌ ಎದುರು ಪರಾಭವಗೊಂಡರು.

ಏಷ್ಯನ್‌ ಒಳಾಂಗಣ ಕೂಟದಲ್ಲಿ ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿ ಎನಿಸಿರುವ 41 ವರ್ಷದ ಚಿತ್ರಾ ಶುಕ್ರವಾರ ಎರಡನೇ ಫ್ರೇಮ್‌ನಲ್ಲಿ 66–22ರಲ್ಲಿ ಗೆಲುವು ಸಾಧಿಸಿದರು. ಆದರೆ, ಉಳಿದ ನಾಲ್ಕೂ ಫ್ರೇಮ್‌ಗಳಲ್ಲಿ ಜಾನ್ಸ್‌ 51–38, 88–1, 67–11, 61–52ರಲ್ಲಿ ಗೆಲುವು ದಾಖಲಿಸಿದರು.

ಮಾಸ್ಟರ್ಸ್‌ನಲ್ಲೂ ಸೋಲು: ಮಾಸ್ಟರ್ಸ್‌ ವಿಭಾಗದ ಸ್ಪರ್ಧೆಗಳಲ್ಲಿ ಬೆಂಗಳೂರಿನ ಬಿ.ವಿ. ಶ್ರೀನಿವಾಸ ಮೂರ್ತಿ ಅವರು 0–4ರಲ್ಲಿ ವೇಲ್ಸ್‌ನ ಡರೆನ್‌ ಮಾರ್ಗನ್‌ ಮೇಲೂ, ರಘತ್‌ ಹಬೀಬ್‌ 3–4ರಲ್ಲಿ ಥಾಯ್ಲೆಂಡ್‌ನ ಚಚಿಟ್‌ ಟ್ರಿಯಾರ್‌­ಪ್ರೆಡಿಟ್‌ ವಿರುದ್ಧವೂ ಪರಾಭವ­ಗೊಂಡು ಟೂರ್ನಿಯಿಂದ ಹೊರ ಬಿದ್ದರು. ಈ ಮೂಲಕ ವಿಶ್ವ ಸ್ನೂಕರ್‌ನಲ್ಲಿ ಭಾರತದ ಸವಾಲು ಅಂತ್ಯ ಕಂಡಿತು.

‘ಜನರ ಗದ್ದಲದಿಂದ ಕಿರಿಕಿರಿಯಾಯಿತು’
‘ಪಂದ್ಯದ ವೇಳೆ ಜನ ಪದೇ ಪದೇ ಮಾತನಾಡುತ್ತಿದ್ದರು. ಇದರಿಂದ ನನಗೆ ತೀರಾ ಕಿರಿಕಿರಿಯೆನಿಸಿತು. ಆದ್ದರಿಂದ ಎಲ್ಲಾ ಫ್ರೇಮ್‌ಗಳಲ್ಲಿ ಪೂರ್ಣ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಸೋಲು ಎದುರಾಯಿತು’ ಎಂದು ಪಂಕಜ್‌ ಅಡ್ವಾಣಿ ಬೇಸರ ವ್ಯಕ್ತಪಡಿಸಿದರು.

‘ಬಿಂಗ್ಟಾಯ್‌ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಹೆಚ್ಚೇನು ಆಡಿಲ್ಲ. ನನ್ನ ಸಾಮರ್ಥಕ್ಕೆ ತಕ್ಕಂತೆ ಆಡಲು ವಿಫಲನಾದೆ. ಬಿಂಗ್ಟಾಯ್‌ ಹೆಚ್ಚು ಪಾಯಿಂಟ್‌­ಗಳನ್ನು ಕಲೆ ಹಾಕಲು ಪದೇ ಪದೇ ಯತ್ನಿಸಿ ಯಶಸ್ಸು ಕಂಡರು. ಆದರೆ, ನಾನು ಪಾಯಿಂಟ್‌ಗಳನ್ನು ಗಳಿಸುವಲ್ಲಿ ವಿಫಲನಾದೆ. ಇಬ್ಬರ ಆಟದ ನಡುವೆ ಇದ್ದದ್ದು ಇಷ್ಟೇ ವ್ಯತ್ಯಾಸ’ ಎಂದು ಪಂಕಜ್‌ ಹೇಳಿದರು.

Write A Comment