ಕರಾವಳಿ

ದ್ವಿತೀಯ ಪಿಯು ಫಲಿತಾಂಶ ಪ್ರಕಟ; ದ.ಕ ಪ್ರಥಮ, ಉಡುಪಿ ದ್ವಿತೀಯ; ರಾಜ್ಯದ ಟಾಪರ್‌ ಲಿಸ್ಟ್ ಹೀಗಿದೆ…

Pinterest LinkedIn Tumblr

ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು ಶೇಕಡಾ 61.88ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಶೇ.88.02ರಷ್ಟು ಉತ್ತೀರ್ಣರಾಗಿ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದೆ.

ಕಲಾ ವಿಭಾಗದಲ್ಲಿ ಬಳ್ಳಾರಿಯ ಶ್ವೇತಾ ಭೀಮಶಂಕರ ಬೈರಗೊಂಡ ಮತ್ತು ಕೊಟ್ಟೂರಿನ ಸಹನಾ ಮಡಿವಾಳರ್ 600ಕ್ಕೆ 594 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾನವ ವಿನಯ್ ಕೇಜ್ರಿವಾಲ್,ನೀಲು ಸಿಂಗ್, ಆಕಾಶ್ ದಾಸ್ ಮತ್ತು ನೇಹಾ ಬಿ ಆರ್ 596 ಹಾಗೂ ವಿಜ್ಞಾನ ವಿಭಾಗದಲ್ಲಿ ಸೀಮ್ರಾನ್ ಶೇಷರಾವ್, ಇಲಂ ಮೊಹಮ್ಮದ್ ರಫೀಕ್, ಸಾಯಿ ಚಿರಾಗ್, ಶ್ರೀಕೃಷ್ಣ ಪೇಜತಾಯ 598 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 68.72ರಷ್ಟು ಬಾಲಕಿಯರು ಮತ್ತು ಶೇಕಡಾ 55.22ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಪೂರಕ ಪರೀಕ್ಷೆ ದಿನಾಂಕ ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುತ್ತದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ,ವಿಜಯಪುರ 3ನೇ ಸ್ಥಾನ, ಬೆಂಗಳೂರು ದಕ್ಷಿಣ ನಾಲ್ಕನೇ ಸ್ಥಾನ, ಉತ್ತರ ಕನ್ನಡ 5ನೇ ಸ್ಥಾನ ಹಾಗೂ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ

ಕಳೆದ ಏಪ್ರಿಲ್ 23ರಿಂದ ಮೇ 18ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 6,84,255 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದರು. ಆ ಪೈಕಿ 3,46,936 ವಿದ್ಯಾರ್ಥಿಗಳು ಹಾಗೂ 3,37,319 ವಿದ್ಯಾರ್ಥಿನಿಯರಾಗಿದ್ದರು. ರಾಜ್ಯದ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಕಲಾ ವಿಭಾಗದಲ್ಲಿ 2,28,167 ಮಂದಿ, ವಾಣಿಜ್ಯ ವಿಭಾಗದಲ್ಲಿ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

Comments are closed.