ಕರಾವಳಿ

ಉಡುಪಿಯಿಂದ ತೆಲಂಗಾಣ ಕಾರ್ಮಿಕರು ತೆರಳಲು ಸಹಕರಿಸಿ ಮಾನವೀಯತೆ ಮೆರೆದ ಮುಂಬೈನ ವಿದ್ಯಾರ್ಥಿನಿ

Pinterest LinkedIn Tumblr

ಉಡುಪಿ: ಮುಂಬಯಿ ಮೂಲದ ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿನಿ ಫ್ರಾಜೆಕ್ಟ್ ವರ್ಕ್ ನಿಮಿತ್ತ ಮಣಿಪಾಲಕ್ಕೆ ಬಂದಿದ್ದವರು ಲಾಕ್‌ಡೌನ್‌ನಿಂದಾಗಿ ಅಲ್ಲೇ ಬಾಕಿಯಾಗಿದ್ದರು. ಲಾಕ್‌ಡೌನ್‌ ರಿಯಾಯಿತಿ ಹಿನ್ನೆಲೆ ಉಡುಪಿಯ ರೈಲುನಿಲ್ದಾಣದಲ್ಲಿ ತೆಲಂಗಾಣದ ಅನಕ್ಷರಸ್ಥ ವಲಸೆ ಕಾರ್ಮಿಕರು ಊರಿಗೆ ತೆರಳಲು ಆಗದೇ ಕಷ್ಟಪಡುತ್ತಿರುವುದು ಕಂಡು ಅವರಿಗೆ ‘ಸೇವಾ ಸಿಂಧು’ ಮೂಲಕ ನೆರವಾಗಿದ್ದಾರೆ.

ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿನಿ ಮುಂಬೈ ಮೂಲದ ಸಾಯಿಶ್ರೀ ಅಕೊಂಡಿ ಎನ್ನುವರ ಸೇವಾಸಿಂಧು ಸಹಾಯ ಹಾಗೂ ಆರ್ಥಿಕ ಸಹಕಾರ ಪಡೆದವರು ತೆಲಂಗಾಣದ 49 ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಯಿಶ್ರೀ 2018ರಲ್ಲಿ ಎಂಐಟಿಯಲ್ಲಿ ಬಿಟೆಕ್‌ ಪೂರೈಸಿದವರು. ಇತ್ತೀಚೆಗೆ ಮತ್ತೆ ಮಣಿಪಾಲಕ್ಕೆ ಬಂದಿದ್ದಾಗ ಲಾಕ್‌ಡೌನ್‌ ಆಯಿತು. ಕಾರ್ಯನಿಮಿತ್ತ ಉಡುಪಿ ರೈಲು ನಿಲ್ದಾಣಕ್ಕೆ ಹೋಗಿದ್ದಾಗ ಕಾರ್ಮಿಕರ ಕಷ್ಟ ಕಂಡು ತನ್ನ ಲ್ಯಾಪ್ ಟಾಪ್ ನಲ್ಲಿ ‘ಸೇವಾ ಸಿಂಧು’ ವೆಬ್‌ಸೈಟ್‌ ತೆರೆದು ಎಲ್ಲ 49 ಜನ ವಲಸೆ ಕಾರ್ಮಿಕರ ಹೆಸರು ನೋಂದಾಯಿಸಿದರು. ಅಲ್ಲದೆ ಕಾರ್ಮಿಕರ ಸಂಕಷ್ಟದ ಬಗ್ಗೆ ತೆಲಂಗಾಣ ಸಿಎಂಗೆ ಟ್ಯಾಗ್‌ ಮಾಡುವ ಮೂಲಕ ಅವರ ಗಮನಸೆಳೆದರು. ಸಿಎಂ ಕಚೇರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ, ದೂರವಾಣಿ ಕರೆಯೂ ಬಂತು.

ಕಾರ್ಮಿಕರ ಪ್ರಯಾಣಕ್ಕಾಗಿ ಕೆಎಸ್ಸಾರ್ಟಿಸಿ ಬಸ್‌ ಒದಗಿಸಲು ಮನವಿ ಮಾಡಿದಾಗ 2 ಬಸ್‌ ನೀಡಿದರೂ 1,98,200 ರೂ. ಬಾಡಿಗೆ ನಿಗದಿಪಡಿಸಿದ್ದರು. ಇಷ್ಟು ದೊಡ್ಡ ಮೊತ್ತವನ್ನು ಕಾರ್ಮಿಕರು ಭರಿಸಲು ಸಾಧ್ಯವಿಲ್ಲ ಎಂದು ಮತ್ತೆ ತೆಲಂಗಾಣ ಸರಕಾರದ ಸಹಾಯ ಯಾಚಿಸಿದರು. ಸ್ವತಃ ಸಾರ್ವಜನಿಕರಿಂದ 50 ಸಾವಿರ ರೂ. ಸಂಗ್ರಹಿಸಿದರು. ಅವರ ಆಗ್ರಹದ ಪರಿಣಾಮ ತೆಲಂಗಾಣ ಸರಕಾರವೇ ಉಳಿದ ಹಣವನ್ನು ಭರಿಸುವುದಾಗಿ ಭರವಸೆ ನೀಡಿದೆ.

ನಿನ್ನೆ ಕಾರ್ಮಿಕರು ಊರಿಗೆ…
ಮೇ 19ರಂದು ಮಂಗಳವಾರ ಮಧ್ಯಾಹ್ನ ಎರಡು ಕೆಎಸ್ಸಾರ್ಟಿಸಿ ಬಸ್‌ಗಳ ಮೂಲಕ ತೆಲಂಗಾಣದ ವಲಸೆ ಕಾರ್ಮಿಕರು ಪ್ರಯಾಣ ಆರಂಭಿಸಿದ್ದಾರೆ. ಸಾಯಿಶ್ರೀ ಮತ್ತು ಆಕೆಯ ಸಹಪಾಠಿ ವಿನೀತ್‌ ಇಂದ್ರಾಳಿ ರೈಲು ನಿಲ್ದಾಣದ ಬಳಿ ವಲಸೆ ಕಾರ್ಮಿಕರಿಗೆ ನೆರವಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಠಾಣೆಯ ಪೊಲೀಸ್‌ ಸಿಬಂದಿ ಸಹಕಾರ ನೀಡಿದ್ದಾರೆ.

Comments are closed.