ಕರಾವಳಿ

ಬಳಕೆಯಿಂದ ಕನ್ನಡ ಉಳಿಯುತ್ತದೆ ಹೊರತು ಹೋರಾಟದಿಂದಲ್ಲ: ಭಾವನಾ ಆರ್.ಭಟ್

Pinterest LinkedIn Tumblr

ಕುಂದಾಪುರ: ಕನ್ನಡ ಭಾಷೆ ಬಳಕೆ ಹೆಚ್ಚಾದರೆ ಕನ್ನಡ ಉಳಿಯುತ್ತದೆಯೇ ಹೊರತು ಹೋರಾಟದಿಂದಲ್ಲ. ಹೋರಾಟ ಮಾಡುವುದರಿಂದ ಕನ್ನಡ ಉಳಿಸೋದಕ್ಕೆ ಆಗೋದಿಲ್ಲ. ಕನ್ನಡ ಬಳಕೆ ಹೆಚ್ಚು ಮಾಡುವುದರಿಂದ ಕನ್ನಡ ಉಳಿಸಲು ಸಾಧ್ಯ, ಸಾಮಾಜಿಕ ಜಾಲತಾಣದಿಂದ ಓದು ಕಡಿಮೆ ಆಗುತ್ತದೆ ಎನ್ನುವ ಆರೋಪದ ನಡುವೆ ಜಾಲತಾಣ ಕೂಡಾ ಬರವಣಿಗೆ ವೇದಿಕೆ ಆಗುತ್ತದೆ. ಜಂಗಮವಾಣಿಲ್ಲಿ ಕನ್ನಡ ಅಕ್ಷರ ಜೋಡಣೆ ಮಾಡುವ ಮೂಲಕ ಕನ್ನಡ ಉಳಿಸುವ ಕೆಲಸ ಮಾಡೋಣ. – ಹೀಗೆ ಸಲಹೆ ಮಾಡಿದವರು ಜಿಲ್ಲಾ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಭಾವನಾ ಆರ್.ಭಟ್ ಕೆರೆಮಠ.

ಅಮ್ಮ ಹೇಳುವ ಶೋಭಾನೆ, ಅಪ್ಪ ಹೇಳುವ ಗಾದೆ, ಅಜ್ಜಿ ಹೇಳುವ ನೀತಿಪಾಠ, ಅಜ್ಜ ಹೇಳುವ ಕತೆ ಇವೆಲ್ಲವೂ ಸಾಹಿತ್ಯದ ಪ್ರಕಾರಗಳಾಗಿದ್ದು, ವಿದ್ಯಾರ್ಥಿಗಳು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನೋದು ಮುಖ್ಯವಾಗುತ್ತದೆ. ಓದಬೇಕು ಅಂತಾದರೆ ದೊಡ್ಡ ಕಾದಂಬರಿ ಆಗಬೇಕೆಂದಿಲ್ಲ. ಸಣ್ಣ ಕತೆ, ಪಂಚತಂತ್ರ, ನೀತಿ ಕತೆಗಳಂತಾ ಚಿಕ್ಕಪುಟ್ಟ ಪುಸ್ತಕವಾದರೂ ಓದುವ ಮೂಲಕ ಸಾಹಿತ್ಯಾಸಕ್ತಿ ಉದ್ದೀಪನಗೊಳಸಲು ಸಹಕಾರಿ ಆಗಲಿದೆ. ವಿದ್ಯಾರ್ಥಿಗಳು ಹೇಗೆ ಪಠ್ಯಪುಸ್ತಕ ಓದುತ್ತಾರೋ ಹಾಗೆ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಓದುವ ಮೂಲಕ ಸಾಹಿತ್ಯಾಸಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ಕಾವ್ಯ, ಕವನ ಕತೆಗಳ ಓದುವ ಮೂಲಕ ನಮ್ಮ ಸೈದ್ಧಾಂತಿಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದ ಅವರು, ಒಂದೇ ಗುಕ್ಕಿಗೆ ಎಲ್ಲವನ್ನೂ ಓದಿ ಮುಗಿಸಬೇಕಂತಲ್ಲಾ.. ಪ್ರತೀದಿನ ಒಂದೆರಡು ಹಾಳೆ ಓದುವ ಮೂಲಕ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿ ದಿಷೆಯಲ್ಲೇ ಓದುವ ಹವ್ಯಾಸ ಬೆಳಸಿಕೊಳ್ಳುವ ಮೂಲಕ ಸಾಹಿತ್ಯ ಸೇವೆಗೆ ವೇದಿಕೆ ಸಿದ್ದ ಮಾಡಿಕೊಳ್ಳಬೇಕು ಎಂದರು.

ಇಂದಿನ ವಿದ್ಯಾರ್ಥಿಗಳಲ್ಲಿ ನೋವು ಭರಸುವ ಶಕ್ತಿ ಕಡಿಮೆ ಆಗುತ್ತಿದ್ದು, ಅದಕ್ಕೆ ನಾವು ಬೇರೆ ಬೇರೆ ಪುಸ್ತಕಗಳ ಓದದೆ ಕೇವಲ ನಮ್ಮ ಪಠ್ಯಪುಸ್ತಕಕ್ಕೆ ಸೀಮಿತವಾಗಿದ್ದೇವೆ. ಚೋಮನದಡಿ, ಮರಳಿಮಣ್ಣುಗೆ ಮುಂತಾದ ಪುಸ್ತಕಗಳ ಓದಿದಾಗ ನಮ್ಮದೇನು ಕಷ್ಟ ಮಹಾ ಎನ್ನುವ ಧೈರ್ಯಬರುವ ಜೊತೆ ಬದುಕು ಸವಾಲಾಗಿ ಸ್ವೀಕರಿಸಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

Comments are closed.