ಕರಾವಳಿ

ಆಧುನಿಕ ತಂತ್ರಜ್ಞಾನ ಬಳಸಿಕೊಂಡಾಗ ಶೀಘ್ರವಾಗಿ ನ್ಯಾಯ ಕೊಡಲು ಸಾಧ್ಯ: ನ್ಯಾ| ಸಿ.ಎಂ. ಜೋಷಿ

Pinterest LinkedIn Tumblr

ಕುಂದಾಪುರ: ದೇಶದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತಿದ್ದು, ಇದರಲ್ಲಿ ತಾಂತ್ರಿಕ ವಿಚಾರವು ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕಾನೂನು ವ್ಯವಸ್ಥೆಯೇ ಎಲ್ಲರ ಮುಷ್ಠಿಯಲ್ಲಿರಲಿದೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದಷ್ಟೇ ವಕೀಲರು ಹಾಗೂ ನ್ಯಾಯಾಧೀಶರ ಕೆಲಸವಾಗಿರುತ್ತದೆ. ಇದಕ್ಕೆ ನಾವು ನಮ್ಮ ಕೌಶಲವನ್ನು ಇನ್ನಷ್ಟು ಹರಿತಗೊಳಿಸಿಕೊಳ್ಳಬೇಕಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಷಿ ಹೇಳಿದರು. ಅವರು ಶನಿವಾರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಕುಂದಾಪುರ ಬಾರ್ ಅಸೋಯೇಶನ್‌ನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

 

ನ್ಯಾಯದಾನ ಪ್ರಕ್ರಿಯೆ ವಿಳಂಬವಾಗಲು ನಾವೇ ಕಾರಣಕರ್ತರಾಗಿದ್ದು, ಜನರಿಗೆ ತ್ವರಿತಗತಿಯಲ್ಲಿ ನ್ಯಾಯ ನೀಡುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುನ್ನಡೆಯಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಈ ವ್ಯವಸ್ಥೆಗೆ ಉಪಯೋಗಕ್ಕೆ ಬಾರದಂತೆ ಆಗುತ್ತೇವೆ. ಇದನ್ನು ಎಲ್ಲ ವಕೀಲರು ಅರಿತುಕೊಳ್ಳಬೇಕು. ಈಗ ಆಗುತ್ತಿರುವ ಕ್ಷಿಪ್ರ ಗತಿಯ ಬದಲಾವಣೆಗೆ ನಾವು ಒಗ್ಗಿಕೊಳ್ಳುವ ಜತೆಗೆ, ಅದಕ್ಕೆ ನಾವು ಹೇಗೆ ಸ್ಪಂದನೆ ಮಾಡುತ್ತಿದ್ದೇವೆ ಅನ್ನುವುದರ ಬಗ್ಗೆ ಕೂಡ ಗಂಭೀರವಾಗಿ ಚಿಂತನೆ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದವರು ಹೇಳಿದರು.
ಬಾರ್ ಅಸೋಸಿಯೇಶನ್ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಹರಿ ಪ್ರಭಾಕರ್ ಮರಾಠೆ, ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇಗೌಡ, ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯ್ಕ್, ಜೆಎಂಎಫ್‌ಸಿ ನ್ಯಾಯಾಧೀಶೆ ನಾಗರತ್ನಮ್ಮ, ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶ ದಾನೇಶ್ ಮುಗುಳಿ, ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಶಾಜಿ ಅಬ್ರಾಹಂ, ಜತೆ ಕಾರ್‍ಯದರ್ಶಿ ಪಿಂಕಿ ಕರ್ವಾಲೋ, ಖಜಾಂಚಿ ರಾಘವೇಂದ್ರ ಉಪ್ಪುಂದ ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ವಕೀಲೆ ಶ್ಯಾಮಲಾ ಭಂಡಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಾರ್ ಅಸೋಸಿಯೇಶನ್ ಪ್ರ. ಕಾರ್‍ಯದರ್ಶಿ ಪ್ರಮೋದ್ ಹಂದೆ ಸ್ವಾಗತಿಸಿದರು. ಸದಸ್ಯರಾದ ರಾಜಾರಾಂ ಶೆಟ್ಟಿ ಪರಿಚಯಿಸಿ, ರಮೇಶ್ ಹತ್ವಾರ್ ಕಾರ್‍ಯಕ್ರಮ ನಿರ್ವಹಿಸಿದರು.

Comments are closed.