ಕರ್ನಾಟಕ

ಮದುವೆಯ ಮೊದಲ ರಾತ್ರಿಯಿಂದಲೇ ತ್ಯಾಗದ ಆರಂಭ

Pinterest LinkedIn Tumblr

-ಅಕ್ಷತಾ ಬಿ.

ಒಂದು ಹೆಣ್ಣು ಹುಟ್ಟಿದಾಗಲಿಂದಲೂ, ಬೆಳೆದು ಪ್ರಬುದ್ಧಳಾಗುವವ ರೆಗೂ ಅಪ್ಪ-ಅಮ್ಮನ ಆಸರೆ, ಪ್ರೀತಿಯ ಜತೆಗೆ ಬೆಚ್ಚಗಿನ ಬದುಕನ್ನು ಜೀವಿಸುತ್ತಿರುತ್ತಾಳೆ. ಅವಳದೇ ಆದ ಸುಂದರ ಬದುಕನ್ನು ಕಟ್ಟಿ ಬದುಕುತ್ತಾಳೆ. ಹೀಗಿರುವಾಗ ಮದುವೆಯೆಂಬ ಸಂಕೋಲೆ ಈಕೆಯನ್ನು ಕಟ್ಟಿ ಹಾಕಲು ಕಾಯುತ್ತಿರುತ್ತದೆ. ಹೆತ್ತವರು ‘ಮದುವೆ ಬೇಡ, ಹೊಂದಿಕೊಳ್ಳಲು ಆಗಲ್ಲ. ಸ್ವಾತಂತ್ರ್ಯ ಇರಲ್ಲ.’ ಎಂದು ಹಠ ಮಾಡುತ್ತಿರುವ ಮಗಳನ್ನು ಒಪ್ಪಿಸಿ, ಒಂದೊಳ್ಳೆ ಹುಡುಗ, ಉತ್ತಮ ಕುಟುಂಬವನ್ನು ಹುಡುಕಿ, ಶುಭ ಘಳಿಗೆಯೊಂದರಲ್ಲಿ ಮದುವೆ ಮಾಡಿಸಿಯೇ ಬಿಡುತ್ತಾರೆ. ಅಲ್ಲಿಂದ ಆ ಹೆಣ್ಣು ಮಗಳ ಜೀವನದಲ್ಲಿ ದ್ವಂದ್ವಗಳು, ಸವಾಲುಗಳು ಒಂದರ ಮೇಲೊಂದು ಎಂಬಂತೆ ಬರುತ್ತವೆ.

ಮೊದಲ ರಾತ್ರಿಯಿಂದಲೇ ತ್ಯಾಗದ ಆರಂಭ

ಮದುವೆಯಾಗಿ ಹೊಸ ಮದುಮಗಳು ತನ್ನ ಮನೆಗೆ ಕಾಲಿಟ್ಟಾಗಲೇ ಅವಳ ಕರ್ತವ್ಯಗಳು ಶುರು. ಜತೆಗೆ ಉಪದೇಶಗಳ ಮಹಾಪೂರ. ಗಂಡನನ್ನು ಸಂತೃಪ್ತನನ್ನಾಗಿ ಇಟ್ಟುಕೊಳ್ಳಬೇಕು ಎಂಬ ಮಾತು ಅವಳ ಮನಸ್ಸಿನಲ್ಲಿ ಒಂದು ರೀತಿಯ ಭಯ ಸೃಷ್ಟಿಸುತ್ತವೆ. ಮೊದಲ ರಾತ್ರಿಯ ಮಿಲನದ ಕಲ್ಪನೆಯೇ ಅವಳ ಮನಸ್ಸನ್ನು ಅಲ್ಲೋಲ ಕಲ್ಲೋಲವಾಗಿಸುತ್ತದೆ. ಪ್ರತಿ ಯೊಂದು ಹೆಣ್ಣಿನ ಜೀವನದಲ್ಲಿ ಮೊದಲ ರಾತ್ರಿ ಎಂಬುವುದು ಮೊದಲ ದ್ವಂದ್ವ. ತಾನು ಮಿಲನಕ್ಕೆ ಸಿದ್ಧವಾಗಿಲ್ಲದಿದ್ದರೂ ಗಂಡ ಏನೆಂದುಕೊಳ್ಳು ತ್ತಾನೋ ಎಂಬ ಭಯದಲ್ಲೇ, ಒಲ್ಲದ ಮನಸ್ಸಿನಿಂದ ಅವನಿಗೆ ತನ್ನನ್ನು ತಾನು ಇದು ಆಕೆ ತನ್ನ ಗಂಡನಿಗಾಗಿ ಮಾಡುವ ತ್ಯಾಗಗಳ ಆರಂಭ.

ಮರುದಿನದಿಂದಲೇ ತನ್ನ ಪ್ರತಿಯೊಂದು ನಿರ್ಣಯಗಳನ್ನು ತನ್ನ ಪತಿಯನ್ನು ಕೇಳಿಯೇ ತೆಗೆದುಕೊಳ್ಳಬೇಕಾಗುತ್ತದೆ. ತನ್ನ ಸಣ್ಣ – ದೊಡ್ಡ ಎಲ್ಲಾ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಿದ್ದ ಹುಡುಗಿ ಈಗ ಗಂಡನ ನಿರ್ಣಯಕ್ಕೆ ತಲೆಬಾಗಲೇ ಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಸ್ವತಂತ್ರ ಮನಸ್ಥಿತಿಯ ಹೆಣ್ಣಿಗೆ ಇದು ಶಿಕ್ಷೆಯಂತೆ ತೋರಿ ಬರುತ್ತದೆ. ಹಿಂಸೆ ಯೆನಿಸಿದರೂ ಯಾರೊಡನೆಯೂ ಹೇಳಲಾಗದೇ ಮನಸ್ಸು ತೊಳಲಾ ಡುತ್ತಿರುತ್ತದೆ.

ಸಂಬಂಧ ಬೆಸೆಯುವ ಜವಾಬ್ದಾರಿ

ವಿವಾಹದ ಇಡುವ ಪ್ರತಿಯೊಂದು ಹೆಜ್ಜೆಯೂ ಬಹಳಷ್ಟು ಆಲೋಚಿಸಿ ಇಡಬೇಕಾದ ಪರಿಸ್ಥಿತಿ ಪ್ರತಿಯೊಂದು ಹೆಣ್ಣಿನ ಜೀವನದಲ್ಲೂ ಬಂದೇ ಬರುತ್ತದೆ. ನಾನು ಏನು ಮಾಡಿದರೆ ಮನೆಯವರಿಗೆ ಇಷ್ಟವಾಗುತ್ತೆ, ಹೇಗಿದ್ದರೆ ಇಷ್ಟವಾಗಲ್ಲ ಎಂದು ಯೋಚನೆಗೀಡುಮಾಡುತ್ತದೆ. ಒಂದು ಕುಟುಂಬದಲ್ಲಿ ಹುಟ್ಟಿ, ಅದೇ ಕುಟುಂಬದಲ್ಲಿ ಬೆಳೆದು ಮತ್ತೊಂದು ಸಂಪ್ರದಾಯದಲ್ಲಿ ತನ್ನನ್ನು ಸಂಪೂರ್ಣವಾಗಿ ವಿಲೀನಗೊಳಿಸಿರುತ್ತಾಳೆ. ಹೀಗಿರುವಾಗ ಒಂದೇ ದಿನದಲ್ಲಿ ಬೇರೆ ಮನೆ, ಕುಟುಂಬಕ್ಕೆ ಹೊಂದಿಕೊಳ್ಳಲು ಬಹಳಷ್ಟು ಹೆಣಗಾಡುತ್ತಾಳೆ. ಕುಟುಂಬವೆಂದರೆ ಕೇಳಬೇಕೆ? ಮುರಿದು ಹೋದ ಸಂಬಂಧಗಳೂ ಕೂಡಾ ಅವಳ ಎದುರು ಮೂಡಿದ ಮಣ್ಣಿನ ಗೋಡೆಯಂತೆ ನಿಂತಿರುತ್ತದೆ. ಆಗಲೋ ಈಗಲೋ ಮುರಿಯುವಂತಿರುವ ಸಂಬಂಧಗಳನ್ನು ಸರಿಪಡಿಸುವ ಹೊಣೆಯೂ ಆ ಮದುವೆಯ ಜತೆಗೆ ಅವಳ ಮೇಲೆ ಬರುತ್ತದೆ.

ಸನ್ನಿವೇಶದೊಂದಿಗೆ ಹೊಂದಾಣಿಕೆ

ಕೆಲವೊಮ್ಮೆ ‘ಮದುವೆಯಾದ ಮೇಲೂ ನಿನ್ನ ಕನಸ್ಸನ್ನು ಸಾಕಾರಗೊಳಿಸಿ ಕೊಳ್ಳಬಹುದು. ಗಂಡ ನಿನಗೆ ಪ್ರೋತ್ಸಾಹ ನೀಡುತ್ತಾನೆ. ತುಂಬಾ ತಿರುಗಾಡ ಬಹುದು. ಅವನು ನಿನ್ನ ಕಷ್ಟದಲ್ಲೂ, ಸುಖದಲ್ಲೂ ಜತೆಯಾಗುತ್ತಾನೆ’ ಎನ್ನುವ ಹೆತ್ತವರ ಮಾತು ಮದುವೆಯ ನಂತರ ಮರೀಚಿಕೆಯಾಗುತ್ತದೆ. ತಾನು ಹೇಳಿದಂತೆ ಹೆಂಡತಿ ಕೇಳಬೇಕು ಎನ್ನುವ ಗಂಡನ ಎಲ್ಲೋ ಒಂದು ಕಡೆ ಹೊಸದಾಗಿ ಬಂದ ಹೆಣ್ಣಿಗೆ ಬಹಳಷ್ಟು ನೋವುಂಟು ಮಾಡುತ್ತದೆ. ಯಾರೂ ಬೇಡ. ಎಲ್ಲಾ ಬಿಟ್ಟು ಅಪ್ಪ – ಅಮ್ಮನ ಮಡಿಲಿಗೆ ಪುನಃ ವಾಪಾಸಾಗೋಣ ಎನ್ನುವ ಆಸೆ ಮೂಡುತ್ತದೆ.

ಮರು ಕ್ಷಣವೇ, ಇದು ಸಾಧ್ಯವಿಲ್ಲ. ಇನ್ನು ಮುಂದೆ ಇದೇ ನನ್ನ ಪ್ರಪಂಚ ಎಂದು ಒಳಮನಸ್ಸು ಎಚ್ಚರಿಸಿ ಅವಳನ್ನು ವಾಸ್ತವ ಲೋಕಕ್ಕೆ ಮರಳಿಸುತ್ತದೆ. ‘ಹೆಣ್ಣು ನೀರಿನಂತೆ. ಎಲ್ಲಾ ಕಡೆ ಆರಾಮವಾಗಿ ಹೊಂದಿಕೊಳ್ಳು ತ್ತಾಳೆ.’ ಎಂಬ ಮಾತು ನಿಜವೇ. ಆದರೆ ಸಹಜವಾದ ಹರಿವು, ಇರುವು ಅಲ್ಲ. ಆದರೆ ಆ ಪ್ರಕ್ರಿಯೆಯಲ್ಲಿ ಆಕೆ ಬೇಯಬೇಕಾಗುತ್ತದೆ. ತನ್ನ ಭಾವನೆಗಳನ್ನು ತನ್ನ ಮನಸಲ್ಲೇ ಹುದುಗಿಡುತ್ತಾ, ಬಹಳಷ್ಟು ನೋವು, ಮನಸ್ಸಿನ ದ್ವಂದ್ವ ಹಾಗೂ ತೊಳಲಾಟಗಳ ನಡುವೆ ಒಬ್ಬ ಉತ್ತಮ ಗೃಹಿಣಿಯಾಗುವಲ್ಲಿ ಸಫಲಾಗುತ್ತಾಳೆ.

Comments are closed.