ಕರಾವಳಿ

ಮಗುವಿನ ಜೊತೆ ತಾಯಿ ಮಲಗುವುದರಿಂದ ಆಗುವ ಪ್ರಯೋಜನಗಳು ಮತ್ತು ಅಡ್ಡ ಪರಿಣಾಮಗಳು

Pinterest LinkedIn Tumblr

ಮನಸ್ಸಿನ ತುಂಬಾ ತನ್ನ ಮಗುವಿನ ಸುಖನಿದ್ರೆಯ ಬಗ್ಗೆ ತುಂಬಿಕೊಂಡವಳು- ತಾಯಿ !!ಎಲ್ಲರೂ ಮಗುವಿನ ನಿದ್ರೆಯ ಬಗ್ಗೆ ವಿಚಾರಿಸುವವರೇ…! ತಾಯಿ- ಮಗುವಿನ ನಿದ್ರೆ ಸಾಧಾರಣವಾಗಿ ಏಕಕಾಲದಲ್ಲೇ ನಡೆಯುತ್ತದೆ. ಒಟ್ಟಿಗೆ ಮಲಗಿ ತುಳಿಯುವ, ತಲೆಚಿಟ್ಟು ಹಿಡಿಯುವಂತೆ ಮಾಡುವ, ಪುಟಾಣಿ ರಾಕ್ಷಸನೊಂದಿಗೆ ಮಲಗುವುದೆಂದರೆ, ಅಷ್ಟು ಸುಲಭದ ಮಾತಲ್ಲ. ಆದರೆ, ಮಗುವು ನಿಮ್ಮ ಪಕ್ಕದಲ್ಲಿ ಮಲಗಿದ್ದರೆ, ರಾತ್ರಿಯಲ್ಲಿ ಎದ್ದು ಅಳುವ ಮಗುವಿಗೆ ಹಾಲೂಡಿಸಲು ಹಾಗೂ ಅಪ್ಪಿಕೊಂಡು ಸಮಾಧಾನಗೊಳಿಸಲು ಸುಲಭವಾಗುವುದು. ಆದರೆ ಮಗುವಿನ ಪಕ್ಕದಲ್ಲಿ ಮಲಗಿದರೆ ನಿಮ್ಮ ಸುಖ ನಿದ್ರೆಗೆ ಭಂಗ ಬಂತೆಂದೇ ತಿಳಿಯಬೇಕು. ಪ್ರತಿ ಬಾರಿಯೂ ರಾತ್ರಿಯಲ್ಲಿ ಮಗು ಎಚ್ಚೆತ್ತು ಹಾಲಿಗಾಗಿ ಹಂಬಲಿಸುವಾಗ, ನೀವು ಬಿಟ್ಟ ಕಂಗಳಿಂದ ಆಕಾಶ ನಕ್ಷತ್ರವನ್ನು ಎಣಿಸುವಂತಾಗಬಹುದು. ಮಗುವಿನೊಂದಿಗೆ ಮಲಗ ಬೇಕೆ… ಬೇಡವೇ…? ಎನ್ನುವ ನಿಮ್ಮ ದ್ವಂದ ಮನಸ್ಸಿಗೆ ಉತ್ತರ ನೀಡಲು ಈ ಲೇಖನ ಸಹಕಾರಿಯಾಗಬಹುದು..

ಸಾಧಕಗಳು
ಮಗುವಿನೊಂದಿಗೆ ಭಾವುಕ ಬಂಧನ
ತಾಯಿಗೆ ಅಂಟಿಕೊಂಡು ಮಲಗುವ ಕಂದಮ್ಮಗಳು ತಾಯಿಯೊಂದಿಗೆ ಭಾವನಾತ್ಮಕವಾಗಿ ಬಂಧಿಸಲ್ಪಟ್ಟಿರುತ್ತದೆ. ತನ್ನ ಅಗತ್ಯಗಳ ಪೂರೈಕೆ ಆಗಬಹುದೆಂಬ ವಿಶ್ವಾಸದಿಂದ ಅವರು ಬೇಗನೆ ನಿದ್ರಾದೇವಿಯ ತೆಕ್ಕೆಗೆ ಜಾರುವರು. ತೊಟ್ಟಿಲಲ್ಲಿ ಮಲಗಿಸುವಾಗ ಮಕ್ಕಳು ಅನಗತ್ಯವಾಗಿ ಕಿರಿಕಿರಿಯನ್ನುಂಟು ಮಾಡಿ’ ತಮ್ಮ ನಿದ್ರೆ ಭಂಗಗೊಳಿಸುವರು. ತಾಯಿಯು ಮಗುವಿನ ಪಕ್ಕದಲ್ಲೇ ಮಲಗುವುದು,ಮಗುವಿನ ನಿದ್ರಾಹೀನತೆಯನ್ನು ನಿವಾರಿಸುತ್ತದೆ. ತಾಯಿಯ ಜತೆಯಲ್ಲಿ ಮಗುವು ತಾನು ಸುರಕ್ಷಿತವಾಗಿರುವೆನೆಂಬ ಭಾವನೆಯಿಂದ ನಿರಾತಂಕ ವಾಗಿರುವುದು.ಮಾತ್ರವಲ್ಲದೆ, ರಾತ್ರಿಗಳಲ್ಲಿ ತಾಯಿಯು ಮಗುವನ್ನು ಎತ್ತಿಕೊಳ್ಳುವುದು ಕೂಡಾ ತಾಯಿ ಮಕ್ಕಳಿಬ್ಬರಲ್ಲೂ ಮಾಂತ್ರಿಕ ಮೋಡಿಯನ್ನುಂಟುಮಾಡುವುದು.

ಹಾಸಿಗೆಯಿಂದೇಳದೇ, ಮಗುವಿನ ಅಗತ್ಯಗಳ ಪೂರೈಕೆ
ಮಗುವನ್ನು ನಿಮ್ಮೊಂದಿಗೆ ಮಲಗಿಸಿ ಕೊಳ್ಳುವುದರಿಂದ, ರಾತ್ರಿಯಲ್ಲಿ ಮಗು ಎಚ್ಚರಗೊಂಡು ಅತ್ತಾಗ ಅದನ್ನು ಸಮಾಧಾನಗೊಳಿಸಲೆಂದು ನೀವು ಎದ್ದು ಪಕ್ಕದ ಕೋಣೆಗೆ ತೆರಳಬೇಕಾಗಿಲ್ಲ. ಪಕ್ಕದಲ್ಲೇ ಮಲಗಿರುವ ಮಗುವೂ ಅಳಲು ಪ್ರಾರಂಭಿಸುತ್ತಿದ್ದಂತೆಯೇ, ಒದ್ದೆ ಬಟ್ಟೆಯನ್ನು ಬದಲಾಯಿಸಲು, ಹಾಲೂಡಿಸಲು ಅಥವಾ ಸಮಾಧಾನಗೊಳಿಸಲು ಅನುಕೂಲವಾಗುವುದು. ಮಗುವಿಗೆ ಅತ್ಯುತ್ತಮ ಸುಖನಿದ್ರೆ ನೀಡಲು ನಿಮ್ಮಿಂದ ಸಾಧ್ಯವಾಗಬಹುದು.

ನಿಮ್ಮ ಸ್ಪರ್ಶ ಹಾಗೂ ಸಮಯ
ತಾಯಿ ಮಕ್ಕಳ ಸ್ಪರ್ಶವೂ, ಮಕ್ಕಳ ಪೂರ್ಣ ರೂಪದ ವಿಕಸನಕ್ಕೆ ದಾರಿ ದೀಪ. ತಾಯಿ ಮಕ್ಕಳಿಬ್ಬರು ಜತೆಯಾಗಿ ಮಲಗುವುದರಿಂದ, ಮಗುವಿನ ಮೆದುಳಿನ ಬೆಳವಣಿಗೆಯೂ ವಿಕಸಿಸಲ್ಪಡುವುದು. ಮಗುವಿನ ಮೆದುಳು ಸ್ಪರ್ಶ ಜ್ಞಾನವನ್ನು ಗುರುತಿಸುವುದರಿಂದ ತಾಯಿ ಮಗುವಿಬ್ಬರು ಜತೆಯಾಗಿ ಮಲಗುವುದು ಮಗುವನ್ನು ಉತ್ತಮ ಸಾಮಾಜಿಕ ಪ್ರಜೆಯಾಗಿ ಬೆಳಸಲು ಕಾರಣವಾಗುತ್ತದೆ.ಕೇವಲ ಸ್ಪರ್ಶವೊಂದರ ಮಾಯಾ ಜಾಲವು ಹಲವಾರು ಮಾಂತ್ರಿಕತೆಗಳನ್ನು ಸೃಷ್ಟಿಸಬಲ್ಲುದು.

ಅಡ್ಡ ಪರಿಣಾಮಗಳು :

ಮಕ್ಕಳ ನಿದ್ರಾಸಮಯ ಏರುಪೇರಾಗಬಹುದು
ನಿಮ್ಮೊಂದಿಗೆ ಮಲಗಿ ಅಭ್ಯಾಸವಾದರೆ, ಅದು ಮಕ್ಕಳ ನಿದ್ರೆಯ ಸಮಯವನ್ನು ಬಾಧಿಸಬಹುದು. ಅದೇ ಸಮಯದಲ್ಲಿ “ನೀನು ಒಬ್ಬನೇ ಹೋಗಿ ಮಲಗು”- ಎಂದು ಕಳುಹಿಸಿದರೆ ಕೆಲವೊಮ್ಮೆ ಏಕಾಂಗಿತನವನ್ನು ಸೃಷ್ಟಿಸುವುದು. ಆಗಾಗ ತಲೆದೋರಬಹುದಾದ ನಿದ್ರಾ ಸಂಬಂಧಿ ತೊಂದರೆಗಳಿಗೆ ಕಾರಣವಾಗಬಲ್ಲದು. ತಾಯಿಯೊಂದಿಗೆ ಮಲಗಿ ಅಭ್ಯಾಸವಾದ ಮಗುವು, ಮುಂದೆ ಒಮ್ಮೆಯೂ ತೊಟ್ಟಿಲಲ್ಲಿ ಮಲಗಲಾರದು.

ಖಾಸಗೀ ಸಮಯದ ಬಲಿ
ಮಗುವನ್ನು ನಿಮ್ಮಿಬ್ಬರ ನಡುವಲ್ಲಿ ಮಲಗಿಸಿದರೆ, ಅದು ಪತಿ ಪತ್ನಿಯರ ನಡುವಣ ಸಂಬಂಧಕ್ಕೂ ಪರೊಕ್ಷವಾಗಿ ಕಾಡಬಹುದು.ಮಗುವು ಜತೆಯಲ್ಲಿದ್ದರೆ, ಅದು ನಿಮ್ಮ ಲೈಂಗಿಕ ಜೀವನಕ್ಕೆ ಧಕ್ಕೆಯುಂಟು ಮಾಡುವುದಲ್ಲದೆ, ನಿಮ್ಮ ಖಾಸಗಿ ಸಮಯವನ್ನೂ ತ್ಯಾಗ ಮಾಡಬೇಕಾಗಿ ಬರುವುದು.

ನಿಮ್ಮ ಸುಖ ನಿದ್ರೆಯ ಭಂಗ
ಮಗುವು ನಿಮ್ಮೊಂದಿಗೆ ಮಲಗಿರುವುದರಿಂದ, ನಿಮ್ಮ ಸುಪ್ತ ಮನ ಸದಾ ಎಚ್ಚರವಾಗಿರುವುದು. ಇದು ನಿಮ್ಮ ಸುಖ ನಿದ್ರೆಗೆ ಭಂಗ ತರುವುದು. ರಾತ್ರಿಯಿಡೀ ನಿದ್ರೆಯಿಲ್ಲದೆ ಕಸಿವಿಸಿಗೊಳ್ಳುವ ಮಗುವು ನಿದ್ರೆಗೂ ಅಡ್ಡಿಪಡಿಸುವುದು. ರಾತ್ರಿಯಲ್ಲಿ ಸುಖ ನಿದ್ರೆಯನ್ನು ಬಯಸುವಿರಾದರೆ, ಮಗುವನ್ನು ಜತೆಯಲ್ಲಿ ಮಲಗಿಸುವುದರ ಬಗ್ಗೆ ಪುನಃ ಆಲೋಚನೆ ಮಾಡಿರಿ.

ಮಗುವನ್ನು ಜತೆಯಲ್ಲಿಟ್ಟುಕೊಂಡು ಮಲಗುವುದರಿಂದ ಎಲ್ಲರಿಗೂ ಕಸಿವಿಸಿಗಳುಂಟಾಗುತ್ತದೆ. ಮಗುವಿನೊಂದಿಗೆ ತಾಯಿಯೂ ಮಲಗುವುದು ಕೂಡ ಅದರದ್ದೇ ಲಾಭ ನಷ್ಟಗಳನ್ನು ನೀಡುತ್ತದೆ. ಮಗುವನ್ನು ಜತೆಯಲ್ಲೇ ಮಲಗಿಸಬೇಕೇ ಅಥವಾ ತೊಟ್ಟಿಲಲ್ಲಿ ಮಲಗುವ ಮಗುವನ್ನು ಮುದ್ದುಗರೆಯಬೇಕೇ ಎನ್ನುವುದು ನಿಮ್ಮಿಬ್ಬರ ವ್ಯಕ್ತಿಗತ ವಿಚಾರ.

Comments are closed.