ಕರಾವಳಿ

ಶ್ರೀ ಕೃಷ್ಣಾಪುರ ಪರ್ಯಾಯ; ವೈಭವದ ಮೆರವಣಿಗೆ, ಸರ್ವಜ್ಞ ಪೀಠಾರೋಹಣ | ಭಕ್ತಿಪರವಶವಾದ ಜನರು.!

Pinterest LinkedIn Tumblr

(ಯೋಗೀಶ್ ಕುಂಭಾಸಿ, ಉಡುಪಿ)

ಉಡುಪಿ: ಉಡುಪಿಯ ವೈಭವದ ಪರ್ಯಾಯ ಮೆರವಣಿಗೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಿತು.

ಉಡುಪಿಯ ಕಾಪು ಬಳಿಯ ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪವಿತ್ರ ಸ್ನಾನ ಮಾಡಿ ಆಗಮಿಸಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿಸಿ ಪರ್ಯಾಯ ಮೆರವಣಿಗೆ ಆರಂಭವಾಯಿತು.

ಉಡುಪಿಯ ರಥಬೀದಿಯ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣದೇವರ ದರ್ಶನಮಾಡಿ ನವಗ್ರಹ ದಾನ ನೀಡಿ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದು ಅನಂತೇಶ್ವರದಲ್ಲಿ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿ ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಸ್ವಾಗತಿಸಿದರು.

ಶ್ರೀಕೃಷ್ಣ ದೇವರ ದರ್ಶನ ಪಡೆದು ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು. ಮಧ್ವಾಚಾರ್ಯರ ಸನ್ನಿಧಿಯ ಎದುರು ಅದಮಾರು ಮಠಾಧೀಶರು ಕೃಷ್ಣಾಪುರ ಮಠಾಧೀಶರಿಗೆ ಅಕ್ಷಯ ಪಾತ್ರೆ ಹಸ್ತಾಂತರ ಮಾಡಿದರು.ನಂತರ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಚತುರ್ಥ ಬಾರಿ ಸರ್ವಜ್ಞ ಪೀಠಾರೋಹಣ ಮಾಡಿದರು.

ಪರ್ಯಾಯ ಶ್ರೀಗಳಿಂದ ಬಡಗುಮಾಳಿಗೆಯ ಅರಳು ಗದ್ದುಗೆಯಲ್ಲಿ ಗಂದಾದ್ಯುಪಚಾರ, ಅಷ್ಟ ಮಠಾಧೀಶರಿಂದ ಪಟ್ಟಕಣಿಕೆ ಹಾಗೂ ಮಾಲಿಕೆ ಮಂಗಳಾರತಿ ನಡೆಯಿತು.

ಕೋವಿಡ್ ಹಿನ್ನೆಲೆ ನೈಟ್ ಕರ್ಫ್ಯೂ ವಿಧಿಸಿದ್ದರಿಂದ ವಿಜೃಂಭಣೆಯಿಂದ‌ ನೆರವೇರಬೇಕಿದ್ದ ಪರ್ಯಾಯೋತ್ಸವದ ಮೆರವಣಿಗೆ ಸರಳವಾಗಿ ನಡೆಯಿತು. ಸಾರ್ವಜನಿಕರಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ನಿರಾಕರಿಸಿದ ಹೊರತಾಗಿಯೂ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸುಮಾರು ಒಂದುವರೆ ಕಿಮೀ ಉದ್ದದವರೆಗೂ ರಸ್ತೆ ಬದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿಂತ ಭಕ್ತರು ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಂಡರು. ಪರ್ಯಾಯ ಮೆರವಣಿಗೆಯ ವಿಶೇಷತೆಯೇ ಸ್ತಬ್ಧಚಿತ್ರಗಳು. ಆದರೆ ಈ ಬಾರಿಯ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದ್ದು, ಕೇವಲ ಮಠದಿಂದಲೇ ಬೆರಳೆಣಿಕೆಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದಿತು.

Comments are closed.