ಕರಾವಳಿ

ಧರ್ಮಸ್ಥಳ‌ ಶ್ರೀ ಕ್ಷೇತ್ರಕ್ಕೆ ಸಮರ್ಪಿತವಾದ ಮಲ್ಯಾಡಿ ಶಿವರಾಮ‌ ಶೆಟ್ಟಿಯವರ 1973 ಮಾಡೆಲ್ 12 10 ಡಿ ಲಾರಿ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಅದು 1973 ಮಾಡೆಲ್ ಲಾರಿ. 1976 ರಲ್ಲಿ ಅದನ್ನು ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿಯವರು ಖರೀದಿ ಮಾಡಿ ತಮ್ಮ ಕೆಲಸಕ್ಕೆ ಬಳಸಿಕೊಂಡಿದ್ದರು. ಕಳೆದ 7 ವರ್ಷದಿಂದ ಶೆಡ್ ಸೇರಿದ್ದ ಲಾರಿಯೀಗ ಶ್ರೀ ಮಂಜುನಾಥನ ಆಲಯಕ್ಕೆ ಸಮರ್ಪಿತವಾಗಿದೆ.

ಕಳೆದ ಹಲವು ವರ್ಷಗಳಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ತೆಕ್ಕಟ್ಟೆ ಸಮೀಪದ ಮಲ್ಯಾಡಿ ಶಿವರಾಮ ಶೆಟ್ಟಿಯವರು 1976 ರಲ್ಲಿ 12 10 D (ಟ್ವೆಲ್ವ್ ಟೆನ್ ಡಿ) ಮಾಡೆಲ್ ಲಾರಿಯನ್ನು ಖರೀದಿ ಮಾಡುತ್ತಾರೆ. ಬರೋಬ್ಬರಿ 38 ವರ್ಷಗಳ ಕಾಲ ಇವರ ಬಳಿ ಕೆಲಸ ಮಾಡಿದ ಲಾರಿಯನ್ನು ಬಿಡಿ ಭಾಗಗಳು ಸಿಗದ ಹಿನ್ನೆಲೆ ಕಳೆದ 7 ವರ್ಷದ ಹಿಂದೆ ಅಂದರೆ 2014 ರಲ್ಲಿ ಮನೆಯೆದುರು ಶೆಡ್ ನಿರ್ಮಿಸಿ ಲಾರಿ ನಿಲ್ಲಿಸಿಡುತ್ತಾರೆ.

ಈ ಲಾರಿಯನ್ನು ನೋಡಿದ ವ್ಯಕ್ತಿಯೊಬ್ಬರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಫೋಟೋ ತೋರಿಸುತ್ತಾರೆ. ಮೊದಲೇ ಹಳೆ ಕಾಲದ ವಾಹನ, ವಸ್ತುಗಳ ಬಗ್ಗೆ ಮತ್ತು ಅಂತವುಗಳನ್ನು ಸಂರಕ್ಷಿಸುವ ಬಗ್ಗೆ ಅತೀವ ಆಸಕ್ತಿ ಹೊಂದಿದ ಹೆಗ್ಗಡೆಯವರು ಲಾರಿ ಮಾಲೀಕರು ಒಪ್ಪಿದಲ್ಲಿ ಲಾರಿ ಕ್ಷೇತ್ರಕ್ಕೆ ನೀಡುವ ಬಗ್ಗೆ ತಿಳಿಸುತ್ತಾರೆ. ಧರ್ಮಸ್ಥಳ ಕ್ಷೇತ್ರಕ್ಕೆ ಲಾರಿ ನೀಡುವುದು ಭಾಗ್ಯ ಎಂದು‌ ಅಭಿಪ್ರಾಯ ಹೊಂದಿದ ಮಲ್ಯಾಡಿ ಶಿವರಾಮ ಶೆಟ್ಟಿಯವರು ಲಾರಿಯನ್ನು ಸುವ್ಯವಸ್ಥಿತಗೊಳಿಸಿ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲಾರಿ ಫೋಟೋ ಸಹಿತ ಬರಹ ವೈರಲ್ ಆಗುತ್ತಿದೆ. ”ನಮ್ಮೂರ ಲಾರಿ ಧರ್ಮಸ್ಥಳದ ಮಂಜುನಾಥ ಮಡಲಿಗೆ ಅರ್ಪಣೆಯಾಗಿದೆ …ಉದ್ಯಮಿಗಳು ದಾನಿಗಳು ಆಗಿರುವ ಮಲ್ಯಾಡಿ ಶಿವರಾಮ ಶೆಟ್ಟಿ ಅವರ ಒಡೆತನದ ಲಾರಿಯನ್ನು ಪ್ರೀತಿಪೂರ್ವಕವಾಗಿ ಭಕ್ತಿಪೂರ್ವಕವಾಗಿ ಮಂಜುನಾಥನ ಮಡಿಲಿಗೆ ಒಪ್ಪಿಸಿದ್ದಾರೆ …ಧರ್ಮಸ್ಥಳಕ್ಕೆ ಹೋದರೆ ನಮ್ಮ ಊರಿನ ವಸ್ತು ಒಂದು ಸದಾ ಇಲ್ಲಿರುತ್ತದೆ ಏನೋ ಹೆಮ್ಮೆ ನಮಗಿದೆ”. ಎಂಬ ಬರಹದೊಂದಿಗೆ ಫೋಟೋ ಶೇರ್ ಮಾಡಲಾಗುತ್ತಿದೆ.

Comments are closed.