ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ‘ಸಪ್ತಪದಿ’- ವೈವಾಹಿಕ ಜೀವನಕ್ಕೆ ಕಾಲಿಟ್ಟ ನಾಲ್ಕು ಜೋಡಿ

Pinterest LinkedIn Tumblr

ಕುಂದಾಪುರ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಸಾಮೂಹಿಕ ಮದುವೆ ‘ಸಪ್ತಪದಿ’ ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲೊಂದಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ರಂಗಮಂದಿರದಲ್ಲಿ ಕೋವಿಡ್ ನಿಯಮಾವಳಿಯಂತೆ ಸರಳವಾಗಿ ಬುಧವಾರ ನಡೆಯಿತು.

ವಧು-ವರರು…!
ಬೈಂದೂರು ಕೆರ್ಗಾಲಿನ ಶ್ರೀಧರ್ ಪೂಜಾರಿ- ಉಡುಪಿಯ ಮಣಿಪ್ರಭ ಶೆಟ್ಟಿ, ಕುಂದಾಪುರ ಜಪ್ತಿಯ ಪ್ರಶಾಂತ್ ಪೂಜಾರಿ ಸೌಕೂರು ನಂದಿನಿ ದೇವಾಡಿಗ, ಗುಜರಾತಿನ ಶ್ರೀಪಾದ ಪಾಲಂಕರ್ ಅಂಕೋಲದ ಪಲ್ಲವಿ, ಉತ್ತರಕನ್ನಡ ಯಾಣದ ಗಜಾನನ ಕುಮಟಾದ ಶಾರದಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿಯವರು ವಿವಾಹ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿ, ಅತೀ ಶ್ರೇಷ್ಟವಾದ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದಲ್ಲಿ ಮದುವೆಯಾಗುವುದೇ ಯೋಗವಾಗಿದ್ದು ಇಲ್ಲಿ ಮದುವೆಯಾಗಲು ಭಾಗ್ಯ ಬೇಕು. ಸರಕಾರದ ಸಪ್ತಪದಿ ಕಾರ್ಯಕ್ರಮವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಮದುವೆಯಾಗಲು ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡುವ ಬದಲು ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಮದುವೆ ಮಾಡಿಕೊಳ್ಳುವುದು ಸೂಕ್ತ. ಕೊರೋನಾ‌ ಸಂಬಂಧ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಸಜ್ಜನಿಕೆಯ ಮದುವೆ ದೇವಸ್ಥಾನದಲ್ಲಿ ವಿಧಿವತ್ತಾಗಿ ನಡೆದರೆ ಅದಕ್ಕೊಂದು ಮಹತ್ವ ಸಿಗಲಿದೆ. ದೇವಸ್ಥಾನದಲ್ಲಿ ಮದುವೆ ಮಾಡುವ ಕಾರ್ಯ ಹೆಚ್ಚೆಚ್ಚು ನಡೆದರೆ ಇಡೀ ದೇಶವೇ ಸುಭಿಕ್ಷೆಯಾಗಲಿದೆ ಎಂದರು.

ವಧು ವರರಿಗೆ ಸರಕಾರದ ಗಿಫ್ಟ್…..
ವರನಿಗೆ ಹೂಹಾರ, ಪಂಚೆ, ಶರ್ಟ್, ಶಲ್ಯಕ್ಕಾಗಿ 5 ಸಾವಿರ ಹಾಗೂ ವಧುವಿಗೆ ಚಿನ್ನದ ತಾಳಿ, 8 ಗ್ರಾಂ ತೂಕದ 2 ಚಿನ್ನದ ಗುಂಡು, ಹೂವಿನ ಹಾರ, ಧಾರೆ ಸೀರೆ, ರವಿಕೆ ಖರೀದಿಗೆ 10 ಸಾವಿರ ಪ್ರೋತ್ಸಾಹಧನವನ್ನು ಸರಕಾರ ನೀಡುತ್ತದೆ.

ಇಂದು ಗಜಾನನ ಜೋಯಿಷರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ನಾಲ್ವರು ಜೋಡಿ ಹಸೆಮಣೆ ಏರಿದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ನವಜೋಡಿಗೆ ಆಶೀರ್ವದಿಸಿದರು. ದೇವಳದ ವತಿಯಿಂದ ದಂಪತಿಗಳನ್ನು ಗೌರವಿಸಲಾಯಿತು.

ಈ ಸಮಯದಲ್ಲಿ ದೇವಳದ ಕಾರ್ಯನಿರ್ವಾಹಣಾಧಿಕಾರಿ ಎಸ್.ಪಿ.ಬಿ. ಮಹೇಶ್, ಆಡಳಿತ ಮಂಡಳಿ ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡಾ, ಸಂಧ್ಯಾ ರಮೇಶ್,ರತ್ನಾ, ಕೆ.ಪಿ ಶೇಖರ್, ಕ್ಷೇತ್ರ ಅರ್ಚಕ ಶ್ರೀಧರ್ ಅಡಿಗ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.