ಕರಾವಳಿ

ಕಾಳಾವರದ ಕಾಳಿಂಗ ಕ್ಷೇತ್ರದಲ್ಲಿ ಸಂಭ್ರಮದ ಚಂಪಾ ಷಷ್ಠಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಪುರಾತನ ಸುಬ್ರಮಣ್ಯ ದೇವಸ್ಥಾನವಾದ ಕೋಟೇಶ್ವರ ಸಮೀಪದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನ (ಸುಬ್ರಮಣ್ಯ)ದಲ್ಲಿ ಚಂಪಾ ಷಷ್ಠಿ ಮಹೋತ್ಸವ ಡಿ.20 ಭಾನುವಾರ ಕೋವಿಡ್ ನಿಯಮಾವಳಿಯಂತೆ ಸಂಪ್ರದಾಯಬದ್ಧವಾಗಿ ಸಂಭ್ರಮದಿಂದ ಜರುಗಿತು.

ದೇವಸ್ಥಾನಕ್ಕೆ ನಸುಕಿನಿಂದಲೇ ಸಾವಿರಾರು ಜನರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಹೂಕಾಯಿ ಹರಕೆ ಸಮರ್ಪಿಸಿದರು. ಭಾನುವಾರವಾದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಸೇವೆಗಳಿಲ್ಲ: ಕೊರೋನಾ ಹಿನ್ನೆಲೆಯಲ್ಲಿ ದರ್ಶನಕ್ಕೆ ಮಾತ್ರವೇ ಅವಕಾಶವೆಂದು ಹೇಳಲಾಗಿತ್ತಾದರೂ ಕೂಡ ಮನೆಯಿಂದಲೇ ಹೂಕಾಯಿ ತಂದವರಿಗೆ ಸೇವೆ ಹಾಗೂ ಹರಕೆ ಸಮರ್ಪಣೆಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಅನ್ನಪ್ರಸಾದ ಇರಲಿಲ್ಲ. ಮಾಸ್ಕ್ ಧರಿಸಿ ಬಂದ ಭಕ್ತರು ಕಾಳಿಂಗನ ದರ್ಶನ ಪಡೆದು ವಾಪಾಸ್ಸಾಗುವ ದೃಶ್ಯ ಕಂಡುಬಂತು. ಈ ಬಾರಿ ದೇವಸ್ಥಾನದ ವಠಾರದಲ್ಲಿ ಯಾವುದೇ ಅಂಗಡಿಗಳಿಗೆ ಅವಕಾಶ ನೀಡಿರಲಿಲ್ಲ. ಡಿ.21 ರಂದು ಢಕ್ಕೆಬಲಿ ಮೊದಲಾದ ಯಾವುದೇ ಕಟ್ಟುಕಟ್ಟಳೆ ಸೇವೆ ಹಾಗೂ ತುಲಾಭಾರ ಸೇವೆ ಇರುವುದಿಲ್ಲ.

ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಟಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಸಿಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಚಂಪಾ ಷಷ್ಟಿ ದಿನ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ಹರಕೆಗಳನ್ನು ನಾಗ ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು.

ಈ ಸಂದರ್ಭ ದೇವಸ್ಥಾನದ ಪ್ರಭಾರ ಆಡಳಿತಾಧಿಕಾರಿ ಗಣೇಶ್ ರಾವ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರವಿರಾಜ್ ಎನ್. ಶೆಟ್ಟಿ, ಅರ್ಚಕರಾದ ಕೃಷ್ಣ ಸೋಮಯಾಜಿ, ಪ್ರಮುಖರಾದ ಕೃಷ್ಣದೇವ ಕಾರಂತ್, ದೀಪಕ್ ಕುಮಾರ್ ಶೆಟ್ಟಿ, ರಂಜಿತ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು‌.

ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ವ್ಯವಸ್ಥೆ ನಿರ್ವಹಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.