ಕರಾವಳಿ

ಸಂಕಷ್ಟದಲ್ಲಿರುವ ಮಕ್ಕಳಿಗೆ 24*7 ರಕ್ಷಣೆ, ಭದ್ರತೆ ನೀಡುತ್ತಿದೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

Pinterest LinkedIn Tumblr

ಉಡುಪಿ(ವಿಶೇಷ ವರದಿ): ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ಮಕ್ಕಳಿಗೆ 24*7 ಅವರಿಗೆ ಅಗತ್ಯ ರಕ್ಷಣೆ, ಭದ್ರತೆ, ನೀಡುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ ಹಲವು ಮಕ್ಕಳಿಗೆ ರಕ್ಷಣೆ ನೀಡಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಕೇಂದ್ರ ಸರ್ಕಾರವು ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು 2008 ರಲ್ಲಿ ರೂಪಿಸಿದ್ದು, ಮಕ್ಕಳಿಗೆ ಬದುಕುವ ಹಕ್ಕು, ವಿಕಾಸ ಹೊಂದುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕನ್ನು ನೀಡಿದೆ.ಹಾಗೂ ಮಕ್ಕಳ ಬಾಲನ್ಯಾಯ ಕಾಯ್ದೆಯ ಅನುಷ್ಟಾನ, ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಗಳು, ದತ್ತು ಕಾರ್ಯಕ್ರಮ, ಮಕ್ಕಳ ಸಹಾಯವಾಣೆ, ಪ್ರಾಯೋಜಕತ್ವ ಕಾರ್ಯಗಳನ್ನು ಅನುಷ್ಟಾನಗೊಳಿಸಿದೆ.

(ಸಾಂದರ್ಭಿಕ ಚಿತ್ರ)

ಇತರರಿಂದ ಪ್ರೇರೇಪಣೆಗೊಂಡು ಭಿಕ್ಷಾಟನೆಯಲ್ಲಿರುವ ಮಕ್ಕಳು, ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳು, ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು, ನಿರ್ಗತಿಕ ಮಕ್ಕಳಿಗೆ ಸೂಕ್ತ ರಕ್ಷಣೆ, ಪುರ್ನವಸತಿ ಸೌಲಭ್ಯ ಹಾಗೂ ಅಗತ್ಯ ನೆರವು ಸೌಲಭ್ಯಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೊರೆಯುವ, ಅನಾಥ ಅಥವಾ ಸಂಕಷ್ಟದಲ್ಲಿರುವ ಯಾವುದೇ ಮಗುವನ್ನು 24 ಗಂಟೆಯೊಳಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮಗುವಿಗೆ ತಕ್ಷಣದ ಆಶ್ರಯ ಮತ್ತು ಪುನರ್ವಸತಿಯನ್ನು ಒದಗಿಸಿ, ಪಾಲಕರ ಪೋಷಕರ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು, ಪಾಲಕರು ಪತ್ತೆಯಾಗದಿದ್ದಲ್ಲಿ ಅರ್ಹ ದಂಪತಿಗಳಿಗೆ ಅಥವಾ ದತ್ತು ಸ್ವೀಕಾರ ಕೇಂದ್ರಗಳಿಗೆ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ದತ್ತು ನೀಡಲಾಗುತ್ತದೆ, ಕಾನೂನು ಸಂಘರ್ಷಗಳಿಗೆ ಒಳಗಾಗಿರುವ ಮಕ್ಕಳನ್ನು ವೀಕ್ಷಣಾಲಯಗಳಿಗೆ ಸೇರ್ಪಡೆಗೊಳಿಸಲಾಗುವುದು.

( ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಸದಾನಂದ ನಾಯಕ್)

ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತ ಮಗುವಿನ ಮೇಲೆ ಎಫ್‍ಐಆರ್ ದಾಖಲಾಗಿದ್ದರೆ ರೂ 5,000, ಮಗು ಆಸ್ವತ್ರೆಗೆ ದಾಖಲಾಗಿದ್ದರೆ 10,000, ದೀರ್ಘಾವಧಿ ಚಿಕಿತ್ಸೆ ಅಗತ್ಯ ಇದ್ದರೆ 10,000 ರೂ.ಗಳ ಪರಿಹಾರವನ್ನು ನೀಡಲಾಗುವುದು. ಹೆಚ್.ಐ.ವಿ ಭಾಧಿತ ಮಗುವಿನ ವಿದ್ಯಾರ್ಜನೆ, ಪೌಷ್ಟಿಕತೆ ಮತ್ತು ಪ್ರತಿ ತಿಂಗಳು 1,000 ರೂ. ಪರಿಹಾರ ಧನವನ್ನು 18 ವರ್ಷ ತುಂಬವವರೆಗೆ ನೀಡಲಾಗುತ್ತದೆ ಹಾಗೂ ಕಾನೂನು ಪ್ರಕರಣದಲ್ಲಿ ದೀರ್ಘಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯ ಮಕ್ಕಳಿಗೆ 3 ವರ್ಷದವರೆಗೆ 1000 ರೂ. ಗಳನ್ನು ವಿದ್ಯಾಭ್ಯಾಸದ ವೆಚ್ಚವಾಗಿ ನೀಡಲಾಗುತ್ತದೆ. ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನಡೆಸಲಾಗುತ್ತಿದೆ. ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳ ಸಿಬ್ಬಂದಿಗೆ ನಿರಂತರ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಎಲ್ಲಾ ಗ್ರಾಮ ಪಂಚಾಯತ್‍ಗಳ ಪಿಡಿಓ ಗಳಿಗೆ ಕಾರ್ಯಾಗಾರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಮಕ್ಕಳ ರಕ್ಷಣೆಗಾಗಿ 24*7 ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ.ಸಂ. 0820-2574964 ಗೆ ಸಾರ್ವಜನಿಕರು ಸಂಕಷ್ಟದಲ್ಲಿರುವ ಹಾಗೂ ರಕ್ಷಣೆಯ ಅಗತ್ಯವಿರುವ ಮಕ್ಕಳು ಕಂಡುಬಂದಲ್ಲಿ ಮಾಹಿತಿ ನೀಡಬಹುದಾಗಿದೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಸದಾನಂದ ನಾಯಕ್.

ಪ್ರಸಕ್ತ ವರ್ಷ ಉಡುಪಿ ಜಿಲ್ಲೆಯಲ್ಲಿ ಕರಾವಳಿ ಬೈಪಾಸ್‍ನ ರಾಷ್ಟ್ರೀಯ ಹೆದ್ದಾರಿ ಬಳಿ ವಾಸವಾಗಿದ್ದ ಕುಟುಂಬಗಳ 16 ಮಕ್ಕಳ ರಕ್ಷಣೆಯ ದೃಷ್ಠಿಯಿಂದ ಅವರಿಗೆ ಅವರ ಸ್ವಂತ ರಾಜ್ಯವಾದ ರಾಜಸ್ಥಾನಕ್ಕೆ ರೈಲ್ವೆ ಟಿಕೇಟ್ ಕೊಡಿಸಿ ಕಳುಹಿಸಲಾಗಿದೆ. ಮಣಿಪಾಲ ಬಸ್‍ಸ್ಟ್ಯಾಂಡ್, ಆದಿ ಉಡುಪಿ ಮಾರ್ಕೆಟ್, ಸರ್ವಿಸ್ ಬಸ್ ನಿಲ್ದಾಣ, ಉದ್ಯಾವರ ಚರ್ಚ್ ಮುಂತಾದ ಕಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ 10 ಹೆಣ್ಣು ಮತ್ತು 4 ಗಂಡು ಮಕ್ಕಳನ್ನು ರಕ್ಷಿಸಲಾಗಿದೆ, ಪಡುಬಿದ್ರೆ ರಾಜ್ಯ ಹೆದ್ದಾರಿ ಪಕ್ಕದಲ್ಲಿ ವಾಸವಿದ್ದ ಮಧ್ಯಪ್ರದೇಶದ 3 ಕುಟುಂಬಗಳ 6 ಮಕ್ಕಳನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ಪೇತ್ರಿಯಲ್ಲಿ ಶಾಲೆಯಿಂದ ಹೊರಗುಳಿದ ಬಾಲಕನನ್ನು ರಕ್ಷಿಸಿದ್ದು, ನೀರೆಯಲ್ಲಿ ಮಾರಾಟಕ್ಕೆ ಯತ್ನಿಸುತಿದ್ದ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ, ಮಲ್ಪೆ ಬಂದರಿನಲ್ಲಿ ಮೀನು ಹೆಕ್ಕುವ 18 ಬಾಲಕಿಯರು ಮತ್ತು 1 ಬಾಲಕನನ್ನು ರಕ್ಷಿಸಲಾಗಿದೆ, ಪಡುಬಿದ್ರೆಯಲ್ಲಿ ತಾಯಿಯಿಲ್ಲದ ಮಕ್ಕಳನ್ನು ರಕ್ಷಿಸಲಾಗಿದೆ ಎನ್ನುತ್ತಾರೆ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್.

Comments are closed.