ಕರಾವಳಿ

ನಾಳೆ ಕುಂದಾಪುರದ ಕೋಟೇಶ್ವರದಲ್ಲಿ ‘ಕೊಡಿ ಹಬ್ಬ’: ಕಂಗೊಳಿಸುತ್ತಿದೆ ಧ್ವಜಪುರ!

Pinterest LinkedIn Tumblr

ಕುಂದಾಪುರ: ಪುರಾಣ ಪುಟಗಳಲ್ಲಿ ಉಲ್ಲೇಖವಾಗಿರುವ ಪರುಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಧ್ವಜಪುರವೆಂದು ಪ್ರಸಿದ್ದಿಯಾದ ಕೋಟೇಶ್ವರದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ನ.23 ರ ಶುಕ್ರವಾರ ನಡೆಯುವ ಬ್ರಹ್ಮರಥೋತ್ಸವ ಹಾಗೂ ‘ಕೊಡಿ’ ಹಬ್ಬಕ್ಕಾಗಿ ದೇಶ-ವಿದೇಶದಲ್ಲಿರುವ ದೇವರ ಭಕ್ತರು ಊರಿಗೆ ಆಗಮಿಸಿದ್ದಾರೆ. ವೃಶ್ಚಿಕ ಮಾಸದಂದು ನಡೆಯುವ ಇಲ್ಲಿನ ಬ್ರಹ್ಮರಥೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಕೋಟಿಲಿಂಗೇಶ್ವರ ಬ್ರಹ್ಮರಥ ರಾಜ್ಯದಲ್ಲಿರುವ ಬ್ರಹ್ಮ ರಥಗಳ ಪೈಕಿ ದೊಡ್ಡದು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಧ್ವಜ ಸ್ತಂಭಕ್ಕೆ ಗರ್ನಪಠಾರೋಹಣ (ಗರ್ನ ಕಟ್ಟುವುದು) ನಡೆದ ಬಳಿಕ, ಉತ್ಸವದ ಧಾರ್ಮಿಕ ವಿಧಿಗಳ ಪ್ರಾರಂಭವಾಗುತ್ತದೆ. ನ.11 ರಂದು ನಡೆದ ಅಂಕುರಾರೋಹಣದಿಂದ ನ.24 ರಂದು ನಡೆಯುವ ಅವಭೃತ ಸ್ನಾನ ಹಾಗೂ ಓಕುಳಿಯಾಟದವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಜಾತ್ರೆಯ ಪೂರ್ವಭಾವಿಯಾಗಿ ಕಟ್ಟ ಕಟ್ಟಳೆ ’ಕಟ್ಟೆ ಸೇವೆ’ಗಾಗಿ ಸುತ್ತ-ಮುತ್ತಲಿನ ಗ್ರಾಮಗಳ ಮನೆ ಬಾಗಿಲಿಗೆ ಬರುವ ಶ್ರೀ ದೇವರನ್ನು ಅತ್ಯಂತ ಶೃದ್ದೆಯಿಂದ ಬರಮಾಡಿಕೊಂಡು ಪೂಜೆಯನ್ನು ಸಲ್ಲಿಸುವುದು ವಾಡಿಕೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಬದಲಾಗಿರುವುದರಿಂದಾಗಿ ಹೆಚ್ಚಿನ ಪಾರಂಪರಿಕ ಕಟ್ಟೆಗಳು ಬದಲಾಗಿದ್ದರೂ, ಅನಾದಿ ಕಾಲದಿಂದ ಪಾಲಿಸಿಕೊಂಡು ಬಂದಿರುವ ಪೂಜಾ ಪದ್ದತಿ ಬದಲಾಗಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಲಾದ ಕಟ್ಟೆಗಳಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸುವ ಸಂಪ್ರದಾಯಗಳು ಪ್ರಾರಂಭವಾಗಿದೆ.

ಕೊಡಿ ಹಬ್ಬ: ಕರಾವಳಿ ಜಿಲ್ಲೆಯ ಜನರ ಆಡು ಭಾಷೆಯಲ್ಲಿ ಜನಜನಿತವಾಗಿರುವ ‘ಕೊಡಿ ಹಬ್ಬ’ ಎನ್ನುವ ಹೆಸರು ಹುಟ್ಟಿಕೊಳ್ಳಲು ಹಲವು ಕಾರಣಗಳನ್ನು ಹೇಳಲಾಗುತ್ತಿದೆ. ಕೋಟಿಲಿಂಗೇಶ್ವರನಿಗೆ ಬ್ರಹ್ಮ ರಥ ಅರ್ಪಣೆ ಮಾಡಲು ನಿಶ್ಚಯಿಸಿದ್ದ ಮಾಹಿಷ್ಮತಿ ರಾಜನಾದ ವಸು ಮಹಾರಾಜನಿಗೆ ಜಾತ್ರೆಯ ದಿನವಾದರೂ ರಥ ನಿರ್ಮಾಣ ಸಾಧ್ಯವಾಗದೆ ಇದ್ದುದರಿಂದಾಗಿ, ಕೊಡಿ (ಬಿದಿರು) ಯಿಂದ ನಿರ್ಮಿಸಿದ ರಥದಲ್ಲಿ ಮೊದಲ ಉತ್ಸವ ನಡೆಯಿತು ಎನ್ನುವುದಕ್ಕಾಗಿ ’ಕೊಡಿ ಹಬ’ ಎಂದಾಯಿತು ಎನ್ನುವ ಇತಿಹಾಸವಿದೆ. ಪ್ರತಿ ವರ್ಷವೂ ಜಾತ್ರೆಗೆ ಆಗಮಿಸುವ ನವ ದಂಪತಿಗಳು ದೇವರ ದರ್ಶನ ಮಾಡಿ ಕೊಡಿ (ಕಬ್ಬಿನ ಜಲ್ಲೆ) ಯನ್ನು ತೆಗೆದುಕೊಂಡು ಹೋದರೆ, ಸಂತಾನದ ಕೊಡಿ ಅರಳುತ್ತದೆ ಎನ್ನುವ ನಂಬಿಕೆಗಳು ಇಲ್ಲಿದೆ.

(File Pics)

ಕೋಟಿ ತೀರ್ಥ: ಕೋಟಿ ಋಷಿಗಳು ಒಂದಾಗಿ ತಪ್ಪಸ್ಸು ಮಾಡಿದ ಮೋಕ್ಷ ಕ್ಷೇತ್ರ ಎನ್ನುವ ಕಾರಣಕ್ಕಾಗಿ ಕೋಟೀಲಿಂಗೇಶ್ವರ ದೇಗುಲ ಸ್ಥಾಪನೆಯಾಗಿರುವ ಕುರಿತು ಪುರಾಣಗಳು ಬೆಳಕು ಚಲ್ಲುತ್ತವೆ. ಭವ್ಯ ದೇವಸ್ಥಾನದ ಮೇಲ್ಛಾವಣೆಗಾಗಿ ಜೋಡಿಸಲಾದ ಕಲ್ಲುಗಳ ಕೆಳ ಭಾಗದಲ್ಲಿ ನಿಂತು ಮೇಲೆ ದೃಷ್ಟಿ ಹಾಯಿಸಿದರೆ ಭಯ ಹುಟ್ಟಿಸುವಂತೆ ಬ್ರಹತ್‌ ಶಿಲೆಗಳ ಕಂಬಗಳನ್ನು ಜೋಡಿಸಿ ದೇವಾಲಯದ ರಚನೆಯಾಗಿದೆ.

ಅಂದಾಜು 4.5 ಎಕ್ರೆ ವಿಸ್ತಿರ್ಣವನ್ನು ಹೊಂದಿರುವ ಕೋಟಿ ತೀರ್ಥ ಪುಷ್ಕರಣಿ ನೋಡುಗರ ಕಣ್ಮನವನ್ನು ಸೆಖೆಯುತ್ತದೆ.ಜಾತ್ರೆಯಂದು ನಸುಕಿನಲ್ಲಿ ಆಗಮಿಸುವ ಭಕ್ತರು ಪುಷ್ಕರಣಿಯಲ್ಲಿ ಸ್ನಾನ ಮಾಡಿ, ಸರೋವರದ ಸುತ್ತು ಬಿಳಿ ಬಟ್ಟೆಯನ್ನು ಹಾಸಿರುವ ಅಪೇಕ್ಷಿತರಿಗೆ, ಮುಷ್ಠಿ ಅಕ್ಕಿಯನ್ನು ಹಾಕಿ, ದೇವರ ದರ್ಶನ ಪಡೆಯುತ್ತಾರೆ. ಈ ರೀತಿ ನಡೆಯುವ ಸೇವೆಗೆ ‘ಸುತ್ತಕ್ಕಿ’ ಸೇವೆ ಎನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಕಿ ಅಪೇಕ್ಷಿತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದಾಗಿ ಹರಕೆ ಸೇವೆಯ ಪೂರೈಕೆಗಾಗಿ ಬರುವ ಭಕ್ತರು ಸರೋವರಕ್ಕೆ ಎಸೆಯುವ ಅಕ್ಕಿಗಳು ಅಲ್ಲಿನ ಮೀನುಗಳ ಜೀವಕ್ಕೆ ಸಂಚಕಾರ ತರುತ್ತಿರುವ ಘಟನೆಗಳು ನಡೆದಿದೆ.

ಜಾತಿ-–ಮತವನ್ನು ಮೀರಿದ ಕೊಡಿ ಹಬ್ಬದಲ್ಲಿ ಎಲ್ಲ ಧರ್ಮದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಂಘ ಸಂಸ್ಥೆಗಳು ಪೇಟೆಯನ್ನು ದೀಪಾಲಂಕಾರಗಳಿಂದ ಸಿಂಗರಿಸುವ ಮೂಲಕವಾಗಿ ಹಬ್ಬಕ್ಕೆ ಮೆರಗು ನೀಡುತ್ತಾರೆ. ಹಬ್ಬಕ್ಕಾಗಿ ಹಮ್ಮಿಕೊಳ್ಳುವ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಬರುತ್ತಾರೆ. ಜಾತ್ರೆಯ ಮಾರನೇಯ ದಿನ ಮಧ್ಯರಾತ್ರಿಯ ಹೊತ್ತಿನಿಂದ ನಸುಕಿನ ತನಕ ನಡೆಯುವ ಪಾರಂಪರಿಕ ಓಕುಳಿಯಾಟಕ್ಕೂ ಸಾಕಷ್ಟು ಹಿನ್ನೆಲೆ ಇದೆ. ಮಾರ್ಕೋಡು, ಮಲ್ಯಾಡಿ ಹಾಗೂ ತೆಕ್ಕಟ್ಟೆಯ ಬಂಟ ಸಮುದಾದವರು ಪಾಲ್ಗೊಂಡು ಮಧ್ಯರಾತ್ರಿ ದೇವರೊಂದಿಗೆ ನಡೆಸುವ ಓಕುಳಿಯಾಟವನ್ನು ನೋಡಲು ಕೊರೆಯುವ ಚಳಿಯ ನಡುವೆಯೂ ಸಾವಿರಾರು ಜನರು ಕಾದಿರುತ್ತಾರೆ.

Comments are closed.