ಕರಾವಳಿ

‘ಮೊಬೈಲ್ ಎಸೆತ ಸ್ಪರ್ಧೆ’; ಹಳೆ ಮೊಬೈಲ್ ದೂರಕ್ಕೆಸೆದು 4ಜಿ ಸ್ಮಾರ್ಟ್ ಫೋನ್ ಪಡೆದ್ರು!

Pinterest LinkedIn Tumblr

ಕುಂದಾಪುರ: ನಿನ್ನೆ ರಜಾ ದಿನ. ಅಲ್ಲೊಂದು ಶಾಲೆ ಮೈದಾನದಲ್ಲಿ ನೂರಾರು ಮಂದಿ ಜಮಾಯಿಸಿದ್ರು. ತಮ್ಮ ಬಳಿಯಿದ್ದ ಮೊಬೈಲ್ ಫೊನನ್ನು ದೂರಕ್ಕೆ ಎಸೆದು ಸಂಭ್ರಮಿಸಿಸ್ತಾ ಇದ್ರು. ಅಷ್ಟಕ್ಕೂ ಅದ್ಯಾಕೆ ಅವರೆಲ್ಲಾ ಮೊಬೈಲ್ ಎಸಿತಿದ್ರು, ಅದೇನು ಕಾಂಪಿಟೇಷನ್ ಅನ್ನೋದರ ಕುರಿತ ಒಂದು ಇಂಟರೆಸ್ಟಿಂಗ್ ಸ್ಟೋರಿಯಿಲ್ಲಿದೆ ನೋಡಿ.

ಮೊಬೈಲ್ ಜಮಾನಾದಲ್ಲಿ ನಾವಿದ್ದೇವೆ. ಬೆಳಗ್ಗೆ ಎದ್ದು ರಾತ್ರಿ ಮಲಗೋ ತನಕ ಮೊಬೈಲ್ ಇಲ್ಲದೆ ಯಾವುದೂ ಆಗೋದೇ ಇಲ್ಲ. ಆದ್ರೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಕ್ಕೆಲ್ಲ ಮೊಬೈಲ್ ಮೇಲೆ ಜಿಗುಪ್ಸೆ ಬಂದಂತೆ ಇತ್ತು. ಜೇಬಿಂದ ತೆಗೆದು ತಮ್ಮ ಬಳಿಯಿದ್ದ ಮೊಬೈಲನ್ನು ಜನ ಎತ್ತಿ ಎತ್ತಿ ಬಿಸಾಕುತ್ತಿದ್ದರು. ನಾ ಮುಂದು ತಾ ಮುಂದು ಅಂತ ಬಂದು ದೂರ ದೂರ ಮೊಬೈಲನ್ನು ಎಸೆಯುತ್ತಿದ್ದರು. ಗೋಳಿಯಂಗಡಿಯಲ್ಲಿ ನಡೆದ ಸ್ಪೆಷಲ್ ಕಾಂಪಿಟೇಷನ್ ಇದು. ಪ್ರಗತಿ ಎಂಟರ್ಪ್ರೈಸಸ್ ಎಂಬ ಮೊಬೈಲ್ ಅಂಗಡಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ತಮ್ಮ ಬಳಿಯಿದ ಹಳೆಯ ಮೊಬೈಲನ್ನು ಯಾರು ದೂರಕ್ಕೆ ಎಸೆಯುತ್ತಾರೋ ಅವರು ಗೆದ್ದಂತೆ. ಗೆದ್ದವರಿಗೆ ಹೊಸದೊಂದು ಮೊಬೈಲನ್ನು ಆಯೋಜಕರು ನೀಡುತ್ತಿದ್ದರು.

ಇನ್ನು ಜಿಲ್ಲೆಯಲ್ಲಿ‌ ಎರಡನೇ ಬಾರಿ ನಡೆದ ಈ ಮೊಬೈಲ್ ಎಸೆತ ಸ್ಪರ್ದೇ ವಾಟ್ಸಾಪ್ ಫೇಸ್ ಬುಕ್ನಲ್ಲಿ ಭಾರೀ ಪ್ರಚಾರ ಪಡೆದಿತ್ತು.ನೂರಾರು ಮಂದಿ ಮೊಬೈಲ್ ಎಸೆಯೋ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಮೈದಾನದಲ್ಲಿ ಕ್ರಿಕೆಟ್ ಆಟದ ಸಂದರ್ಭ ಫೀಲ್ಡರ್ ಬಾಲ್ ಎಸೆದಂತೆ ಯುವಕರು ಮೊಬೈಲ್ ಎಸೆಯುತ್ತಿದ್ದರು. ವಿಭಿನ್ನ ಕಾಂಪಿಟೇಶನ್ ಮೂಲಕ ತಮ್ಮ ಮೊಬೈಲ್ ಅಂಗಡಿಗೆ ಪ್ರಚಾರ ಸಿಕ್ಕಿದೆಯಂತೆ. ಮೊಬೈಲ್ ಎಸೆತ ಸಂದರ್ಭ ಒಟ್ಟಾದ ನೂರಾರು ಹಳೆಯ ಮೊಬೈಲ್ಗಳ ಬಿಡಿಭಾಗಗಳನ್ನು ತೆಗೆದು ಮುಂದೆ ಉಪಯೋಗ ಮಾಡ್ತಾರಂತೆ. ಗ್ರಾಹಕರಿಗೆ ಕಡಿಮೆ ಬೆಲೆಗೆ ಬಿಡಿಭಾಗ ಅಳವಡಿಸಿಕೊಡುತ್ತಾರಂತೆ. ಇ ವೇಸ್ಟ್ ಖರೀದಿ ಕಂಪನಿ ಆಯೋಕರನ್ನು ಸಂಪರ್ಕಿಸಿದ್ದು, ಎಲ್ಲಾ ಮೊಬೈಲ್ ಖರೀದಿ ಮಾಡುವ ಭರವಸೆಯನ್ನೂ ನೀಡಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಕುಂದಾಫುರದ ಗೋಳಿಯಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಮೊಬೈಲ್ ಎಸೆತ ಸ್ಪರ್ಧೆ ಭಾನುವಾರ ಮುಕ್ತಾಯಗೊಂಡಿದೆ. ಈ ಸ್ಪರ್ಧೆಯಲ್ಲಿ 77. 90 ಮೀಟರ್ ದೂರ ಹಳೆ ಮೊಬೈಲ್ ಎಸೆದ ಶೇಖರ್ ಸೆಟ್ಟೊಳ್ಳಿ ಪ್ರಥಮ ಸ್ಥಾನ ಪಡೆದಿದ್ದು, ಬಹುಮಾನವಾಗಿ 4ಜಿ ಸ್ಮಾರ್ಟ್ ಫೋನ್ ತಮ್ಮದಾಗಿಸಿಕೊಂಡರು.ಇನ್ನು 72.70 ಮೀ. ದೂರ ಎಸೆದ ರಾಜೇಶ್ ಸೆಟ್ಟೊಳ್ಳಿ ದ್ವಿತೀಯ ಸ್ಥಾನ ಪಡೆದು ಆಂಡ್ರಾಯ್ಡ್ ಫೋನ್ ಪಡೆದುಕೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೀವ್ರ ಪ್ರಚಾರ ಲಭಿಸಿದ್ದರಿಂದ ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾಗವಹಿಸಿದ ಸ್ಪರ್ಧಾಳುಗಳಿಗೆ 20ರೂ. ಪ್ರವೇಶ ಶುಲ್ಕ ವಿಧಿಸಲಾಗಿತ್ತು. ಸ್ಪರ್ಧಿಗಳು ಎಸೆದ ಮೊಬೈಲ್ ಗಳನ್ನು ಅವರಿಗೆ ಹಿಂದಿರುಗಿಸದೆ ಸಂಗ್ರಹಿಸಲಾಗಿದ್ದು, ಸುಮಾರು 250ಕ್ಕೂ ಅಧಿಕ ಹಳೆಯ ಮೊಬೈಲ್ ಫೋನ್ ಗಳು ಸಂಗ್ರಹಗೊಂಡವು.

(ವರದಿ, ಚಿತ್ರ- ಯೋಗೀಶ್ ಕುಂಭಾಸಿ)

Comments are closed.