ಕರಾವಳಿ

ವಕ್ವಾಡಿ ಗುರುಕುಲ ಶಾಲೆಯಲ್ಲಿ ಸಾಂಪ್ರಾದಾಯಿಕ ಸಸ್ಯಗಳ ಆಹಾರಗಳ ಸವಿ ‘ಸಸ್ಯಾಮೃತ’!

Pinterest LinkedIn Tumblr

ಕುಂದಾಪುರ: ಕುಂದಾಪುರದ ವಕ್ವಾಡಿಯ ಗುರುಕುಲ ಸಂಸ್ಥೆಯಲ್ಲಿ ಈ ಆಷಾಡದ ಭಾನುವಾರದಂದು ಸಂಭ್ರಮದ ವಾತಾವರಣವಿತ್ತು. ಭಾನುವಾರದ ಆ ರಜಾ ಸಮಯ ಮನೆಯಲ್ಲಿ ತಮಗೆ ಬೇಕಾದ ಅಡುಗೆ ತಯಾರಿಸುತ್ತಿದ್ದ ಆ ಮಂದಿ ಶಾಲೆಯಲ್ಲಿ ನೆರೆದಿದ್ದಲ್ಲದೇ ಅಲ್ಲಿ ಪಕ್ಕಾ ಸಸ್ಯಾಹಾರಿ ಔಷದೀಯ ಖಾದ್ಯಗಳ ರುಚಿ ಸವಿದು ಖುಷಿಪಟ್ಟರು. ಗುರುಕುಲ ಶಾಲೆಯಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಕರಾವಳಿಯಲ್ಲಿ ಮಳೆಗಾಲದ ಈ ಆಷಾಡ ಸಂದರ್ಭದಲ್ಲಿ ಊಟೋಪಚಾರಕ್ಕೆ ಅದರದ್ದೇ ಆದ ಮಹತ್ವವನ್ನು ನೀಡಲಾಗುತ್ತೆ. ಅಂತೆಯೇ ಉತ್ತಮ ಶಿಕ್ಷಣದ ಜೊತೆಗೆ ಸದಾ ಹೊಸತನವನ್ನು ಪರಿಚಯಿಸುತ್ತಿರುವ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಇದರ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಸೇರಿದಂತೆ ಆಹಾರ, ಕ್ರೀಡೆ, ಸಂಸ್ಕೃತಿ-ಸಾಂಸ್ಕೃತಿಕ, ಆರೋಗ್ಯ-ಯೋಗಕ್ಕೂ ಮಹತ್ವ ನೀಡಲಾಗ್ತಿದೆ. ಆಧುನಿಕ ಶೈಲಿಯ ಆಹಾರ ಕ್ರಮದಿಂದ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ ಸಂಗತಿಯಾಗಿದ್ದು ಜನರಲ್ಲಿ ಆಹಾರ ಕ್ರಮದ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಕ್ಕಾ ದೇಸಿ ಶೈಲಿಯ ಆಹಾರ ಕ್ರಮದ ಬಗ್ಗೆ ಕಾಳಜಿಯುಳ್ಳ ‘ಸಸ್ಯಾಮ್ರತ’ ಎನ್ನುವ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಕಳೆದ ಆರು ವರ್ಷಗಳಿಂದ ಗುರುಕುಲ ಸಮೂಹ ಸಂಸ್ಥೆಯಲ್ಲಿ ನಡೆಸಿಕೊಂಡು ಬರುತ್ತಿರುವ ಈ ಸಸ್ಯಾಮೃತದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಸಹಾಯಕ ಪ್ರೊಪೇಸರ್ ಡಾ. ರವಿಕ್ರಷ್ಣ ಎಸ್. ಭಾಗವಹಿಸಿ ಆಹಾರ ಹಾಗೂ ಆರೋಗ್ಯ ಮತ್ತು ಆಚಾರ-ವಿಚಾರದ ಬಗ್ಗೆ ಮಾಹಿತಿ ನೀಡಿದ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಿದ್ರು. ಗುರುಕುಲ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಮೂವತ್ತೊಂದು ಬಗೆಯ ಖಾದ್ಯ!
ಗುರುಕುಲ ಸಂಸ್ಥೆಯ ‘ಪಂಚವಟಿ’ ಸಭಾಂಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರಿಗೆ ಮೊದಲಿಗೆ ಪುದೀನಾ ಜ್ಯೂಸ್ ನೀಡಿ ಬರಮಾಡಿಕೊಳ್ಳಲಾಗಿತ್ತು. ಮಧ್ಯಾಹ್ನದ ಊಟದ ಮೆನುವಿನಲ್ಲಿ ಕಣಿಲೆ ಪಲ್ಯ, ಜಾಯಿಕಾಯಿ ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಸಾಂಬಾರ್ ಬಳ್ಳಿ ಸೊಪ್ಪಿನ ಚಟ್ನಿ, ಕೆಸುವಿನ ದಂಟಿನ ಸಾಸಿವೆ, ಮೆಂತೆ ಸೊಪ್ಪಿನ ಸಾಸಿವೆ, ಕರಿಬೇವಿನೆಲೆ ಚಟ್ನಿ, ಸಂದುಬಳ್ಳಿ ಚಟ್ನಿ, ವಾತಂಗಿ ಸೊಪ್ಪಿನ ಚಟ್ನಿ, ಪತ್ರೊಡೆ ಪಲ್ಯ, ಬಾಳೆದಿಂಡಿನ ಪಲ್ಯ, ಮಾವಿನಕಾಯಿ ಮಂಗರಸ, ದಾಸವಾಳ ಸೊಪ್ಪಿನ ಇಡ್ಲಿ, ಸಬ್ಬಕ್ಕಿ ಸೊಪ್ಪಿನ ಶಾವಿಗೆ, ಪತ್ರೊಡೆ ಗಾಲಿ, ಎಲೆ ಉರಗ ಸೊಪ್ಪಿನ ಚಿತ್ರಾನ್ನ, ದಾಲ್ಚಿನ್ನಿ ಎಲೆ ಕಡುಬು, ಅನ್ನ, ಬೂದು ನೇರಳೆ ತಂಬುಳಿ, ಅತ್ತಿಕುಡಿ ತಂಬಳಿ, ಕಬ್ಬಹೆಸರು ಸಾರು, ನೆಕ್ಕರೆ ಸೊಪ್ಪಿನ ಪಳದಿ, ಹಲಸಿನ ಹಣ್ಣಿನ ಬರ್ಫಿ, ಹಲಸಿನ ಬೀಜದ ವಡೆ, ಬಾಳೆ ಕಾಯಿ ಸಂಜೀವನ, ಬಾಳೆಕುಂಡಿಗೆ ಬಜೆ, ತೊಡೆದೇವು, ನುಗ್ಗೆ ಸೊಪ್ಪಿನ ಬೋಂಡಾ, ಸಾಮೆ ಅಕ್ಕಿಯ ಪಾಯಸ, ಮಜ್ಜಿಗೆ ಹುಲ್ಲಿನ ಮಜ್ಜಿಗೆ ಸೇರಿದಂತೆ ಒಟ್ಟು 31 ಬಗೆಯ ವಿವಿಧ ಔಷಧೀಯ ಹಾಗೂ ಸಾಂಪ್ರದಾಯಿಕ ಸಸ್ಯಗಳ ಖಾದ್ಯಗಳನ್ನು ಸವಿದ ಆಹ್ವಾನಿತರು ನಿಜಕ್ಕೂ ಖುಷಿಪಟ್ಟರು.

ಕ್ಯಾಂಪಸ್ಸಿನಲ್ಲೇ ಬೆಳೆದ ಸಸ್ಯಗಳು…
ಇನ್ನು ಒಂದು ವಿಶೇಷವೆಂದರೆ ಸಂಸ್ಥೆಯ ಸುತ್ತಮುತ್ತಲಿನ ಸ್ಥಳದಲ್ಲಿ ಪೋಷಿಸಿಕೊಂಡು ಬರುತ್ತಿರುವ 400ಕ್ಕೂ ಅಧಿಕ ಸಸ್ಯ ಪ್ರಬೇಧಗಳನ್ನು ಹಾಗೂ ಕಾಡುಗಳಿಂದ ತಂದ ಸಸ್ಯಗಳನ್ನು ಮಾತ್ರವೇ ಉಪಯೋಗಿಸಿಕೊಂಡು ಈ ಆಹಾರವನ್ನು ನುರಿತ ಬಾಣಸಿಗರಿಂದ ತಯಾರಿಸಲಾಗಿತ್ತು. ಈ ಅಡುಗೆಯಲ್ಲಿ ಮಾರುಕಟ್ಟೆಯ ಯಾವುದೇ ಉತ್ಪನ್ನವನ್ನು ಬಳಸಿಲ್ಲ ಎನ್ನುವುದು ಮತ್ತೊಂದು ವಿಶೇಷ. ಬಾಣಸಿಗ ಮಹಾಬಲ ಹರಿಕಾರ ಮತ್ತು ಸಂಗಡಿದವರು ಈ ಖಾದ್ಯ ತಯಾರು ಮಾಡಿದ್ರು.

ಒಟ್ಟಿನಲ್ಲಿ ಪಾಶ್ಚಾತ್ಯ ಸಂಸ್ಕ್ರತಿಗೆ ಮಾರುಹೋಗಿ ಆಹಾರ ಪದ್ದತಿಯಲ್ಲೂ ಬದಲಾವಣೆ ಮಾಡಿಕೊಂಡ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬೆನ್ನಲ್ಲೇ ವಿದ್ಯಾಸಂಸ್ಥೆಯೊಂದು ಸಾಂಪ್ರದಾಯಿಕ ಸಸ್ಯಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ಇಂತಹದ್ದೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ವಿಚಾರವೇ ಆಗಿದೆ.

ಚಿತ್ರ, ವರದಿ -ಯೋಗೀಶ್ ಕುಂಭಾಸಿ

Comments are closed.