ಕರಾವಳಿ

ರಮ್ಜಾನ್ ಹಬ್ಬದ ಪ್ರಯುಕ್ತ ‘ಹಸಿರು ಕೂಟ’; ಗಿಡ ಉಡುಗೊರೆ ನೀಡಿ ಶುಭಾಶಯ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ನಾಗರೀಕ ಸಮಿತಿಯಿಂದ ರಮ್ಜಾನ್ ಹಬ್ಬದ ಪ್ರಯುಕ್ತವಾಗಿ ‘ಹಸಿರು ಕೂಟ’ ಎನ್ನುವ, ಭಾವೈಕ್ಯತೆಯ ಶುಭಾಶಯ ಕೋರುವ ವಿನೂತನವಾದ ಕಾರ್ಯಕ್ರಮ ನಗರದ ಜಾಮೀಯಾ ಮಸೀದಿಯ ವಠಾರದಲ್ಲಿ ಜರುಗಿತು.

ಮುಸ್ಲಿಂ ಬಂಧುಗಳು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರ ಬರುವಾಗ, ಗಿಡ ನೀಡಿ ರಮ್ಜಾನ್ ಹಬ್ಬದ ಶುಭಾಶಯವನ್ನು ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ ಕೊರಿದರು. ಮುಸ್ಲಿಂ ಬಾಂಧವರು ಪ್ರೀತಿಯ ಅಪ್ಪುಗೆಯಿಂದ ಸಮಿತಿಯ ಕಾರ್ಯಕರ್ತರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮಾವು, ಹಲಸು, ಬಿಲ್ಲಪತ್ರ, ಚಂದ್ರಪ್ರಭ, ಕಹಿಬೇವು, ನೀಲಪುಷ್ಪ, ಬಾದಾಮಿ, ಚರ್ರಿ, ಬಡ್ಡುಪುಳಿ, ನೆರಳೆ, ನೆಲ್ಲಿ ಮೊದಲಾದ ಬೆಲೆಬಾಳುವ 300 ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಆಯಕಟ್ಟಿನ ಸ್ಥಳದಲ್ಲಿ ಗಿಡವನ್ನು ನೆಟ್ಟು, ಜೋಪಾನವಾಗಿ ಪೊಷಿಸುವ ಭರವಸೆ ಮಾತುಗಳು ಸ್ಥಳದಲ್ಲಿ ಗಿಡ ಸ್ವಿಕರಿಸಿದವರಿಂದ ವ್ಯಕ್ತವಾದವು.

ಮುಸ್ಲಿಂ ಸಮಾಜದ ಗಣ್ಯರುಗಳಾದ ಮಹಮ್ಮದ್ ಮೌಲ, ವಿ.ಎಸ್.ಉಮರ್, ಖಾಲಿದ್ ಅಬ್ದುಲ್ ಅಜೀದ್, ಶಾಹಿದ್ ಅಲಿ, ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಹಬ್ಬದಲ್ಲೂ ಹಸಿರು ಪ್ರಜ್ಞೆ, ಸೌರ್ಹಾದತೆ ಮೂಡಿಸಿದ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ವಿನೂತನ ಕಾರ್ಯಕ್ರಮದ ಬಗ್ಗೆ, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಯಿತು.

Comments are closed.