ಕರಾವಳಿ

ಮಕ್ಕಳು ತಿನ್ನಲು ಹಠ ಮಾಡುತ್ತಾರೆ” ಎಂಬ ಗೋಳು ದೂರ ಮಾಡಲು ಈ ಅಭ್ಯಾಸಗಳನ್ನ ಕಲಿಸಿ

Pinterest LinkedIn Tumblr

ಮಕ್ಕಳು ಮತ್ತು ಊಟದ ವಿಷಯ ಬಂದಾಗ, ಪೋಷಕರು ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ – ಅವುಗಳೇ “ಚೆನ್ನಾಗಿ ತಿನ್ನುವವರು” ಮತ್ತು “ತಿನ್ನಲು ಹಠ ಮಾಡುವವರು”. ಚೆನ್ನಾಗಿ ತಿನ್ನುವ ಮಕ್ಕಳು ಎಂದರೆ ತರಕಾರಿಗಳನ್ನು ತಿನ್ನುವವರು ಮತ್ತು ಹೊಸ ಬಗೆಯ, ಅಂದರೆ ದೊಡ್ಡವರು ತಿನ್ನುವ ತಿನಿಸುಗಳನ್ನ ಪ್ರಯತ್ನಿಸಲು ಇಷ್ಟಪಡುವ ಮಕ್ಕಳು ಎಂದು. ತಿನ್ನಲು ಹಠ ಮಾಡುವವರು ಎಂದರೆ, ಅವರಿಗೆ ತಿನ್ನಲು ಏನೇ ಕೊಟ್ಟರು, ಮೂಗು ಮುರಿಯುವರು. ಹೌದು ಹೀಗೆ ತಿನ್ನಲು ಹಠ ಮಾಡುವ ಮಕ್ಕಳನ್ನ ನಿಭಾಯಿಸುವುದು ಪೋಷಕರಿಗೆ ಸುಲಭದ ಕೆಲಸ ಅಲ್ಲವೇ ಅಲ್ಲ. ಹಾಗಿದ್ದರೆ “ಚೆನ್ನಾಗಿ ತಿನ್ನುವ” ಮಕ್ಕಳನ್ನ ಬೆಳೆಸಬೇಕು ಎಂದರೆ ಅವರಿಗೆ ಯಾವೆಲ್ಲಾ ಅಭ್ಯಾಸಗಳನ್ನ ಪೋಷಕರು ಕಲಿಸಬೇಕು.

ತಜ್ಞರ ಪ್ರಕಾರ ಈ ಕೆಳಗೆ ತಿಳಿಸಿರುವ ಅಭ್ಯಾಸಗಳನ್ನ ರೂಢಿಸಿಕೊಳ್ಳುವ ಮೂಲಕ ಮಕ್ಕಳು ತಿನ್ನಲು ಹಠ ಮಾಡುವ ಬದಲು ತಾವಾಗಿಯೇ ತಿನ್ನುವಂತೆ ಆಗುತ್ತಾರೆ. ನೀವೂ ಈ ಅಭ್ಯಾಸಗಳನ್ನ ರೂಡಿಸಿಕೊಳ್ಳಿ.

೧. ನೀವು ಅವರಿಗೆ ಮಾದರಿ ಆಗಿ
ಇದೇನೂ ಹೊಸದಾಗಿ ಹೇಳುವುದು ಬೇಕಿಲ್ಲ, ಒಂದು ವೇಳೆ ನಿಮ್ಮ ಊಟನು ಮಗುವು ಅರ್ಧ ತಿಂದು ಬಿಟ್ಟಿರುವ ಬನ್ ಅಥವಾ ಪಿಜ್ಜಾ ತಿನ್ನುವುದು ಆಗಿದ್ದರೆ, ನಿಮ್ಮ ಮಗುವು ಆರೋಗ್ಯವಾದದನ್ನು ತಿನ್ನುವಂತೆ ನೀವು ಅಪೇಕ್ಷಿಸಲು ಸಾಧ್ಯವಿಲ್ಲ. ಒಂದು ವೇಳೆ ನೀವು ತರಕಾರಿ, ಹಣ್ಣುಗಳನ್ನ ತಿನ್ನದೇ ಇದ್ದರೆ, ನಿಮ್ಮ ಮಕ್ಕಳು ಅವುಗಳನ್ನ ತಿನ್ನುವ ಸಾಧ್ಯತೆಗಳು ಕಡಿಮೆ.

ಆರೋಗ್ಯವಾದದ್ದು ತಿನ್ನಲು ಕೂಡ ರುಚಿಯಾಗಿರುತ್ತದೆ ಎಂಬುದನ್ನ ಅವರಿಗೆ ನೀವು ತೋರಿಸಬೇಕು.

೨. ಒಂದೇ ತಿನಿಸನ್ನು ಮುಕ್ಕಿಸಬೇಡಿ
ನಿಮ್ಮ ಮಗುವು ಕೊನೆಗೂ ಯಾವುದಾದರು ಒಂದು ಆರೋಗ್ಯಕರ ತಿನಿಸನ್ನು ಒಪ್ಪಿಕೊಂಡು, ಇಷ್ಟಪಟ್ಟು ತಿಂದಿತು ಎಂದೊಡನೆ, ದಿನಕ್ಕೆ ಮೂರೂ ಹೊತ್ತು ಅದನ್ನೇ ಕೊಡುತ್ತ ಇದ್ದುಬಿಡುತ್ತೀವಿ. ಇದು ಅರ್ಥವಾಗುತ್ತದೆ. ಆದರೆ, ನೀವು ಹೀಗೆ ಮಾಡಿದರೆ, ಮಗುವು ಅದಕ್ಕೆ ಮುಗಿಬೀಳುತ್ತದೆ ಮತ್ತು ಯಾವ ಹೊಸ ತಿನಿಸನ್ನು ಪ್ರಯತ್ನಿಸಲು ಹಿಂದೇಟು ಹಾಕಲು ಶುರು ಮಾಡುತ್ತದೆ.

ಪುನಃ ಹೀಗೆ ಮಗು ಹಠ ಮಾಡುವುದಕ್ಕೆ ಮಣಿದು ಆ ತಿನಿಸನ್ನೇ ನೀಡುತ್ತಿದ್ದರೆ, ಮಗುವಲ್ಲಿ ಯಾವುದೇ ಬದಲಾವಣೆ ಆಗುವುದೇ ಇಲ್ಲ. ಹೊಸ ಹೊಸ ತಿನಿಸುಗಳನ್ನ ಮಗುವಿಗೆ ನೀಡುತ್ತೀರಿ ಮತ್ತು ಮಧ್ಯದಲ್ಲಿ ಮಗುವು ಇಷ್ಟಪಡುವ ಆ ಒಂದು ತಿನಿಸನ್ನು ಆಗೊಮ್ಮೆ – ಈಗೊಮ್ಮೆ ನೀಡಬಹುದು.

೩. ತರಕಾರಿ ಖರೀದಿಗೆ ಅವರನ್ನೂ ಕರೆದುಕೊಂಡು ಹೋಗಿ
ಹೌದು, ಮಕ್ಕಳನ್ನ ತರಕಾರಿ ತರಲೆಂದು ಮಾರುಕಟ್ಟೆಗೆ ಕರೆದುಕೊಂಡು ಹೋದರೆ, ಹೆಚ್ಚು ಸಮಯ ಕಳೆಯಬೇಕಾಗುತ್ತದೆ ಮತ್ತು ಹೆಜ್ಜೆ ಹೆಜ್ಜೆಗೂ ಅವರನ್ನ ಹಿಡಿದುಕೊಂಡು ನಡೆಯಬೇಕಾಗುತ್ತದೆ. ಆದರೆ ನಿಮ್ಮ ಮಕ್ಕಳಿಗೆ ಹೊಸ ಆಯ್ಕೆಗಳು ಎಷ್ಟೊಂದಿವೆ ಎಂದು ತೋರಿಸಲು, ಅವರಿಗೆ ಮನವರಿಕೆ ಮಾಡಲು ಇದು ಅತ್ಯುತ್ತಮವಾದ ಕೆಲಸ.

ಅಷ್ಟೇ ಅಲ್ಲದೆ ಹೀಗೆ ಮಾರುಕಟ್ಟೆಗೆ ಅವರನ್ನ ಕರೆದೊಯ್ಯುವ ಮೂಲಕ, ಅವರಿಗೆ ಪೋಷಕಾಂಶಗಳ ಬಗ್ಗೆ ತಿಳಿಸಿ ಹೇಳಲು ಒಳ್ಳೆಯ ಅವಕಾಶ ಸಿಕ್ಕಂತೆ ಆಗುತ್ತದೆ. ನೀವು ತರಕಾರಿ, ಹಣ್ಣುಗಳನ್ನ ಖರೀದಿಸುವಾಗ, ನಿಮಗೆ ತಿಳಿಯದೆಯೇ ನಿಮ್ಮ ಮಗುವಿಗೆ ನೀವು ಮಾದರಿ ಆಗಿಬಿಡುತ್ತೀರಿ. ಮುಖ್ಯವಾಗಿ ನೀವು ಅವುಗಳನ್ನ ಕೊಳ್ಳುವಾಗ, ಅವರಿಗೆ ಅವುಗಳ ಮಹತ್ವ ತಿಳಿಸುವಾಗ.

೪. ಅಡುಗೆ ಮನೆಯಲ್ಲಿ ಅವರು ನಿಮಗೆ ಸಹಾಯ ಮಾಡಲು ಬಿಡಿ
ನೀವೇ ಗಡಿಬಿಡಿಯಲ್ಲಿ ಅಡುಗೆ ಮಾಡಿ ಮನೆಮಂದಿಗೆಲ್ಲಾ ಬಡಿಸಬೇಕು ಎನ್ನುತ್ತಿರುವಾಗ, ಮಕ್ಕಳನ್ನ ಅಡುಗೆ ಮನೆಯೊಳಗೇ ಬಿಟ್ಟುಕೊಳ್ಳುವುದು ತಲೆನೋವು ಹೆಚ್ಚು ಮಾಡಿಕೊಂಡಂತೆ ಎಂದು ಅನಿಸಬಹುದು. ಆದರೆ, ಅವರನ್ನ ಅಡುಗೆ ಮನೆಯಲ್ಲಿ ಬಿಟ್ಟುಕೊಳ್ಳುವುದರಿಂದ ಅವರು ಅಡುಗೆ ಬಗ್ಗೆ ಅಷ್ಟೇ ಅಲ್ಲದೆ ತಿನ್ನುವುದರ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಅಡುಗೆಯಲ್ಲಿ ಮಕ್ಕಳು ಕೂಡ ಭಾಗವಹಿಸುವಂತೆ ಮಾಡಿದರೆ, ಅವರು ಹೊಸ ತಿನಿಸುಗಳನ್ನ ಪ್ರಯತ್ನಿಸಲು ಹೆಚ್ಚು ಮನಸು ಮಾಡುತ್ತಾರೆ.

ಈ ಎಲ್ಲಾ ಉಪಯೋಗಗಳು ಇತ್ತೀಚಿಗೆ ನಡೆದ ಅಧ್ಯಯನದಲ್ಲಿ ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

೫. ಹೊಟ್ಟೆ ತುಂಬಿದೆ ಎಂದು ಅವರಿಗೆ ಗೊತ್ತಾಗಲು ಬಿಡಿ
ಬಹಳಷ್ಟು ಪೋಷಕರು, “ಇದೊಂದು ತುತ್ತು ತಿನ್ನು, ಆಮೇಲೆ ಚಾಕಲೇಟ್ ಕೊಡಿಸ್ತೀನಿ” ಎಂದು ಪ್ರತಿನಿತ್ಯ ಅಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ಅಂತೂ ಮಾಡುತ್ತಲೇ ಇರುತ್ತಾರೆ. ಆದರೆ ಈ ರೀತಿ ಆಮಿಷ ಒಡ್ಡುವುದು, ಮಕ್ಕಳ ನೈಸರ್ಗಿಕ ತುಮುಲಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಈ ರೂಡಿಯನ್ನು ಮೊದಲು ಕೈ ಬಿಡಬೇಕು.

ನಿಮ್ಮ ಮಕ್ಕಳಿಗೆ ಅವರಿಗೆ ಎಷ್ಟು ಬೇಕು, ಅವರಿಗೆ ಹೊಟ್ಟೆ ತುಂಬಿದೆಯೇ ಎಂದು ಅವರೇ ತಿಳಿದುಕೊಳ್ಳಲು, ನಿರ್ಧಾರ ತೆಗೆದುಕೊಳ್ಳಲು ಬಿಡಿ. ಕೆಲವೊಮ್ಮೆ ಆ ನಿರ್ಧಾರದಲ್ಲಿ ಅವರು ತಪ್ಪಬಹುದು- ಆದರೂ ಪರವಾಗಿಲ್ಲ. ಕೆಲವೊಮ್ಮೆ ವಯಸ್ಕರರಾದ ನಾವೆಯೇ ಹೊಟ್ಟೆ ತುಂಬಿತೆಂದು ಅಂದುಕೊಂಡು, ತಡರಾತ್ರಿ ಎದ್ದು ತಿನ್ನಲು ಫ್ರಿಡ್ಜ್ ಹುಡುಕುವುದಿಲ್ಲವೇ? ಆದರೆ ಮರುದಿನ ನಾವು ಸರಿಯಾದ ದಾರಿಗೆ ಬರುತ್ತೀವಿ ಅಲ್ಲವೇ? ಮಕ್ಕಳು ಕೂಡ ಹಾಗೆಯೇ..

Comments are closed.