ಕೆಂಪಗಿರುವ ,ರಸಭರಿತವಾದ ಕಲ್ಲಂಗಡಿ ಹಣ್ಣೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಿಸಿಲು ಹೆಚ್ಚಾಗಿರುವಾಗ ಕಲ್ಲಂಗಡಿ ಕಂಡರೆ ಸಾಕು ಖರೀದಿಸಿ ತಿನ್ನದಿರಲು ಸಾಧ್ಯವೇ? ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ದಾಹವನ್ನು ತೀರಿಸುವಲ್ಲಿ ಇದಕ್ಕೆ ಸರಿ ಸಮನಾದ ಹಣ್ಣು ಮತ್ತೊಂದಿಲ್ಲ.
ರೇಟು ಕಡಿಮೆ , ತಿನ್ನಲು ರುಚಿಕರ. ಆದಾಗ್ಯೂ ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಕರುಳಿನ ಕ್ಯಾನ್ಸರ್, ಹೃದ್ರೋಗ, ಮಧು ಮೇಹ ರೋಗಿಗಳಿಗೂ ಈ ಹಣ್ಣು ಉತ್ತಮ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿರುತ್ತವೆ. ವಿಟಮಿನ್ ಎ.ಬಿ.ಸಿ.ಪುಷ್ಕಳವಾಗಿದ್ದು ಕಡಿಮೆ ಕ್ಯಾಲರಿ ಹಾಗೂ ಹೆಚ್ಚು ಪೋಷಕಾಂಶಗಳಿವೆ. ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿದರೆ ಒಡನೆಯೇ ದಾಹ ಕಡಿಮೆಯಾಗುತ್ತದೆ. ಇದರಲ್ಲಿ ಶೇ. 92 ಭಾಗ ನೀರಿರುವುದೇ ಇದಕ್ಕೆ ಕಾರಣ. ಈ ಹಣ್ಣನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆಂಬ ಭಯವೇಯಿಲ್ಲ. ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸುತ್ತದೆ. ಗ್ಯಾಸ್ ಟ್ರಬಲ್ ಮಾಯವಾಗುತ್ತದೆ. ಸ್ಥೂಲಕಾಯ ನಿವಾರಣೆಯಾಗುತ್ತದೆ.
ಆದರೆ, ಕಲ್ಲಂಗಡಿ ಹಣ್ಣನ್ನು ಆರಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
ಒಡೆದು ಹೋಗಿರದ, ಮಚ್ಚೆಗಳಿಲ್ಲದ , ಹೊಳಪುಳ್ಳ ಹಣ್ಣನ್ನೇ ಆರಿಸಿಕೊಳ್ಳಬೇಕು.
ಹಣ್ಣನ್ನು ತಿರುಗಿಸಿ ನೋಡಿದಾಗ ಯಾವುದಾದರೂ ಒಂದು ಭಾಗದಲ್ಲಿ ಹಳದಿಯಾಗಿದ್ದರೆ, ಅಂತಹ ಹಣ್ಣುಗಳು ಸೂರ್ಯನ ಕಿರಣಗಳಿಂದಲೇ ಹಣ್ಣಾಗಿರುತ್ತವೆ. ಇಂತಹ ಹಣ್ಣುಗಳು ರಸ ಭರಿತವಾಗಿದ್ದು, ಸಿಹಿಯಾಗಿರುತ್ತವೆ.
ಕಲ್ಲಂಗಡಿ ಹಣ್ಣನ್ನು ತಟ್ಟಿದಾಗ ಟೊಳ್ಳು ಶಬ್ದ ಬರುತ್ತಿದ್ದರೆ, ಅಂತಹ ಕಲ್ಲಂಗಡಿ ಹಣ್ಣು ಚೆನ್ನಾಗಿ ಬಲಿತು ಹಣ್ಣಾಗಿರುತ್ತದೆ.
ಯಾವುದೇ ಹಣ್ಣಾದರೂ ಗಾತ್ರದಲ್ಲಿ ದೊಡ್ಡದಿದ್ದರೆ ಒಳ್ಳೆಯದೆಂದು ಎಲ್ಲರೂ ಭಾವಿಸುತ್ತಾರೆ. ಅದರೆ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಗಾತ್ರದ ಕಳ್ಳಂಗಡಿ ತಳಿಗಳನ್ನು ಅಭಿವೃದ್ದಿಪಡಿಸಿದ್ದಾರೆ. ಆದುದರಿಂದ ಹಣ್ಣು ಚಿಕ್ಕದಾಗಿದ್ದರೂ ಮೆಲೆ ತಿಳಿಸಿದಂತೆ ಪರೀಕ್ಷಿಸಿ ಖರೀದಿಸಬೇಕು.