ಕರಾವಳಿ

ಶುಭಸಂದರ್ಭದಲ್ಲಿ ಆಶೀರ್ವದಿಸಲು ತಲೆ ಮೇಲೆ ಅಕ್ಷತೆಕಾಳು ಯಾಕೆ ಹಾಕುತ್ತಾರೆ..?

Pinterest LinkedIn Tumblr

ಹಿಂದೂ ಸಂಪ್ರದಾಯದಲ್ಲಿ ಅಕ್ಷತೆಗೆ ಬಹಳ ಪ್ರಾಮುಖ್ಯತೆ ಇದೆ. ಮದುವೆಯಂತಹ ಶುಭಕಾರ್ಯಗಳಲ್ಲಿ ವಧುವರರನ್ನು ಆಶೀರ್ವದಿಸಲು ಅಕ್ಷತೆಯನ್ನು ಹಾಕುತ್ತಾರೆ. ಸಾಮಾನ್ಯವಾಗಿ ಮಗು ಹುಟ್ಟಿದಾಗ ಮಂಗಳಸ್ನಾನ ಮಾಡಿದ ದಿನದಿಂದ ಪ್ರತಿ ಶುಭಸಂದರ್ಭದಲ್ಲೂ ಆಶೀರ್ವದಿಸಲು ತಲೆ ಮೇಲೆ ಅಕ್ಷತೆಕಾಳು ಹಾಕುತ್ತಾರೆ. ಆಶೀರ್ವದಿಸಲು, ಅಕ್ಷತೆಗೂ ಏನು ಸಂಬಂಧ? ಅಕ್ಷತೆಯನ್ನೇ ಯಾಕೆ ಹಾಕಬೇಕು? ಅರಿಶಿಣ ಬೆರೆಸಿದ ಅಕ್ಕಿಯನ್ನೇ ಯಾಕೆ ಬಳಸಬೇಕು? ಎಂಬುದನ್ನು ಈಗ ತಿಳಿದುಕೊಳ್ಳೋಣ.

ಅಕ್ಕಿ ಚಂದ್ರ ಕಾರಕ. ಚಂದ್ರನು ಮನಸ್ಸಿನ ಕಾರಕ. ಅಂದರೆ ಮನಸ್ಫೂರ್ತಿಯಾಗಿ ಮಾಡುವ ಆಶೀರ್ವಾದಕ್ಕೆ ಚಿನ್ಹೆ ಇದ್ದಂತೆ. ಅಕ್ಕಿಯಲ್ಲಿ ಬೆರೆಸುವ ಅರಿಶಿಣ ಗುರು ಕಾರಕ. ಗುರು ಶುಭ ಗ್ರಹ. ಅವನಿಗೆ ಸಂಕೇತವಾಗಿ, ಶುಭಕ್ಕೆ ಸಂಕೇತವಾಗಿ ಅರಿಶಿಣ ಬಣ್ಣ ಬೆರೆಸಿ ಅಕ್ಷತೆಯನ್ನು ಮಂತ್ರಪೂರ್ವಕವಾಗಿ ಹಾಕುತ್ತಾರೆ. ಮಂತ್ರ ಎಂದರೆ ಕ್ಷಯಿಸದೆ ಇರುವಂತಹದ್ದು.

“ಅ”ಕಾರದಿಂದ “ಕ್ಷ” ಕಾರದವರೆಗೆ ಇರುವ ಅಕ್ಷರಗಳಿಂದ, ಬೀಜಾಕ್ಷರಗಳಿಂದ ಕೂಡಿದ ಮಂತ್ರಕ್ಕೆ ಶಕ್ತಿ ಇರುತ್ತದೆ. ಮಂತ್ರವನ್ನು ಪಠಿಸುವಾಗ ಕೈಯಲ್ಲಿ ಹಿಡಿದ ಅಕ್ಷತೆಗೂ ಆ ಶಕ್ತಿ ಬರುತ್ತದೆ. ಕ್ಷಯಿಸದ ಮಂತ್ರಗಳನ್ನು, ಕ್ಷಯಿಸದ ಅಕ್ಷತೆಯನ್ನು ಹಿಡಿದುಕೊಂಡು ಓದಿ, ಅವು ಯಾರ ತಲೆಮೇಲೆ ಹಾಕುತ್ತೀವೋ ಅವರು ಸಹ ಕ್ಷಯಿಸದೆ ಅಭಿವೃದ್ಧಿ ಹೊಂದಬೇಕೆಂದು ಆಶೀರ್ವದಿಸುತ್ತಾರೆ. ಆ ರೀತಿಯ ಆಶೀರ್ವಾದಕ್ಕೆ ಶಕ್ತಿ ಇರುತ್ತದೆ. ಇದಿಷ್ಟು ಅಕ್ಷತೆಯ ಪ್ರಾಮುಖ್ಯತೆ.

Comments are closed.