ಕರ್ನಾಟಕ

ಮೆದುಳಿನ ಕಾರ್ಯವೈಖರಿ ಶಕ್ತಿಯ ಬಗ್ಗೆ ತಿಳಿಯಿರಿ.

Pinterest LinkedIn Tumblr

ಮಂಗಳೂರು: ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಎರಡೂ ಒಂದಕ್ಕೊಂದು ಪೂರಕವಾಗಿವೆ. ಆದರೆ ವೈದ್ಯವಿಜ್ಞಾನ ಮೆದುಳಿನ ಬಗ್ಗೆ ತಿಳಿದಿರುವ ಮಾಹಿತಿ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅತ್ಯಲ್ಪ. ಏಕೆಂದರೆ ಮೆದುಳಿನ ಕಾರ್ಯವೈಖರಿ ಮತ್ತು ಜೀವಕೋಶಗಳ ಅಂಶಗಳು ತೀರಾ ಸಂಕೀರ್ಣ ಮತ್ತು ಜಟಿಲವಾಗಿವೆ. ಹಾಗಾಗಿ ಮನುಷ್ಯರು ಯೋಚಿಸುವ ಶಕ್ತಿ ಏರುಪೇರಾದರೆ ಆಗುವ ಮನೋರೋಗ ಇಂದಿಗೂ ವೈದ್ಯವಿಜ್ಞಾನಕ್ಕೆ ಒಂದು ಸವಾಲಾಗಿದೆ.

ಇದುವರೆಗೂ ಮನೋರೋಗಕ್ಕೆ ಮದ್ದಿಲ್ಲ ಎಂದೇ ನಂಬಿಕೊಂಡು ಬಂದಿದ್ದೆವು. ಆದರೆ ಇತ್ತೀಚೆಗೆ ಮೆದುಳಿನ ಸಂಶೋಧನೆ ಮತ್ತು ಚಿಕಿತ್ಸಾ ಕ್ರಮಗಳಿಗೆ ಹೆಚ್ಚಿನ ಒತ್ತು ಮತ್ತು ಧನಸಹಾಯ ನೀಡಿರುವುದರಿಂದ ಮೆದುಳಿನ ಕಾರ್ಯವೈಖರಿಯನ್ನು ಅರಿಯುವ ನಿಟ್ಟಿನಲ್ಲಿ ಹಲವು ಮಾಹಿತಿಗಳು ಹೊರಬಂದಿವೆ. ಮೆದುಳಿನ ಬಗ್ಗೆ ನಮಗೆ ತಿಳಿದಿರುವುದು ತೀರಾ ಅಲ್ಪವಾಗಿದೆ.

ಇತ್ತೀಚಿಗೆ ಕಂಡುಹಿಡಿಯಲಾಗಿರುವ ರೂಪುರೇಶೆ ತಂತ್ರಜ್ಞಾನ ಬಂದ ಮೇಲೆಯೇ ಮೆದುಳಿನ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಇವುಗಳಲ್ಲಿ ಪ್ರಮುಖವಾದುದನ್ನು ಈಗ ನೋಡೋಣ…

ಮೆದುಳಿನ ಶೇಖಡಾ ಎಂಭತೈದು ಭಾಗ ಸೆರೆಬ್ರಮ್ ಆಗಿದೆ:
ದೇಹದ ಇತರ ಅಂಗಗಳು ಒಂದು ವಿಧದ ಸ್ನಾಯು ಅಥವಾ ಜೀವಕೋಶಗಳಿಂದ ನಿರ್ಮಿಸಲ್ಪಟ್ಟಿವೆ. ಆದರೆ ಮೆದುಳಿನ ಸರಿಸುಮಾರು ಎಂಭತ್ತೈದು ಶೇಖಡಾ ಸೆರೆಬ್ರಮ್ (Cerebrum) ಎಂಬ ಕೋಶಗಳಿಂದ ನಿರ್ಮಿಸಲ್ಪಟ್ಟಿದೆ. ಇದು ಅತ್ತ ಪೂರ್ಣ ದ್ರವವೂ ಅಲ್ಲದ, ಇತ್ತ ಪೂರ್ಣ ಘನವೂ ಅಲ್ಲದ ರೂಪದಲ್ಲಿದೆ. ಈ ಎಂಭತ್ತೈದು ಶೇಖಡಾ ಭಾಗ ದೇಹದ ಪ್ರತಿ ಅಂಗದ ಚಲನೆಯನ್ನು ನಿಯಂತ್ರಿಸುತ್ತದೆ. ಸುಮಾರು ಎಂಟು ಸಾವಿರ ಮರಣೋತ್ತರ ಪರೀಕ್ಷೆಗಳಲ್ಲಿ ಮೆದುಳಿನ ತೂಕವನ್ನು ಅಳೆದಾಗ ವಯಸ್ಕ ಪುರುಷರ ಮೆದುಳು ಸರಾಸರಿ 1,336 ಗ್ರಾಂ ಹೊಂದಿದ್ದರೆ ಮಹಿಳೆಯರ ಮೆದುಳು 1,198 ಗ್ರಾಂ ಎಂದು ಕಂಡುಬಂದಿದೆ. (ಇನ್ನುಳಿದ ಭಾಗ ಮೊಣಕಾಲ ಕೆಳಗೆ ಹೋಯಿತೇ?). ಇನ್ನುಳಿದ ಭಾಗ ಮೆದುಳಿನಾದ್ಯಂತ ಹರಡಿರುವ ನರಗಳ ಮತ್ತು ನರತಂತುಗಳ ವ್ಯವಸ್ಥೆಯಾಗಿದೆ.

ದೇಹದ ಗಾತ್ರಕ್ಕೆ ಹೋಲಿಸಿದರೆ ಮನುಷ್ಯರ ಮೆದುಳೇ ದೊಡ್ಡದು:
ದೇಹದ ಗಾತ್ರಕ್ಕೆ ಹೋಲಿಸಿದರೆ ಮನುಷ್ಯರು ಅತಿ ದೊಡ್ಡ ಮೆದುಳನ್ನು ಹೊಂದಿದ್ದಾರೆ. ಭೂಜೀವಿಗಳಲ್ಲಿಯೇ ಅತಿದೊಡ್ಡದಾದ ಪ್ರಾಣಿಯಾದ ಆನೆಯ ಮೆದುಳು ದೊಡ್ಡಗಾತ್ರದಲ್ಲಿದ್ದರೂ ಆನೆಯ ಶರೀರಕ್ಕೆ ಹೋಲಿಸಿದರೆ ಮನುಷ್ಯರಿಗಿಂತ ಕೊಂಚ ಚಿಕ್ಕದಾಗಿದೆ. ಅತಿ ಚಿಕ್ಕ ಮೆದುಳು ಹೊಂದಿರುವ ಪ್ರಾಣಿ ಎಂದರೆ ಮೀನು (ಇದರ ಸ್ಮರಣ ಶಕ್ತಿ ಕೇವಲ ಒಂದು ಸೆಕೆಂಡುಗಳು ಮಾತ್ರ). ಮೆದುಳಿನ ಹೋಲಿಕೆಯ ಗಾತ್ರಕ್ಕೂ ಪ್ರಾಣಿಯ ಚಿಂತನಾ ಸಾಮರ್ಥ್ಯಕ್ಕೂ ನಿಕಟ ಸಂಬಂಧವಿದೆ.

ಮೆದುಳಿನ ಶಕ್ತಿ:
ಸುಮಾರು ಒಂದೂವರೆ ಕೇಜಿಯ ಹತ್ತಿರ ತೂಗುವ ಪುರುಷರ ಮೆದುಳು ಇಡಿಯ ಶರೀರದ ಶೇಖಡಾ ಎರಡರಷ್ಟು ಮಾತ್ರ ತೂಕವನ್ನು ಹೊಂದಿದ್ದರೂ ದೇಹ ಉತ್ಪಾದಿಸುವ ಶಕ್ತಿಯ ಸುಮಾರು ಮೂವತ್ತು ಶೇಖಡಾ ಶಕ್ತಿಯನ್ನು ಕಬಳಿಸುತ್ತದೆ.

ಮೆದುಳು ಉತ್ಪಾದಿಸುವ ಶಕ್ತಿ ಒಂದು ಬಲ್ಪ್ ಉರಿಸಲು ಸಮರ್ಥವಾಗಿದೆ:
ಮೆದುಳಿಗೆ ಸತತವಾಗಿ ರಕ್ತದ ಪೂರೈಕೆ ಆಗುತ್ತಲೇ ಇರಬೇಕು. ಮೆದುಳಿಗೆ ಅಗತ್ಯವಿರುವ ಶಕ್ತಿ ರಕ್ತದಲ್ಲಿರುವ ಗ್ಲುಕೋಸ್ ಮೂಲಕ ಸಿಗುತ್ತದೆ. ಈ ಗ್ಲುಕೋಸ್ ಅನ್ನು ಬಳಸಿ ಮೆದುಳು ಉತ್ಪಾದಿಸುವ ಶಕ್ತಿ ಸುಮಾರು ಮೂವತ್ತರಿಂದ ಮೂವತ್ತೈದು ವ್ಯಾಟ್ ಗಳಷ್ಟಿದೆ. ಇದು ಒಂದು ಸಾಧಾರಣ ಬಲ್ಪ್ ಉರಿಸಲು ಸಾಕು.

ದೇಹಕ್ಕೆ ಅಗತ್ಯವಿರುವ ಆಮ್ಲಜನಕದ ಇಪ್ಪತ್ತು ಶೇಖಡಾ ಮೆದುಳಿಗೇ ಬೇಕು:
ಮೆದುಳಿಗೆ ಸತತವಾಗಿ ಪೂರೈಕೆಯಾಗುವ ರಕ್ತದಲ್ಲಿ ಆಮ್ಲಜನಕ ಇರಲೇ ಬೇಕು. ಎಷ್ಟು ಎಂದರೆ ಇಡಿಯ ದೇಹಕ್ಕೆ ಪೂರೈಕೆಯಾಗುವ ಆಮ್ಲಜನಕದ ಸುಮಾರು ಇಪ್ಪತ್ತು ಶೇಖಡಾ. ಒಂದು ವೇಳೆ ರಕ್ತದಲ್ಲಿ ಆಮ್ಲಜನಕ ಇಲ್ಲದೇ ಇದ್ದರೆ ಏಳರಿಂದ ಒಂಭತ್ತು ಸೆಕೆಂಡುಗಳಲ್ಲಿಯೇ ಸ್ಮೃತಿ ತಪ್ಪುತ್ತದೆ. ಕುತ್ತಿಗೆಯ ಮೇಲೆ ನೀಡುವ ಪ್ರಹಾರ ಮೆದುಳಿಗೆ ರಕ್ತ ಪೂರೈಕೆಯಾಗುವ ನರದ ಮೇಲೆ ನೇರವಾಗಿ ಬಿದ್ದರೆ ಸ್ಮೃತಿ ತಪ್ಪುವುದಕ್ಕೆ ಇದೇ ಕಾರಣ. ಆದ್ದರಿಂದ ಕರಾಟೆ, ಜುಡೋ, ಕೇರಳದ ಕಳರಿಪಯಟ್ಟು ಮೊದಲಾದ ಕಲೆಗಳಲ್ಲಿ ಮೊತ್ತ ಮೊದಲಿಗೆ ದೇಹದ ಯಾವ ಭಾಗಗಳಿಗೆ ಪೆಟ್ಟು ನೀಡಲೇಬಾರದು ಎಂಬುದನ್ನು ಮೊದಲು ಕಲಿಸಲಾಗುತ್ತದೆ.

ಆಕಳಿಕೆಯಿಂದ ಮೆದುಳಿಗೆ ಆರಾಮ ಸಿಗುತ್ತದೆ:
ಮೆದುಳಿಗೆ ಹೆಚ್ಚಿನ ಭಾರ ನೀಡಿದಾಗ ಮೆದುಳಿನ ತಾಪಮಾನ ಏರುತ್ತದೆ. ಒಂದು ವೇಳೆ ಸರಿಯಾದ ಪ್ರಮಾಣದ ಆಮ್ಲಜನಕ ಸಿಗದೇ ಇದ್ದಾಗಲೂ ಮೆದುಳು ವಿಪರೀತ ಬಿಸಿಯಾಗುತ್ತದೆ. ಈ ಹೊತ್ತಿನಲ್ಲಿ ಮೆದುಳು ತಂಪುಗೊಳ್ಳಲು ಹೆಚ್ಚಿನ ಗಾಳಿಯನ್ನು ಒಳಸೆಳೆದುಕೊಳ್ಳಲು ಸ್ನಾಯುಗಳಿಗೆ ಸೂಚನೆ ನೀಡುತ್ತದೆ. ಇದೇ ಆಕಳಿಕೆ. ಆಕಳಿಕೆಯಿಂದ ಕೂಡಲೇ ಕೊರತೆಯಿದ್ದ ಆಮ್ಲಜನಕ ಪೂರೈಕೆಗೊಂಡು ತಂಪುಗೊಳ್ಳುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗದೇ ಇದ್ದರೆ ಮೆದುಳು ಅತಿ ಹೆಚ್ಚು ಬಿಸಿಯಾಗಿ ಘಾಸಿಗೊಳ್ಳುತ್ತದೆ. ಈ ಸ್ಥಿತಿಗೆ Anoxic brain damage ಎಂದು ಕರೆಯುತ್ತಾರೆ. ಯಾರಾದರೂ ಆಕಳಿಸುತ್ತಿದ್ದರೆ ಅವರು ಸೋಮಾರಿಗಳು ಎಂಬ ನಿರ್ಣಯಕ್ಕೆ ಬರುವ ಬದಲು ಅವರ ಮೆದುಳು ತಂಪುಗೊಳ್ಳುತ್ತಿದೆ ಎಂದು ನಮ್ಮ ಅನಿಸಿಕೆಗಳನ್ನು ಬದಲಿಸುವುದು ಒಳಿತು.

ಮೆದುಳಿನಲ್ಲಿ 150,000ಮೈಲುದ್ದದ ನರಗಳಿವೆ:
ಮೆದುಳಿನಲ್ಲಿ ಅತಿಸೂಕ್ಷ್ಮವಾದ ರಕ್ತನಾಳಗಳಿದ್ದು ಸತತವಾಗಿ ರಕ್ತವನ್ನು ಪೂರೈಸುತ್ತಾ ಇರುತ್ತದೆ. ರಕ್ತದ ಮೂಲಕ ಆಗಮಿಸಿದ ಆಮ್ಲಜನಕವನ್ನು ಮೆದುಳಿನ ಪ್ರತಿ ಜೀವಕೋಶಕ್ಕೆ ತಲುಪಿಸುವುದು ಇವುಗಳ ಕೆಲಸ.ಇವುಗಳನ್ನು ಒಂದು ವೇಳೆ ಬಿಡಿಸಿ ಒಂದೇ ನಾಳವನ್ನಾಗಿಸಿದರೆ ಅದರ ಉದ್ದ 150,000ಮೈಲುಗಳಾಗುತ್ತದೆ! ಅಲ್ಲದೇ ಈ ನಾಳಗಳು ಅತಿ ಬಲಿಷ್ಠವೂ ಆಗಿರುತ್ತವೆ. ಅಲ್ಲದೇ ರಕ್ತವನ್ನು ಪೂರೈಸುವ ವೇಗವೂ ಅತಿ ಹೆಚ್ಚಿರುತ್ತದೆ.

ಮೆದುಳಿನಲ್ಲಿ ಎರಡು ವಿಧದ ದ್ರವ್ಯಗಳಿವೆ:
ಮೆದುಳಿನ ಚಟುವಟಿಕೆಯನ್ನು ಬಿಳಿದ್ರವ್ಯ ಮತ್ತು ಬೂದುದ್ರವ್ಯ ಎಂಬ ಎರಡು ವಿಧದ ದ್ರವ್ಯಗಳು (brain matter) ಗಳು ನಿಯಂತ್ರಿಸುತ್ತವೆ. ಬಿಳಿ ದ್ರವ್ಯ ಶೇಖಡಾ ಅರವತ್ತಿಷ್ಟದ್ದರೆ ಉಳಿದ ನಲವತ್ತು ಶೇಖಡಾ ಬೂದುದ್ರವ್ಯವಾಗಿದೆ. ಈ ಎರಡೂ ದ್ರವ್ಯಗಳು ಸತತವಾಗಿ ಸಂಕೇತಗಳನ್ನು ಕಳುಹಿಸುತ್ತಾ ಸ್ವೀಕರಿಸುತ್ತಾ ಇದ್ದು ದೇಹದ ವಿವಿಧ ಚಟುವಟಿಕೆಯನ್ನು ನಿಯಂತ್ರಿಸುತ್ತವೆ. ಆದರೆ ಎರಡೂ ದ್ರವ್ಯಗಳು ಪ್ರತ್ಯೇಕ ಅಂಗಗಳನ್ನು ನಿಯಂತ್ರಿಸುತ್ತವೆ. ಇವರಡೂ ದ್ರವ್ಯಗಳಲ್ಲಿ ಬೂದುದ್ರವ್ಯ ಪ್ರಮುಖವಾದ ಚಟುವಟಿಕೆಗಳನ್ನು (ನಿರ್ಣಯ ಕೈಗೊಳ್ಳುವುದು, ಹೊಸ ವಿಷಯಗಳನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು) ನಿರ್ವಹಿಸಲು ನ್ಯೂರಾನ್ ಗಳನ್ನು ಬಳಸಿಕೊಳ್ಳುತ್ತದೆ. ಬಿಳಿದ್ರವ್ಯ ದೇಹದ ಐಚ್ಛಿಕ ಮತ್ತು ಅನೈಚ್ಛಿಕ ಕಾರ್ಯಗಳನ್ನು ನಿರ್ವಹಿಸುತ್ತದೆ.

ಗರ್ಭದಲ್ಲಿರುವ ಶಿಶುವಿನ ಮೆದುಳಿನ ಬೆಳವಣಿಗೆ ಅತಿವೇಗಗಲ್ಲಿ ಆಗುತ್ತದೆ:
ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಯನ್ನು ಗಮನಿಸಿದರೆ ಮೆದುಳಿನ ಬೆಳವಣಿಗೆ ಇತರ ಅಂಗಗಳಿಗಿಂತಲೂ ಅತಿವೇಗದಲ್ಲಾಗುತ್ತದೆ. ಎಷ್ಟು ಅಂದರೆ ಪ್ರತಿ ನಿಮಿಷಕ್ಕೆ 251,000 ಹೊಸ ನ್ಯೂರಾನ್ ಜೀವಕೋಶಗಳು ಹುಟ್ಟುತ್ತವೆ. ಪ್ರತಿ ನ್ಯೂರಾನ್ ನಿಂದ ಸುಮಾರು ಒಂದುಸಾವಿರದಿಂದ ಹತ್ತು ಸಾವಿರದವರೆಗೆ ನರಕೋಶ ಸಂಗಮಗಳು ಸಾಧ್ಯವಾಗುತ್ತದೆ.

ನ್ಯೂರೋಪ್ಲಾಸ್ಟಿ ಯಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ:
ನ್ಯೂರಾನ್ ಗಳು ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕೊಂಚ ಬದಲಾವಣೆ ಮತ್ತು ಹೊಸ ನರಮಂಡಲಗಳನ್ನು ನಿರ್ಮಿಸುವ ಮೂಲಕ ಮೆದುಳಿನ ಕಾರ್ಯವೈಖರಿಯನ್ನು ಉತ್ತಮಗೊಳಿಸಬಹುದು. ಈ ಚಿಕಿತ್ಸೆಗೆ neuroplasticity ಎಂದು ಕರೆಯುತ್ತಾರೆ. ಇದರಿಂದ ಮೆದುಳಿನ ಕಾರ್ಯಕ್ಷಮತೆ ಉತ್ತಮಗೊಂಡು ಸುಖಜೀವನ ನಡೆಸಲು ಸಾಧ್ಯವಾಗುತ್ತದೆ.

ಮೆದುಳಿನ ಮೊತ್ತ ಮೊದಲ ಸಂವೇದನೆ ಸ್ಪರ್ಶವಾಗಿದೆ:
ಮೆದುಳು ಕಲಿಯುವ ಮೊದಲ ಸಂವೇದನೆ ಎಂದರೆ ಸ್ಪರ್ಶ. ಆದರೆ ಇದನ್ನು ಪೂರ್ಣವಾಗಿ ಕಲಿಯಲು ಮೆದುಳಿಗೆ ಸುಮಾರು ಹನ್ನೆರಡು ವಾರ ಕಾಲಾವಕಾಶ ಬೇಕು. ಇದೇ ಕಾರಣದಿಂದ ನಮ್ಮ ದೇಹವನ್ನು ನಾವೇ ಮುಟ್ಟಿಕೊಂಡಾಗ ಆಗುವ ಅನುಭವಕ್ಕಿಂತ ಹೊಸತಾಗಿ ಯಾರಾದರೂ ಸ್ಪರ್ಶಿಸಿದರೆ ಬೇರೆಯೇ ಸಂವೇದನೆ ಹೊಂದುತ್ತೇವೆ. ಮಗುವನ್ನು ತಾಯಿ ಎತ್ತಿಕೊಂಡಾಗ ಅಳು ನಿಲ್ಲಿಸಲೂ ಇದೇ ಕಾರಣ.

ಭಾವನೆಗಳನ್ನು ಅರಿಯುವ ಜ್ಞಾನಕ್ಕೆ Amygdala ಎಂದು ಕರೆಯುತ್ತಾರೆ;
ನಾವು ಇನ್ನೊಬ್ಬರ ಮುಖವನ್ನು ನೋಡಿದಾಗ ಅವರ ಮುಖದಲ್ಲಿರುವ ಭಾವನೆಗಳನ್ನು ಗಮನಿಸಿ ಅವರು ಈಗ ಯಾವ ಸ್ಥಿತಿಯಲ್ಲಿದ್ದಾರೆ ಎಂದು ಅರಿಯಬಹುದು. ಉದಾಹರಣೆಗೆ ಸಂತೋಷ, ದುಃಖ, ದುಗುಡ ಮೊದಲಾದವು.

ರಾತ್ರಿಯ ನಿದ್ದೆ ಮೆದುಳಿಗೆ ಅತ್ಯುತ್ತಮ:
ನಿಸರ್ಗ ಹಗಲು ರಾತ್ರಿಗಳನ್ನು ಸೃಷ್ಟಿಸಿರುವುದೇ ಕೆಲಸ ಮತ್ತು ನಿದ್ರೆಗಾಗಿ. ಮೆದುಳಿನ ಕೋಶಗಳಿಗೂ ರಾತ್ರಿಯ ಕತ್ತಲಿಗೂ ನಿಕಟ ಸಂಬಂಧವಿದೆ. ಸಕಲ ಜೀವಜಾಲ ಈ ರಾತ್ರಿ ಹಗಲಿನ ಬೆಳಕಿನ ಬದಲಾವಣೆಗಳಿಗನುಸಾರವಾಗಿ ತಮ್ಮ ಚಟುವಟಿಕೆಗಳನ್ನು ನಿರ್ವಹಿಸುತ್ತವೆ.

ಮೆದುಳಿಗೆ ಸಾಗರೋತ್ಪನ್ನಗಳು ಅತ್ಯುತ್ತಮ ಆಹಾರವಾಗಿದೆ:
ಇತ್ತೀಚಿನ ಸಂಶೋಧನೆಗಳ ಮೂಲಕ ಸಾಬೀತಾದ ವಿಷಯವೆಂದರೆ ಮೆದುಳಿಗೆ ಸಾಗರ ಉತ್ಪನ್ನಗಳು ಅತ್ಯುತ್ತಮ ಆಹಾರವಾಗಿದೆ. ಇದರಿಂದ ಮೆದುಳಿನ ಕಾರ್ಯಕ್ಷಮತೆ ಶೇಖಡಾ ಹದಿನೈದರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಮರೆವು (dementia) ಮೊದಲಾದ ಮೆದುಳಿನ ಕಾಯಿಲೆಗಳನ್ನು ತಡೆಯಲು ವೈದ್ಯರು ಸಾಗರ ಉತ್ಪನ್ನಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಲು ಸಲಹೆ ಮಾಡುತ್ತಾರೆ.

ಮೆದುಳಿನಲ್ಲಿಯೇ ಅತಿಹೆಚ್ಚು ಕೊಬ್ಬು ಇರುತ್ತದೆ:
ಮೆದುಳಿನಲ್ಲಿ ವಿಶೇಷವಾದ ಕೊಬ್ಬಿನ ಅಂಶವಿದೆ. ಇದು ದೇಹದ ಇತರ ಅಂಗಗಳಿಗೆ ಹೋಲಿಸಿದರೆ ಅತಿಹೆಚ್ಚು ಪ್ರಮಾಣದಲ್ಲಿದೆ. (ಸುಮಾರು ಮೂರರಲ್ಲಿ ಎರಡು ಭಾಗ). ಮೆದುಳಿಗೆ ಆಹಾರದ ಮೂಲಕ ಲಭ್ಯವಾದ ಕೊಬ್ಬಿನ ಆಮ್ಲದ ಕಣಗಳನ್ನು ಬಳಸಿ ಮೆದುಳಿನ ಕೊಬ್ಬನ್ನು ತಯಾರಿಸಿಕೊಳ್ಳುತ್ತದೆ. ಈ ಕೊಬ್ಬು ಮೆದುಳಿನ ಜೀವಕೋಶಗಳ ನಡುವೆ ಹುದುಗಿದಂತೆ ಅಳವಡಿಸಲಾಗುತ್ತದೆ. ಕೆಲವರಿಗೆ ಪ್ರಾಣಿಗಳ ಮೆದುಳಿನ ಖಾದ್ಯ ಎಂದರೆ ತುಂಬಾ ಇಷ್ಟ. ಆದರೆ ಈ ಕೊಬ್ಬಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಕೆಟ್ಟ ಕೊಲೆಸ್ಟರಾಲ್ ಇದೆ. ಇದು ರಕ್ತನಾಳಗಳೊಳಗೆ ಜಿಡ್ದುಕಟ್ಟಿಕೊಂಡು ಹೃದಯ ಸಂಬಂಧಿ ರೋಗಗಳ ಸಂಭವವನ್ನು ಹೆಚ್ಚಿಸುತ್ತದೆ.

ಗಟ್ಟಿಯಾಗಿ ಓದುವ ಅಥವಾ ಓದಿದನ್ನು ಕೇಳುವ ಮೂಲಕ ಹೆಚ್ಚು ಕಲಿಯುತ್ತೇವೆ:
ಒಂದು ಸಂಶೋಧನೆಯ ಪ್ರಕಾರ ಹದಿನೈದು ಸಾವಿರ ಘಂಟೆ ಟೀವಿ ನೋಡಿದಾಗ ಮೆದುಳು ಕೇವಲ ಮೂವತ್ತು ನಿಮಿಷಗಳ ಕಾಲ ಚಟುವಟಿಕೆಯಿಂದಿರುತ್ತದೆ. ಆದರೆ ಜೋರಾಗಿ ಓದುವಾಗ ಅಥವಾ ಯಾರಾದರೂ ಜೋರಾಗಿ ಓದಿದ್ದನ್ನು ಕೇಳಿದಾಗ (ಉದಾಹಾರಣೆಗೆ ಕಥೆ ಹೇಳುವುದು) ಮೆದುಳಿನ ಚಟುವಟಿಕೆ ಅಷ್ಟೂ ಹೊತ್ತು ಕ್ರಿಯಾಶೀಲವಾಗಿದ್ದು ಗರಿಷ್ಟ ಮಟ್ಟದಲ್ಲಿ ಉಪಯೋಗವಾಗುತ್ತದೆ. ಏಕೆಂದರೆ ಕಥೆಯಲ್ಲಿ ಬರುವ ಪಾತ್ರಗಳಿಗನುಸಾರವಾಗಿ ಮೆದುಳು ಕೆಲವು ಆಕೃತಿಗಳನ್ನು ಕಲ್ಪಿಸುತ್ತಾ ಕಥೆಗೊಂದು ರೂಪಕವನ್ನು ನೀಡುತ್ತಾ ಹೋಗುತ್ತದೆ. ಮಕ್ಕಳಿಗೆ ಕಥೆ ಹೇಳಿ ಅವರ ಮೆದುಳನ್ನು ಚುರುಕುಗೊಳಿಸುವುದು ಉತ್ತಮವಾದ ಚಟುವಟಿಕೆಯಾಗಿದೆ.

ನಿರ್ಣಯ ತೆಗೆದುಕೊಳ್ಳಲು ಮಹಿಳೆಯರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ:
ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯವನ್ನು ಪರಿಗಣಿಸಿದರೆ ಪುರುಷರು ಕಡಿಮೆ ಸಮಯದಲ್ಲಿ ನಿರ್ಣಯಗಳನ್ನು ಕೈಗೊಳ್ಳುತ್ತಾರೆಂದು ಸಂಶೋಧನೆಗಳು ಸಾಬೀತುಪಡಿಸಿವೆ. ಆದರೆ ಒಮ್ಮೆ ಕೈಗೊಂಡ ನಿರ್ಣಯವನ್ನು ಮತ್ತೆ ಬದಲಿಸದೇ ಇರುವ ಸಂದರ್ಭಗಳನ್ನು ಪರಿಗಣಿಸಿದರೆ ಅದರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಾರೆ. ಏಕೆಂದರೆ ನಿರ್ಣಯಗಳನ್ನು ಕೈಗೊಳ್ಳುವಾಗ ಗಣನೆಗೆ ತೆಗೆದುಕೊಳ್ಳುವ ವಿಷಯಗಳಲ್ಲಿ ಪುರುಷರು ಕಾರ್ಯರೂಪಿ ಮತ್ತು ಸಂಭವನೀಯ ಸಾಧ್ಯತೆಗಳನ್ನು ಪರಿಗಣಿಸಿದರೆ ಮಹಿಳೆಯರು ಭಾವನಾತ್ಮಕವಾಗಿ ತುಲನೆ ಮಾಡಿ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.

ಜೆಟ್ ಲ್ಯಾಗ್ ನಿಮ್ಮ ಸ್ಮರಣಶಕ್ತಿಯನ್ನು ಕುಂಠಿಸಬಹುದು:
ನಮ್ಮ ಮೆದುಳು ನಾವಿರುವ ಪರಿಸರದ ಸಮಯಗಳಿಗೆ ಅನುಸಾರವಾಗಿ ಸ್ಪಂದಿಸುತ್ತದೆ. ಒಂದು ವೇಳೆ ಭೂಮಿಯ ಇನ್ನೊಂದು ಭಾಗಕ್ಕೆ ಪಯಣಿಸಿದರೆ ಅಲ್ಲಿನ ಕಾಲಮಾನ ಕೆಲವು ಗಂಟೆಗಳಷ್ಟು ಹಿಂದೆ ಅಥವಾ ಮುಂದೆ ಇರುವುದರಿಂದ ಮೆದುಳು ಆ ಸಮಯಕ್ಕೆ ಹೊಂದಿಕೊಳ್ಳಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಪ್ರಾರಂಭದ ದಿನಗಳಲ್ಲಿ ಅಲ್ಲಿನ ರಾತ್ರಿಯ ಹೊತ್ತು ನಿದ್ದೆ ಬರದೇ ಹಗಲಿನ ಹೊತ್ತು ನಿದ್ದೆ ತಡೆಯಲಾಗದೇ ಇರುವುದೇ ಜೆಟ್ ಲ್ಯಾಗ್. ಈ ಸ್ಥಿತಿ ಮೆದುಳಿನ ಮೇಲೆ ಪ್ರಭಾವ ಬೀರಬಹುದು ಹಾಗೂ ಸ್ಮರಣಶಕ್ತಿ ಮತ್ತು ಕಲಿಯುವಿಕೆಯ ಸಾಮರ್ಥ್ಯವನ್ನು ಕುಗ್ಗಿಸಬಹುದು. ಅತಿ ಹೆಚ್ಚು ಜೆಟ್ ಲ್ಯಾಗ್‪ಗೆ ಒಳಗಾಗುವ (ಅಂದರೆ ಪದೇ ಪದೇ ಭೂಮಿಯ ಅತ್ತ ಮತ್ತು ಇತ್ತ ಪಯಣಿಸುತ್ತಾ ಇರುವ ವಿಮಾನದ ಪೈಲಟ್ ಮೊದಲಾದ ಹುದ್ದೆಗಳಲ್ಲಿರುವ) ವ್ಯಕ್ತಿಗಳಿಗೆ ಇದು ಮಾರಕವಾಗಿ ಪರಿಗಣಿಸಬಹುದು. ಇದು ದೇಹಕ್ಕೆ ಒತ್ತಡ ನೀಡುವ ಹಾರ್ಮೋನುಗಳನ್ನು ಹೆಚ್ಚಿಸಬಹುದು, ಮೆದುಳಿನಲ್ಲಿರುವ ಚಿಂತನಾ ಶಕ್ತಿಯ ಕೇಂದ್ರವಾದ temporal lobe ಎಂಬ ಭಾಗದ ಗಾತ್ರವನ್ನು ಕುಗ್ಗಿಸಬಹುದು.

ಹಿಂದಿನ ನೆನಪನ್ನು ಕೆದಕಿದಾಗ ಹೊಸ ವಿಷಯ ಬೆಸೆದುಕೊಳ್ಳುತ್ತದೆ:
ನಾವು ಯಾವ ವಿಷಯವನ್ನು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆಯೋ ಅಷ್ಟೂ ಸಲದ ಮಾಹಿತಿ ಒಂದೇ ಬಗೆಯದ್ದಾಗಿರುವುದಿಲ್ಲ. ಪ್ರತಿ ಬಾರಿಯೂ ಇದಕ್ಕೆ ಸಂಬಂಧಿಸಿದ ವ್ಯಕ್ತಿ ಅಥವಾ ಇತರ ವಿಷಯಗಳು ಕೊಂಚವಾಗಿ ಸೇರುತ್ತಾ ಹೋಗುತ್ತವೆ. ನೆನಪು ಹಳೆಯದಾದಷ್ಟೂ ಹೊಸ ವಿಷಯಗಳು ಸೇರುವ ಸಾಧ್ಯತೆ ಹೆಚ್ಚು.

ಮೆದುಳಿನಲ್ಲಿರುವ Neocortex ಎನ್ನುವ ಭಾಗ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ:
ನಮ್ಮ ದೇಹದ ಯೋಚನಾ ಮತ್ತು ಐಚ್ಛಿಕ ಕಾರ್ಯಗಳನ್ನು ನಿರ್ವಹಿಸಲು ಮೆದುಳಿನಲ್ಲಿರುವ Neocortex ಎನ್ನುವ ಭಾಗ ಉಪಯೋಗವಾಗುತ್ತದೆ. ಇದು ಇಡಿಯ ಮೆದುಳಿನ ಶೇಖದಾ ತೊಂಭತ್ತರಷ್ಟಿದ್ದು ಜಾಗೃತಾವಸ್ಥೆಯಲ್ಲಿ ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಉಳಿದ ಹತ್ತು ಶೇಖಡಾ ಭಾಗ ಅನೈಚ್ಛಿಕ ಮತ್ತು ಅಜಾಗ್ರತಾ ಸಮಯದಲ್ಲಿ ದೇಹವನ್ನು ನಿಯಂತ್ರಿಸುತ್ತದೆ. ಈ ನಿಯೋಕಾರ್ಟೆಕ್ಸ್ ಎಂಬ ಭಾಗವನ್ನು ದೇಹದ ಉಳಿದ ಭಾಗಗಳನ್ನು ನಿಯಂತ್ರಿಸುವ ಅಂಗಗಳಿಗನುಗುಣವಾಗಿ temporal, occipital, frontal, ಮತ್ತು parietal lobe ಎಂದು ವಿಭಾಗಿಸಲಾಗಿದೆ.

Comments are closed.