ಕರ್ನಾಟಕ

ಸ್ನೇಹವನ್ನು ದೇಹದ ಎರಡು ಕೈ ಹಾಗೂ ಕಣ್ಣಿನ ಎರಡು ರೆಪ್ಪೆಗೆ ಹೋಲಿಸುತ್ತಾರೆ….ನಿಜನೇ..?

Pinterest LinkedIn Tumblr

friends_ship_photo

ಮಂಗಳೂರು: ಸ್ನೇಹ ಎಂಬ ಪದ ಎರಡೇ ಅಕ್ಷರದ್ದಾದರೂ ಅದರ ಹಿರಿಮೆ ತುಂಬಾ ವಿಶಾಲವಾದುದು. ಸಾಮಾಜಿಕ ಬದುಕಿನಲ್ಲಿ ಸ್ನೇಹವೆಂಬುದು ಇಲ್ಲದಿದ್ದರೆ ಮನುಷ್ಯನ ಬದುಕು ಮರುಭುಮಿಯಾಗುತ್ತಿತ್ತು. ಸ್ನೇಹಕ್ಕೆ ಸಾವಿಲ್ಲ, ಅದು ನಿತ್ಯನೂತನ, ಹೃದಯ-ಹೃದಯಗಳ ನಡುವಿನ ಸೇತುವೆ.

“ಸ್ನೇಹವನ್ನು ದೇಹದ ಎರಡು ಕೈಗಳಿಗೂ, ಕಣ್ಣಿನ ಎರಡು ರೆಪ್ಪೆಗಳಿಗೂ ಹೋಲಿಸುತ್ತಾರೆ. ಮೈಗೆ ಏನಾದರೂ ಅಪಾಯಕರವಾದದ್ದು ಬಂದು ತಾಗುವ ಸಂದರ್ಭದಲ್ಲಿ ಕೈಗಳು ತಮಗೇ ಗೊತ್ತಿಲ್ಲದ ಹಾಗೆ ಮೈಗೆ ರಕ್ಷಣೆಯಾಗಿ ಅಡ್ಡ ಬರುತ್ತವೆ. ಅದರಂತೆಯೇ ಕಣ್ಣಿಗೆ ಏನಾದರೂ ಸಂಭವಿಸುವುದಾದರೆ, ಬುದ್ಧಿಯ ಪ್ರೇರಣೆಯಿಲ್ಲದೆಯೇ ರೆಪ್ಪೆಗಳೂ ಮುಚ್ಚಿಕೊಳ್ಳುತ್ತವೆ. ಅದರಂತೆಯೇ ಸನ್ಮಿತ್ರನಾದವ ನು, ತನ್ನ ಸ್ನೇಹಿತನಿಗೆ ಕಷ್ಟ ಬರುವಾಗ ತಾನು ಅವನ ಕೈಗಳಾಗಿ, ರೆಪ್ಪೆಗಳಾಗಿ ಅವನನ್ನು ಕಾಪಾಡುತ್ತಾನೆ ಎಂದು ಜಿ.ಪಿ. ರಾಜರತ್ನಂ ಅವರು ಸ್ನೇಹದ ಬಗ್ಗೆ ಹೇಳಿದ್ದ್ದಾರೆ.

ಮನುಷ್ಯ ಬೆಳೆಸಿಕೊಳ್ಳಬಹುದಾದ ಗುಣಗಳಲ್ಲಿ ಮುಖ್ಯವಾದದ್ದು ಮೈತ್ರಿ; ಆತ ಸಂಪಾದಿಸಿಕೊಳ್ಳಬಹುದಾದ ವಸ್ತುಗಳಲ್ಲಿ ಮುಖ್ಯನಾದವನು ಮಿತ್ರ”.  ಮನುಷ್ಯನ ಸಂಪತ್ತುಗಳಲ್ಲಿ ಸ್ನೇಹಿತರು ಅಮೂಲ್ಯರಾದವರು. ಸ್ನೇಹಿತರನ್ನು ಗಳಿಸಿ, ಉಳಿಸಿ ಕೊಳ್ಳುವ ಪ್ರಯತ್ನ ನಾವು ಮಾಡುತ್ತಿರಬೇಕು. ಮನುಷ್ಯನಿಗೆ ಅಧಿಕಾರ, ಸಂಪತ್ತು, ಆರೋಗ್ಯ ಮುಂತಾದವುಗಳು ಇದ್ದು ಸ್ನೇಹಿತನಿಲ್ಲದಿದ್ದರೆ ಅವನಿಗೆ ಪೂರ್ಣ ಸುಖವಿಲ್ಲ. ಆದರೆ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಜ್ಞಾನದಲ್ಲಿಯೂ, ಗುಣದಲ್ಲಿಯೂ, ನಡತೆಯಲ್ಲಿಯೂ ನಮಗಿಂತ ಶ್ರೇಷ್ಟರಾದವರನ್ನೇ ಆರಿಸಿಕೊಳ್ಳಬೇಕು. ಸ್ನೇಹದಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ಸುಖದುಃಖಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವಲ್ಲಿ ಸ್ನೇಹ ಸಹಕಾರಿಯಾಗುತ್ತದೆ. ಬುದ್ಧಿವಂತಿಕೆ ಮತ್ತು ಜ್ಞಾನವೃದ್ಧಿಗಳೂ ಉಂಟಾಗುತ್ತವೆ. ಅಲ್ಲದೇ ಪರಸ್ಪರ ಸಹಾಯ ಆಗುವುದು.

ಬಡವನಾದ ಕುಚೇಲನನ್ನು ಕೃಷ್ಣನನ್ನು ಸೇರಿಸಿದ್ದು ಜಾತಿ, ಪದವಿ ಸ್ಥಿತಿಗತಿಗಳಲ್ಲ; ಸ್ನೇಹ. ಖಲೀಲ್ ಗಿಬ್ರಾನ್, “ಪ್ರೇಮದಿಂದ ಬಿತ್ತಿ, ಕೃತಜ್ಞತೆಯಿಂದ ಬೆಳೆದುಕೊಳ್ಳುವ ಹೊಲದಂತೆ ಸ್ನೇಹ” ಎಂದಿದ್ದಾನೆ. ಸ್ನೇಹವು ನಮ್ಮ ಸಂತೋಷವನ್ನು ಹೆಚ್ಚಿಸುತ್ತದೆ, ದುಃಖವನ್ನು ಹಿಂದೆ ಸರಿಸುತ್ತದೆ. ನಿಜವಾದ ಸ್ನೇಹ ಏನನ್ನೂ ಬಯಸುವುದಿಲ್ಲ. ಅಂತಸ್ತು, ಅಧಿಕಾರ, ಜಾತಿ ಯಾವುದೂ ಸನಿಹ ಸುಳಿಯುವುದಿಲ್ಲ. ಪ್ರೀತಿ, ಅಂತಃಕರುಣೆಯನ್ನು ಮಾತ್ರ ಬಯಸುತ್ತದೆ. ಒಳ್ಳೆಯ ಸ್ನೇಹಿತರು ದೊರೆಯುವುದು ಪೂರ್ವಜನ್ಮದ ಪುಣ್ಯವೆನ್ನಬಹುದು.

ಸ್ನೇಹಿತರೊಂದಿಗೆ ತೆರೆದ ಹೃದಯದೊಂದಿಗೆ ಮಾತನಾಡಿದಾಗ ಸ್ನೇಹ ವರ್ಧಿಸುವುದು. ನಿಸ್ವಾರ್ಥ, ಪ್ರೇಮ, ವಿಶ್ವಾಸ, ತ್ಯಾಗಗಳ ಸಂಗಮವೇ ಸ್ನೇಹ ಎನ್ನಬಹುದು. ಸ್ನೇಹ ಮನುಷ್ಯನ ಮಾನಸಿಕ ಪ್ರವೃತ್ತಿಯ ವಿಶಿಷ್ಟ ಗುಣ. ಸಮಾನ ಭಾವನೆ, ಆಸಕ್ತಿಗಳು ಸ್ನೇಹವನ್ನು ಸುಲಭವಾಗಿ ಬೆಸೆಯುತ್ತವೆ.

ಸ್ನೇಹ ಬಾಳಿನ ಭದ್ರತೆಗೊಂದು ಭರವಸೆ ನೀಡುತ್ತದೆ. ಪ್ರತಿಯೊಬ್ಬರನ್ನು, ಪ್ರತಿಯೊಂದು ಒಳ್ಳೆಯ ವಿಷಯವನ್ನು ಪ್ರೀತಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಸ್ನೇಹಶೀಲತೆಯ ಮುಖ್ಯವಾದ ಅಂಶ. ಈ ಗುಣಗಳೊಂದಿಗೆ ತ್ಯಾಗಮನೋಭಾವನೆ ಚಿಗುರಿಡುತ್ತದೆ. ಈ ಪ್ರೀತಿ, ತ್ಯಾಗಗಳೇ ಮನುಷ್ಯನಲ್ಲಿ ವಿಶಿಷ್ಟವಾದ ಕಾಂತಿಯನ್ನು, ಮಾನಸಿಕ ಶಾಂತಿಯನ್ನು ನೀಡುತ್ತದೆ.

ಈ ಲೇಖನ ನಿಮಗೆ ಇಷ್ಟವಾದರೆ ದಯಮಾಡಿ ಶೇರ್‍ ಮಾಡಿ ಇತರಿಗೆ ಸ್ನೇಹದ ಬಗ್ಗೆ ತಿಳಿಯಲು ಅವಕಾಶ ಮಾಡಿಕೊಡಿ.

Comments are closed.