ಕರ್ನಾಟಕ

ಹುಣ್ಣಿಮೆಯ ದಿನ ಚಂದ್ರನಿಂದ ಮನುಷ್ಯರ ಮೇಲಾಗುವ ಪರಿಣಾಮ

Pinterest LinkedIn Tumblr

moon

ಮಂಗಳೂರು: ಆಕಾಶದಲ್ಲಿ ಕಾಣಿಸುವ ಅನೇಕ ಗ್ರಹಗಳು ಮನುಷ್ಯನ ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರವು ನಮಗೆ ಹೇಳುತ್ತದೆ. ಅಂದರೆ ಪ್ರತಿಯೊಂದು ಗ್ರಹದಿಂದ ಹೊರಹೊಮ್ಮುವ ಸೂಕ್ಷ್ಮ ಸ್ಪಂದನಗಳ ಪರಿಣಾಮವು ನಮ್ಮ ಮೇಲಾಗುತ್ತದೆ. ಅದರಲ್ಲಿ ಚಂದ್ರನ ಪ್ರಭಾವವೂ ಕೂಡ ಇರುತ್ತದೆಯೇ ಎಂದು ಪರೀಕ್ಷಿಸಲು ಅನೇಕ ವೈಜ್ಞಾನಿಕ ಪರೀಕ್ಷೆಗಳು ಆಗಿವೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಅನೇಕರು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಅನುಭವಿಸಿರುವುದನ್ನು ನೋಡಿ ಅದರ ಬಗ್ಗೆ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಿದಾಗ, ಇವೆರಡು ದಿನಗಳಂದು ಚಂದ್ರನ ಸೂಕ್ಷ್ಮ ಪ್ರಭಾವವು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಮೇಲಾಗುತ್ತದೆ ಎಂದು ತಿಳಿಯುತ್ತದೆ.

ಚಂದ್ರನು ಬೀರುವ ಸೂಕ್ಷ್ಮ ಪರಿಣಾಮ:
ಚಂದ್ರನಿಂದ ಹೊರಹೊಮ್ಮುವ ಸೂಕ್ಷ್ಮ ಸ್ಪಂದನಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಆದರೆ ಮನಸ್ಸು ಎಂದರೇನು? ಅದರ ರಚನೆ ಮತ್ತು ಕಾರ್ಯ ಏನು ಎಂದು ನೋಡೋಣ.

ಮನಸ್ಸಿಗೆ ಎರಡು ಭಾಗಗಳು ಇರುತ್ತವೆ. ಒಂದು ಬಾಹ್ಯ ಮನಸ್ಸು ಮತ್ತು ಇನ್ನೊಂದು ಅಂತರ್ಮನಸ್ಸು. ಮನಸ್ಸಿನ ಎರಡೂ ಭಾಗಗಳ ಕಾರ್ಯ ಬೇರೆ ಬೇರೆ ಇರುತ್ತದೆ. ನಾವು ಯಾವ ವಿಚಾರ ಅರಿತುಕೊಂಡು ಮಾಡುತ್ತೇವೆಯೋ, ಆ ವಿಚಾರ ಮಾಡುವ ಕೆಲಸ ಬಾಹ್ಯ ಮನಸ್ಸಿದ್ದಾಗಿರುತ್ತದೆ.

moon_sun_collson_1

ಅರಿತುಕೊಂಡು ಮಾಡಿದ ಸಂಸ್ಕಾರಗಳ (ಕೃತಿಗಳ) ಗುರುತು ಮೊದಲಿಗೆ ಬಾಹ್ಯಮನದ ಮೇಲೆ ಮತ್ತು ಕಾಲಾಂತರದಲ್ಲಿ ಅಂತರ್ಮನದ ಮೇಲೆ ಆಗುತ್ತದೆ; ಆದರೆ ಅರಿವಾಗದೇ ಅಂದರೆ ಗೊತ್ತಿಲ್ಲದೇ ಅದ ಸಂಸ್ಕಾರಗಳ ಗುರುತು ನೇರವಾಗಿ ಅಂತರ್ಮನದ ಮೇಲೆ ಆಗುತ್ತದೆ. ಈ ಜನ್ಮ ಮತ್ತು ಹಿಂದಿನ ಅನೇಕ ಜನ್ಮಗಳಿಂದ ಅರಿವಿಲ್ಲದೇ ಆಗಿರುವ ಸಂಸ್ಕಾರಗಳ ಕೇಂದ್ರಗಳು ಅಂತರ್ಮನದಲ್ಲಿ ನಿರ್ಮಾಣಗೊಳ್ಳುತ್ತವೆ. ಯಾವ ಸಂಸ್ಕಾರದ ಕೇಂದ್ರವು ದೊಡ್ಡದಾಗಿರುವುದೋ, ಆ ಸಂಸ್ಕಾರದ ಪ್ರಭಾವ ಹೆಚ್ಚು ಪ್ರಮಾಣದಲ್ಲಿ ನಮ್ಮ ಸ್ವಭಾವದಲ್ಲಿ ಕಂಡು ಬರುತ್ತದೆ. ಈ ರೀತಿ ನಿರ್ಮಾಣವಾಗಿರುವ ಸಂಸ್ಕಾರಗಳೇ ನಮಗೆ ಬರುವ ವಿಚಾರಗಳ ಮತ್ತು ನಮ್ಮಿಂದಾಗುವ ಕೃತಿಗಳ ಮೂಲವಾಗುತ್ತವೆ.

ಮೇಲೆ ಕೊಟ್ಟಿರುವ ಚಿತ್ರದಿಂದ ಬಾಹ್ಯ ಮನಸ್ಸು ಮತ್ತು ಅಂತರ್ಮನಸ್ಸಿನ ವ್ಯಾಪ್ತಿಯು ಎಷ್ಟಿರುತ್ತದೆ ಎಂದು ತಿಳಿದುಬರುತ್ತದೆ. ಈ ಚಿತ್ರದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಂಸ್ಕಾರಗಳನ್ನು ಸಾಂಕೇತಿಕವಾಗಿ ತೋರಿಸಲಾಗಿದೆ.

ಚಂದ್ರನಿಂದ ಹೊರಹೊಮ್ಮುವ ಸ್ಪಂದನಗಳು ಮನಸ್ಸಿನಲ್ಲಿ ಉದ್ಭವಿಸುವ ವಿಚಾರಗಳ ಸ್ಪಂದನಗಳ ತುಲನೆಯಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತವೆ, ಆದರೆ ಮನಸ್ಸಿನಲ್ಲಿರುವ ಸಂಸ್ಕಾರಗಳ ಸ್ಪಂದನಗಳ ತುಲನೆಯಲ್ಲಿ ಕಡಿಮೆ ಸೂಕ್ಷ್ಮವಾಗಿರುತ್ತವೆ. ಇದರ ಅರ್ಥ, ನಮ್ಮ ಅಂತರ್ಮನಸ್ಸಿನಲ್ಲಿ ಇರುವ ಸುಪ್ತ ಸಂಸ್ಕಾರಗಳಿಂದ ಉದ್ಭವಿಸುವ ವಿಚಾರಗಳನ್ನು ನಮ್ಮ ಬಾಹ್ಯ ಮನಸ್ಸಿಗೆ ತರುವ ಕಾರ್ಯವನ್ನು ಚಂದ್ರನ ಸ್ಪಂದನಗಳು ಮಾಡಬಲ್ಲವು. ಆದುದರಿಂದ ನಮ್ಮ ಅಂತರ್ಮನಸ್ಸಿನಲ್ಲಿ ಯಾವ ಸಂಸ್ಕಾರಗಳು ಪ್ರಬಲವಾಗಿವೆಯೋ ಅಂತಹ ಸಂಸ್ಕಾರಗಳ ಪ್ರಭಾವವು ನಮ್ಮ ಮೇಲಾಗುತ್ತದೆ.

ಅಮಾವಾಸ್ಯೆ ಮತ್ತು ಹುಣ್ಣಿಮೆಯ ಚಂದ್ರನ ಪ್ರಭಾವ:

ಆಮಾವಾಸ್ಯೆಯಂದು ಚಂದ್ರನ ಮೇಲೆ ಸೂರ್ಯನ ಪ್ರಕಾಶವು ಬೀಳುವುದಿಲ್ಲ. ಕತ್ತೆಲೆಯಿದ್ದಾಗ ರಜ ತಮ ಪ್ರಧಾನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತವೆ. ಆದುದರಿಂದ ಅಮಾವಾಸ್ಯೆಗೆ ಚಂದ್ರನಿಂದ ಸೂಕ್ಷ್ಮ ರಜ ತಮ ಸ್ಪಂದನಗಳು ಭೂಮಿಯತ್ತ ಪ್ರಕ್ಷೇಪಿಸಲ್ಪಡುತ್ತವೆ.

ಹುಣ್ಣಿಮೆಯಂದು ಚಂದ್ರನ ಬೆಳಕು ಹೆಚ್ಚಿರುವುದರಿಂದ ರಜ ತಮ ಸ್ಪಂದನಗಳ ಪ್ರಭಾವವು ಕಡಿಮೆ ಇರುತ್ತದೆ. ಆದರೆ ಚಂದ್ರನ ಸ್ಪಂದನಗಳು ಹೆಚ್ಚು ಕಾರ್ಯರತವಾಗಿರುವುದರಿಂದ ನಮ್ಮ ಮನಸ್ಸಿನ ಮೇಲೆ ಚಂದ್ರನ ಸ್ಪಂದನಗಳು ಪ್ರಭಾವ ಬೀರುತ್ತವೆ. ಮನಸ್ಸಿನಲ್ಲಿ ಯಾವ ಸಂಸ್ಕಾರಗಳು ಪ್ರಬಲವಾಗಿವೆಯೋ, ಅದಕ್ಕೆ ಅನುರೂಪವಾಗಿ ವಿಚಾರಗಳ ಪ್ರಮಾಣವೂ ಹೆಚ್ಚಾಗುತ್ತದೆ.

ಆದರೆ ಸರ್ವೇಸಾಮಾನ್ಯ ಮನುಷ್ಯರಿಗೆ ವಿಚಾರಗಳ ಪ್ರವಾಹವೇ ಬರುತ್ತದೆ. ಷಡ್ರಿಪುಗಳ (ಕ್ರೋಧ, ಲೋಭ ಇತ್ಯಾದಿ) ಪ್ರಮಾಣವು ಹೆಚ್ಚಿದ್ದರೆ ಇಂತಹ ವಿಚಾರಗಳೇ ಹೆಚ್ಚಾಗಿ ಬರಬಹುದು. ಉದಾಹರಣೆಗೆ, ಒಬ್ಬ ಮದ್ಯವ್ಯಸನಿಗೆ ಯಾವುದೇ ಸಮಯದಲ್ಲಿ ಮದ್ಯವನ್ನು ಸೇವಿಸಬೇಕು ಎಂಬ ತೀವ್ರ ವಿಚಾರಗಳು ಬರಬಹುದು.

ಅದೇ ರೀತಿ ಆಧ್ಯಾತ್ಮಿಕ ಸಾಧನೆ ಮಾಡುವವರು ಹುಣ್ಣಿಮೆಯಂದು ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸಿದರೆ, ಮನಸ್ಸಿನಲ್ಲಿ ಸುಪ್ತವಾಗಿರುವ ಆಧ್ಯಾತ್ಮಿಕ ಸಂಸ್ಕಾರಗಳನ್ನು ಜಾಗೃತಗೊಳಿಸಬಹುದು.

ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವ

moon_sun_collson_2

ಸೂರ್ಯನ ಹಾಗೆ, ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವವೂ ಪೃಥ್ವಿಯ ಮೇಲಾಗುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಈ ಪ್ರಭಾವವು ಹೆಚ್ಚಿರುತ್ತದೆ. ಆದುದರಿಂದ ಈ ದಿನಗಳಲ್ಲಿ ಪೃಥ್ವಿಯ ಮೇಲಿರುವ ಪಂಚ ತತ್ತ್ವಗಳು (ಪೃಥ್ವಿ ತತ್ತ್ವ, ಆಪ ತತ್ತ್ವ, ತೇಜ ತತ್ತ್ವ, ವಾಯು ತತ್ತ್ವ ಮತ್ತು ಆಕಾಶ ತತ್ತ್ವ) ಚಂದ್ರನತ್ತ ಆಕರ್ಷಿಸಲ್ಪಡುತ್ತವೆ. ಇದರಿಂದಾಗಿ, ವಾಯುಮಂಡಲದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ತರದ ಒತ್ತಡ ನಿರ್ಮಾಣವಾಗುತ್ತದೆ. ಸ್ಥೂಲದಲ್ಲಿ ನೋಡುವುದಾದರೆ ನೀರಿನ ಸೂಕ್ಷ್ಮ ಕಣಗಳು ವಾಯುಮಂಡಲದ ಈ ಸೂಕ್ಷ್ಮ ಒತ್ತಡದ ಪ್ರದೇಶವನ್ನು ಸೇರುತ್ತವೆ. ಇದೇ ರೀತಿ ಬಹುತಾಂಶ ಕೆಟ್ಟ ಶಕ್ತಿಗಳು ಸೂಕ್ಷ್ಮವಾಗಿರುವುದರಿಂದ ಈ ಒತ್ತಡದ ಪ್ರದೇಶದಲ್ಲಿ ಸೆಳೆಯಲ್ಪಡುತ್ತವೆ. ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಕೆಟ್ಟ ಶಕ್ತಿಗಳು ಒಂದು ಕಡೆ ಸೇರುವುದರಿಂದ ಅವು ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಪ್ರಭಾವಗಳನ್ನು ಮನುಷ್ಯರ ಮೇಲೆ ಬೀರುತ್ತವೆ. ಈ ಪ್ರಕ್ರಿಯೆಯು ಹುಣ್ಣಿಮೆ ಅಥವಾ ಅಮಾವಾಸ್ಯೆಗೆ 2 ದಿನ ಮುಂಚೆ ಪ್ರಾರಂಭವಾಗಿ 2 ದಿನ ನಂತರ ಕೊನೆಗೊಳ್ಳುತ್ತದೆ.

ಮನುಷ್ಯರ ಮೇಲಾಗುವ ಅಮಾವಾಸ್ಯೆ ಅಥವಾ ಹುಣ್ಣಿಮೆಯ ಚಂದ್ರನ ಪರಿಣಾಮ

ಅಮಾವಾಸ್ಯೆಯಂದು ರಜ ತಮವನ್ನು ಪ್ರಕ್ಷೇಪಿಸುವ ಕೆಟ್ಟ ಶಕ್ತಿಗಳು, ಮಾಂತ್ರಿಕರು ಮತ್ತು ತಾಮಸಿಕ ವೃತ್ತಿಯವರಿಗೆ ಅವರ ಕೆಟ್ಟ ಕೃತ್ಯಗಳನ್ನು ಮಾಡಲು ಪ್ರೇರಣೆ ಮತ್ತು ಕಪ್ಪು ಶಕ್ತಿಯು ಸುಲಭವಾಗಿ ಸಿಗುತ್ತದೆ. ಕೆಟ್ಟ ಶಕ್ತಿಗಳಿಗೆ ಪೂರಕವಾಗಿರುವ ಈ ದಿನವನ್ನು ಶುಭ ಕಾರ್ಯಗಳನ್ನು ಮಾಡಲು ‘ಅಶುಭ’ ಎಂದು ಪರಿಗಣಿಸಲಾಗುತ್ತದೆ. ಅಮಾವಾಸ್ಯೆಯಂದು ಚಂದ್ರನ ರಜ ತಮ ಪ್ರಧಾನ ಸ್ಪಂದನಗಳ ಪ್ರಭಾವವು ಮನಸ್ಸಿನ ಮೇಲಾಗುವುದರಿಂದ ಮನಸ್ಸಿನಲ್ಲಿ ಕೆಟ್ಟ ಅಥವಾ ನಕಾರಾತ್ಮಕ ವಿಚಾರಗಳ ಪ್ರಮಾಣವು ಹೆಚ್ಚಾಗುತ್ತದೆ. ಉದಾಹರಣೆಗೆ, ತೀವ್ರ ನಕಾರಾತ್ಮಕ ವಿಚಾರಗಳು, ಆತ್ಮಹತ್ಯೆಯ ವಿಚಾರಗಳು ಇತ್ಯಾದಿ. ದಿನದಲ್ಲಿ ಸೂರ್ಯನಿಂದ ಪ್ರಕ್ಷೇಪಿಸುವ ತೇಜ ತತ್ತ್ವದಿಂದ ರಜ ತಮದ ಸ್ಪಂದನಗಳ ಮೇಲೆ ನಿಯಂತ್ರವಿರುತ್ತದೆ ಆದರೆ ಅಮಾವಾಸ್ಯೆಯ ರಾತ್ರಿ ಈ ತೇಜ ತತ್ತ್ವ ಇಲ್ಲದಿರುವುದರಿಂದ ಕೆಟ್ಟ ಶಕ್ತಿಗಳು ಮನುಷ್ಯರಿಗೆ ಆದಷ್ಟು ಹೆಚ್ಚು ತೊಂದರೆಯನ್ನು ಕೊಡುತ್ತವೆ.

ಹುಣ್ಣಿಮೆಯಂದು ರಜ ತಮ ಸ್ಪಂದನಗಳ ಪ್ರಭಾವವು ಕಡಿಮೆ ಇರುವುದರಿಂದ ಕೆಟ್ಟ ಶಕ್ತಿಗಳಿಗೆ ಇದರ ಲಾಭ ಆಗುವುದಿಲ್ಲ. ಆದರೆ ಚಂದ್ರನ ಗುರುತ್ವಾಕರ್ಷಣೆಯ ಲಾಭ ಪಡೆದುಕೊಂಡು ಕೆಟ್ಟ ಶಕ್ತಿಗಳು ತೊಂದರೆಯನ್ನು ನೀಡುತ್ತವೆ.

ಅಮಾವಾಸ್ಯೆಗೆ ಮನುಷ್ಯರಿಗೆ ಆಗುವ ಆಧ್ಯಾತ್ಮಿಕ ತೊಂದರೆ ಹುಣ್ಣಿಮೆಯ ತುಲನೆಯಲ್ಲಿ ಹೆಚ್ಚಿರುತ್ತದೆ. ಹುಣ್ಣಿಮೆಗೆ ಆಗುವ ತೊಂದರೆ ಸ್ಥೂಲದೇಹಕ್ಕೆ ಹೆಚ್ಚು ಸಂಬಂಧಪಟ್ಟರೆ, ಅಮಾವಾಸ್ಯೆಯಂದು ಮನಸ್ಸಿನ ಮೇಲೆ ಹೆಚ್ಚಿರುತ್ತದೆ. ಆದುದರಿಂದ ಅಮಾವಾಸ್ಯೆಯಿಂದ ಆಗುವ ತೊಂದರೆ ಸುಲಭವಾಗಿ ತಿಳಿಯುವುದಿಲ್ಲ. ತೊಂದರೆ ತಿಳಿಯದೆ ಹೋಗುವುದರಿಂದ ಈ ತೊಂದರೆಯನ್ನು ದೂರಗೊಳಿಸಲು ಏನು ಪ್ರಯತ್ನಗಳು ಆಗುವುದಿಲ್ಲ, ಹೀಗಾಗಿ ಅಮಾವಾಸ್ಯೆಯಂದು ಆಗುವ ತೊಂದರೆಯು ಹೆಚ್ಚು ಅಪಾಯಕಾರಿಯಾಗಿರುತ್ತದೆ.

ಈ ತೊಂದರೆಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಬಹುದು?

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಚಂದ್ರನಿಂದ ಮನುಷ್ಯರ ಮೇಲಾಗುವ ಪ್ರಭಾವವು ಸೂಕ್ಷ್ಮ ಮತ್ತು ಆಧ್ಯಾತ್ಮಿಕ ಸ್ತರದ್ದಾಗಿದೆ. ಆದುದರಿಂದ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಆಧ್ಯಾತ್ಮಿಕ ಉಪಾಯಗಳನ್ನು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕಾಗುತ್ತದೆ.

ಸಾಧ್ಯವಿದ್ದಷ್ಟು ಈ ದಿನಗಳಂದು ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ನಾಮಜಪದಂತಹ ಸಾಧನೆಯನ್ನು ಹೆಚ್ಚಿಸಿ. ಅಂದರೆ ನಿಮ್ಮ ಕುಲದೇವತೆ, ಇಷ್ಟದೇವತೆಯ ನಾಮಜಪನ್ನು ಹೆಚ್ಚು ಹೆಚ್ಚು ಮಾಡಿ. ಅಲ್ಲದೆ, ಪೂರ್ವಜರ ತೊಂದರೆಯಿಂದ ರಕ್ಷಣೆಗಾಗಿ ‘ಶ್ರೀ ಗುರುದೇವ ದತ್ತ’ ಜಪವನ್ನು ಮಾಡಬಹುದು. ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯಗಳನ್ನು ಕೂಡ ಮಾಡಬಹುದು.

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಮಧ್ಯದ ದಿನಗಳಲ್ಲಿ (ಕೃಷ್ಣ ಪಕ್ಷದಲ್ಲಿ) ಚಂದ್ರನ ಗಾತ್ರ ಕುಗ್ಗುತ್ತಿದ್ದಂತೆ, ಚಂದ್ರನಿಂದ ಹೊರಹೊಮ್ಮುವ ರಜ ತಮ ಸ್ಪಂದನಗಳ ಪ್ರಮಾಣವು ಹೆಚ್ಚಾಗುತ್ತದೆ. ಆದುದರಿಂದ ಕೃಷ್ಣ ಪಕ್ಷದಲ್ಲಿ ನಾವು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚು ಮಾಡಬೇಕಾಗುತ್ತದೆ.

ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮಧ್ಯದ ದಿನಗಳಲ್ಲಿ (ಶುಕ್ಲ ಪಕ್ಷದಲ್ಲಿ) ಹಿಂದಿನ 15 ದಿನಗಳ ಆಧ್ಯಾತ್ಮಿಕ ಸಾಧನೆಯನ್ನು ಬಲಗೊಳಿಸುವ ಪ್ರಯತ್ನವನ್ನು ಮಾಡಬೇಕು.

Comments are closed.