ಕರಾವಳಿ

ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ; ಗೊಂದಲ ಮಾಡಿದ್ಯಾರು? (Video)

Pinterest LinkedIn Tumblr

ಕುಂದಾಪುರ : ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಕೆರಾಡಿ ಆಯ್ಕೆಯಾಗಿದ್ದಾರೆ.

ದೇವಸ್ಥಾನದ ಜಗದಾಂಬಿಕಾ ವಸತಿ ಗ್ರಹದ ಆಡಳಿತ ಮಂಡಳಿ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ದೇವಸ್ಥಾನದ ಆಡಳಿತಾಧಿಕಾರಿ, ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು, ಕಾರ್ಯನಿರ್ವಹಣಾಧಿಕಾರಿ ಪಿ.ಬಿ.ಮಹೇಶ್‌, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ, ರಾಮಚಂದ್ರ ಅಡಿಗ, ಗೋಪಾಲಕೃಷ್ಣ,, ರತ್ನ ಆರ್ ಕುಂದರ್, ಸಂಧ್ಯಾ ರಮೇಶ್ ಹಾಗೂ ಶೇಖರ ಪೂಜಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಧ್ಯಮಗಳ ಜೊತೆಗೆ ಮಾತನಾಡಿದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು, ಕೊಲ್ಲೂರು ಕ್ಷೇತ್ರದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ನಿಜಕ್ಕೂ ಸೌಭಾಗ್ಯ. ಎಲ್ಲ ೯ ಸದಸ್ಯರು ಪರಸ್ಪರ ವಿಶ್ವಾಸದೊಂದಿಗೆ ತಾಯಿ ಮೂಕಾಂಬಿಕೆಯ ಸೇವೆ ಮಾಡುತ್ತೇವೆ. ಅಧ್ಯಕ್ಷರು ಹಾಗೂ ಸದಸ್ಯರು ಎನ್ನುವ ಬೇಧ ಇಲ್ಲದೆ ಕೆಲಸ ಮಾಡುತ್ತೇವೆ. ಕೋಟ್ಯಾನುಕೋಟಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಆ ತಾಯಿಯ ಸನ್ನಿಧಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಒಳ್ಳೆಯ ಸೌಕರ್ಯ ಹಾಗೂ ವ್ಯವಸ್ಥೆ ಕಲ್ಪಿಸಲು ವ್ಯವಸ್ಥಾಪನಾ ಸಮಿತಿ ಬದ್ಧವಾಗಿದೆ.ಕೊಲ್ಲೂರು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿಯೂ ಹೆಸರು ಮಾಡಿದ ಪುಣ್ಯ ಕ್ಷೇತ್ರ. ಕ್ಷೇತ್ರದ ಹಾಗೂ ಪರಿಸರದ ಶುಚಿತ್ವ ಕಾಪಾಡಲು ಆದ್ಯತೆ ನೀಡುತ್ತೇವೆ. ಆದಷ್ಟು ಶೀಘ್ರದಲ್ಲಿ ಕ್ಷೇತ್ರದ ಅಷ್ಟಬಂಧ ಕಾರ್ಯ ಮಾಡಲು ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸುತ್ತೇವೆ. ಪುಣ್ಯ ನದಿ ಸೌಪರ್ಣಿಕೆ, ಅಗ್ನಿತೀರ್ಥಗಳ ಶುಚಿತ್ವದ ಕಡೆಗೂ ವಿಶೇಷ ಗಮನ ಹರಿಸುತ್ತೇವೆ ಎಂದರು.

ಆಯ್ಕೆ ಬಳಿಕ ಕೊಂಚ ಗೊಂದಲ…
ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಚುನಾವಣೆ ನಡೆದು ಅದರಲ್ಲಿ ಚಂದ್ರಶೇಖರ್ ಶೆಟ್ಟಿ ಗೆಲವು ಸಾಧಿಸಿದ್ದರು. ಮಾಧ್ಯಮಕ್ಕೆ ಹೇಳಿಕೆ ನೀಡುವ ವೇಳೆ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಕೊಠಡಿಯಲ್ಲಿ ಆಸನ ಸ್ವೀಕರಿಸುವ ವೇಳೆ ಒಬ್ಬರನ್ನು ಹೊರತುಪಡಿಸಿ ಮತ್ತೆಲ್ಲಾ ಸದಸ್ಯರು ಹಾಜರಿದ್ದರು. ಬಳಿಕ ನಡೆದ ವಿದ್ಯಮಾನದಲ್ಲಿ ಒಂದಷ್ಟು ಗೊಂದಲ ನಡೆಯಿತು. ಅಲ್ಲಿ ಬಿಜೆಪಿ ಪಕ್ಷ ಹಾಗೂ ಸಂಘಪರಿವಾರದ ಹೆಸರು ಉಲ್ಲೇಕವೂ ಆದ ಘಟನೆ ನಡೆಯಿತು.

(ವರದಿ- ಯೋಗೀಶ್ ಕುಂಭಾಸಿ)

 

 

Comments are closed.