ಕರಾವಳಿ

ಕೊಡೇರಿ ದೋಣಿ ದುರಂತ: ಮೃತರ ಕುಟುಂಬಗಳಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ಸಚಿವ ಕೋಟ(Video)

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ಕೊಡೇರಿಯಲ್ಲಿ ಆ.16ರಂದು ಸಂಭವಿಸಿದ ನಾಡ ದೋಣಿ ದುರಂತದಲ್ಲಿ ಮೃತ ಪಟ್ಟ ನಾಲ್ವರು ಮೀನುಗಾರರಾದ ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿ, ನಾಗ ಖಾರ್ವಿ, ಶೇಖರ ಖಾರ್ವಿ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಆರು ಲಕ್ಷ ಪರಿಹಾರವನ್ನು ಬಿಡುಗಡೆ ಮಾಡಿದ್ದು , ಪರಿಹಾರ ಮೊತ್ತದ ಆದೇಶ ಪತ್ರವನ್ನು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆ.21ರಂದು ಮೃತರ ಮನೆಗೆ ತೆರಳಿ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಸಚಿವ ಕೋಟ, ಮೀನುಗಾರರ ಸಂಕಷ್ಟಕ್ಕೆ ಸರಕಾರ ಸ್ಪಂದನೆ ನೀಡಲಿದೆ. ಕೊಡೇರಿ ದೋಣಿ ದುರಂತದ ಬಗ್ಗೆ ಸರಕಾರ ನೊಂದಿದೆ. ಮೀನುಗಾರರು ಮನೆ ಕಟ್ಟಿಕೊಳ್ಳಲು ಮೀನುಗಾರಿಕಾ ಮನೆ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ‌ಮಾತನಾಡಲಾಗುತ್ತದೆ. ಘಟನೆಯಲ್ಲಿ ದೋಣಿ ಹಾನಿಗೊಳಗಾದವರ ಪರಿಸ್ಥಿತಿ ಬಗ್ಗೆಯೂ ಸಿಎಂ ಗಮನಕ್ಕೆ ತರಲಾಗುತ್ತೆ. ಇನ್ನು ಬೈಂದೂರು ಕರಾವಳಿಯ ಬ್ರೇಕ್ ವಾಟರ್, ಹೂಳೆತ್ತುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮೃತರ ಕುಟುಂಬಗಳಿಗೆ ತಲಾ 25 ಸಾವಿರ ವೈಯಕ್ತಿಕ ಪರಿಹಾರ ಮೊತ್ತ ‌ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ರೇಕ್ ವಾಟರ್ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಕೊಡೇರಿ ದೋಣಿ‌ ದುರಂತದಲ್ಲಿ‌ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ತಾ.ಪಂ.ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮೀನುಗಾರರ ಮುಖಂಡರಾದ ಮದನ್ ಕುಮಾರ್, ತಾ.ಪಂ ಸದಸ್ಯ ಕರಣ್ ಪೂಜಾರಿ ಹಾಗೂ ಮೀನುಗಾರರ ಮುಖಂಡರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.