ಕರಾವಳಿ

ಕುಂದಾಪುರದ ಕ್ವಾರೆಂಟೈನ್ ಕೇಂದ್ರ ನಿರ್ವಹಣೆಗೆ ಕಂಟ್ರೋಲ್ ರೂಂ: ಶಾಸಕ ಹಾಲಾಡಿ (Video)

Pinterest LinkedIn Tumblr

ಕುಂದಾಪುರ: ಕೊರೊನಾ ಸಮಸ್ಯೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲರಲ್ಲಿಯೂ ತಾಳ್ಮೆ, ಸಂಯಮ ಹಾಗೂ ಪರಸ್ಪರ ಸೇವಾ ಹಾಗೂ ಸಹಕಾರದ ಮನೋಭಾವ ಇರಬೇಕು. ಅನಗತ್ಯವಾಗಿ ಅಧಿಕಾರಿಗಳನ್ನ ಹಾಗೂ ಜನಪ್ರತಿನಿಧಿಗಳನ್ನು ನಿಂದಿಸುವುದರಿಂದ ಯಾವುದೆ ಕಾರ್ಯಸಾಧನೆಯಾಗುವುದಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ವಾರಂಟೈನ್‌ ಕೇಂದ್ರಗಳ ವ್ಯವಸ್ಥೆಗಳ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

ಪರ ಊರಿನಿಂದ ಕ್ವಾರಂಟೈನ್‌ಗಾಗಿ ಬರುವವರಲ್ಲಿ ಹೆಚ್ಚಿನವರು ಯಾವುದೆ ಮೂಲಭೂತ ಅಗತ್ಯೆಗಳನ್ನು ಹೊಂದಿಸಿಕೊಳ್ಳದೆ ನೇರವಾಗಿ ಬರುವುದರಿಂದ ಅಧಿಕಾರಿಗಳಿಗೆ ಅವುಗಳನ್ನು ಹೊಂದಿಸುವುದು ಸಮಸ್ಯೆಯಾಗುತ್ತಿದೆ. ಬೇರೆ ಬೇರೆ ಪ್ರದೇಶಗಳಿಂದ ಬರುವವರ ನಿಕಟ ಮಾಹಿತಿಗಳು ಕ್ವಾರಂಟೈನ್‌ ಕೇಂದ್ರಗಳಿಗೆ ಮುಂಚಿತವಾಗಿ ರವಾನೆಯಾಗದೆ ಇರುವುದರಿಂದಾಗಿ ಉಪಹಾರ ಹಾಗೂ ಊಟೋಪಚಾರದ ವ್ಯವಸ್ಥೆಯಲ್ಲಿ ಲೋಪವಾಗುತ್ತಿದೆ. ಊಟೋಪಚಾರ, ತಟ್ಟೆ, ಲೋಟ, ಸ್ವಚ್ಚತೆಯ ದ್ರಾವಣ, ಸಾಬೂನು, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರದ ಲಭ್ಯ ಅನುದಾನಗಳ ಜತೆಯಲ್ಲಿ ಸ್ಥಳೀಯ ಸಂಘ–ಸಂಸ್ಥೆಗಳ ಹಾಗೂ ದಾನಿಗಳ ನೆರವನ್ನು ಪಡೆದುಕೊಳ್ಳಬೇಕು. ಕ್ವಾರಂಟೈನ್‌ಗಾಗಿ ಬರುವವರು ಯಾವುದೇ ರಾಜಕೀಯ ಪಕ್ಷದ ಬ್ಯಾನರ್‌ನಲ್ಲಿ ಬರುವವರಲ್ಲ, ಎಲ್ಲರೂ ನಮ್ಮವರೇ ಎನ್ನುವ ರೀತಿಯಲ್ಲಿ ಪಕ್ಷಾತೀತವಾಗಿ ಅವರಿಗೆ ಸಹಕಾರ ನೀಡಬೇಕು. ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ವಾರಂಟೈನ್‌ ಕೇಂದ್ರಗಳ ವ್ಯವಸ್ಥೆಯ ಮೇಲುಸ್ತುವಾರಿ ಹಾಗೂ ಪರಿಶೀಲನೆಗಾಗಿ ಸ್ಥಳೀಯ ಪ್ರಮುಖರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮತಿಗಳ ರಚನೆ ಮಾಡಬೇಕು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟಾರೆ ಸ್ಥಿತಿ–ಗತಿಯ ಮಾಹಿತಿ ವಿನಿಮಯಕ್ಕಾಗಿ ಕಮಾಂಡ್‌ (ಕಂಟ್ರೋಲ್‌) ರೂಂ ಅನ್ನು ತುರ್ತಾಗಿ ಆರಂಭಿಸಬೇಕು ಎಂದು ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಅಭಿಪ್ರಾಯ ಮಂಡನೆ ಮಾಡಿದ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ವಾರಂಟೈನ್‌ ಕೇಂದ್ರಗಳ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎನ್ನುವ ಬಗ್ಗೆ ಸ್ವಷ್ಟ ಸೂಚನೆ ಇದೆ. ಕೇಂದ್ರಗಳಲ್ಲಿ ಒಟ್ಟಾದ ತ್ಯಾಜ್ಯಗಳನ್ನು ’ರಾಮ್ಕೆ’ ಸಂಸ್ಥೆಯ ಮೂಲಕ ವಿಲೆವಾರಿ ಮಾಡಲು ಸೂಚನೆಗಳು ಬಂದಿರುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬರುವವರಿಗಾಗಿ ತಟ್ಟೆ, ಲೋಟಗಳೊಂದಿಗೆ ಮೂಲಭೂತ ವಸ್ತುಗಳನ್ನು ಸಾಕಷ್ಟು ಪೂರ್ವಭಾವಿಯಾಗಿ ಸಂಗ್ರಹಿಸಬೇಕು. ಕ್ವಾರಂಟೈನ್‌ವಾಸಿಗಳು ಒಮ್ಮೆ ಬಳಕೆ ಮಾಡಿರುವ ವಸ್ತುಗಳನ್ನು ಇನ್ನೊಬ್ಬರ ಬಳಕೆ ಮಾಡದಂತೆ ಅದನ್ನು ವೈಜ್ಞಾನಿಕವಾಗಿ ವಿಲೆವಾರಿ ಮಾಡಬೇಕು. ಕೇಂದ್ರಗಳಲ್ಲಿ ಅನಗತ್ಯ ತಿರುಗಾಟಗಳನ್ನು ನಿಬಂಧಿಸಬೇಕು. ಶೌಚಾಲಯ ಹಾಗೂ ಸ್ನಾನ ಗ್ರಹಗಳನ್ನು ವೈಜ್ಞಾನಿಕ ರೀತಿಯಲ್ಲಿ ಶುಚಿಯಾಗಿ ಇಡಬೇಕು. ಊಟೋಪಚಾರ ವ್ಯವಸ್ಥೆ ಕಲ್ಪಿಸುವಾಗ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಕ್ವಾರಂಟೈನ್‌ ಕೇಂದ್ರಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಪಿಪಿಇ ಕಿಟ್‌ ಸಹಿತ, ಇತರ ಸುರಕ್ಷಾ ಸಾಧನಗಳನ್ನು ಬಳಸಬೇಕು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಂದರಂತೆ ಕೇಂದ್ರಗಳನ್ನು ತೆರೆಯಲು ಒತ್ತು ನೀಡಬೇಕು. ಕೇಂದ್ರಗಳನ್ನು ಗುರುತಿಸುವ ಮೊದಲು ಅಲ್ಲಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎನ್ನುವ ಸಲಹೆಗಳು ಪ್ರಾಸ್ತಾಪವಾಯಿತು.

ಕುಂದಾಪುರ ತಹಶೀಲ್ದಾರ್‌ ತಿಪ್ಪೇಸ್ವಾಮಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿರಣ್‌ಕುಮಾರ ಕೊಡ್ಗಿ, ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಯಾಡಿ ಶಿವರಾಮ್‌ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಪುತ್ರನ್‌, ಪುರಸಭಾ ಸದಸ್ಯರಾದ ಕೆ.ಮೋಹನ್‌ದಾಸ್‌ ಶೆಣೈ, ಸಂತೋಷ್‌ ಕುಮಾರ್, ಮಾಜಿ ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಸುರೇಶ್‌ ಶೆಟ್ಟಿ ಕಾಡೂರು, ಮುಖಂಡರಾದ ಕೋಣಿ ಕೃಷ್ಣದೇವ ಕಾರಂತ, ದಿವಾಕರ ಪೂಜಾರಿ ಕಡ್ಗಿಮನೆ, ಭಾಸ್ಕರ್‌ ಬಿಲ್ಲವ, ಕೃಷ್ಣ ಗೊಲ್ಲ ಮಾರ್ಕೋಡು, ಸುನೀಲ್‌ ಶೆಟ್ಟಿ ಹೇರಿಕುದ್ರು, ಉದಯ್‌ ನಾಯ್ಕ್‌, ಗಿರೀಶ್‌ ಕುಂದಾಪುರ, ಸದಾನಂದ ಬಳ್ಕೂರು, ಸುಧೀರ್‌ ಕೆ.ಎಸ್‌, ಅರುಣ್‌ ಬಾಣಾ, ಸಂಪತ್‌ಕುಮಾರ ಶೆಟ್ಟಿ, ಇಚ್ಛಿತಾರ್ಥ ಶೆಟ್ಟಿ, ಸುರೇಶ್‌ ಶೆಟ್ಟಿ ಬೀಜಾಡಿ, ವಿಜಯ್‌ ಪುತ್ರನ್‌, ಅಶೋಕ ಪೂಜಾರಿ ಕೋಡಿ, ಪಿ.ಗುಣರತ್ನಾ, ಅಧಿಕಾರಿಗಳಾದ ಬಿ.ಎಸ್‌.ಮಾದರ್‌, ಅರುಣ್‌ಕುಮಾರ್, ಭರತ್‌ ಶೆಟ್ಟಿ, ಸದಾನಂದ ಬೈಂದೂರು, ವಿನಯ್‌ಕುಮಾರ, ಭರತ್‌ ಶೆಟ್ಟಿ ಹಾಗೂ ಪುರಸಭೆಯ ಪರಿಸರ ಇಂಜಿನಿಯರ್‌ ರಾಘವೇಂದ್ರ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.