ಕರಾವಳಿ

ಬಡವರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳಿಗ್ಯಾಕೆ ಗನ್ ಮ್ಯಾನ್, ಎಸಿ ರೂಂ: ಕೇಮಾರು ಶ್ರೀ ಆಕ್ರೋಷ

Pinterest LinkedIn Tumblr

https://youtu.be/omf5gbJqcGo

ಕುಂದಾಪುರ: ಸ್ವಾತಂತ್ರ್ಯ ಬಂದ ಬಳಿಕ ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿ ವರ್ಗ ಮಾತ್ರ ಉದ್ಧಾರವಾಗಿದ್ದು ಬಡವರು ಇನ್ನೂ ಕೂಡ ಬಡವರೇ ಆಗಿದ್ದಾರೆ. ಕೆಲವು ಅಧಿಕಾರಿಗಳು ಗನ್ ಮ್ಯಾನ್ ಇಟ್ಟುಕೊಂಡು ಎಸಿ ರೂಂನಲ್ಲಿ ಕುಳಿತು ಉದ್ದಟತನ ಪ್ರದರ್ಶನ ಮಾಡುತ್ತಿದ್ದಾರೆ. ಜನಸಮಾನ್ಯರ ಕಷ್ಟಕ್ಕೆ ಸ್ಪಂದಿಸದ ಅಂತಹ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗನ್ ಮ್ಯಾನ್ ಭದ್ರತೆಯನ್ನು ವಾಪಾಸ್ ಪಡೆಯಬೇಕು. ರಸ್ತೆಯಲ್ಲಿ, ಗದ್ದೆಯಲ್ಲಿ ಕೆಲಸ ಮಾಡುವ ಬಡವನಿಗೆ ಎಸಿ ರೂಂ ಅಗತ್ಯವೇ ಹೊರತು ಆತನ ಕಷ್ಟಕ್ಕೆ ಧ್ವನಿಯಾಗದ ಅಧಿಕಾರಿಗೆ ಹವಾನಿಯಂತ್ರಿತ ಕೊಠಡಿ ಯಾಕೆ ಎಂದು ಕೇಮಾರು ಶ್ರೀ ಸಾಂಧೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ಫ್ಲೈ ಓವರ್ ಅರೆಬರೆ ಕಾಮಗಾರಿಯಿಂದಾಗುತ್ತಿರುವ ಸಮಸ್ಯೆ ಹಾಗೂ ಕಾಮಗಾರಿ ಶೀಘ್ರವೇ ಪರಿಪೂರ್ಣಗೊಳಿಸಲು ಒತ್ತಾಯಿಸಿ ಇಲ್ಲಿನ ಶಾಸ್ತ್ರಿ ಸರ್ಕಲ್ ಸಮೀಪ ಭಾನುವಾರ ಬೆಳಿಗ್ಗೆ ಕುಂದಾಪುರದ ತಾಲ್ಲೂಕು ಪತ್ರಕರ್ತರ ಸಂಘ (ರಿ.) ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಒಗ್ಗೂಡುವಿಕೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.

ಪ್ರಪಂಚದಲ್ಲಿ ಜನರು ಜನರಿಂದಲೇ ಸಮಸ್ಯೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಂದಾಪುರದಲ್ಲಿನ ದೊಡ್ಡದೊಂದು ದುರಂತ ಇದಾಗಿದ್ದು ಹತ್ತು ವರ್ಷದ ಬಳಿಕವಾದರೂ ಜನರು ಎಚ್ಚೆತ್ತುಕೊಳ್ಳುವ ಪ್ರಮೇಯ ಬಂದಿದ್ದು ಈ ಪ್ರತಿಭಟನೆಯೂ ಮುಂದಿನ ಒಳಿತೆಗೆ ನಾಂದಿಯಾಗಲಿ. ಆರಂಭ ಶೂರತ್ವಕ್ಕಿಂತಲೂ ಗುರಿಯನ್ನು ತಲುಪುವ ದ್ರಢ ನಿರ್ಧಾರ ಕೈಗೆತ್ತಿಕೊಳ್ಳಬೇಕು. ಹೋರಾಟಗಳು ಧರ್ಮದ ದಾರಿಯಲ್ಲಿದ್ದಾಗ ಅದಕ್ಕೆ ಸಾಮಾಜಿಕ ಚಿಂತನೆಯುಳ್ಳವರು ನೈತಿಕವಾಗಿ ಬೆಂಬಲಿಸುವುದು ಅವರ ಕರ್ತ್ಯವ್ಯವಾಗಿದೆ ಎಂದರು.

ಕುಂದಾಪುರದ ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಮಾತನಾಡಿ, ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಕಂಪೆನಿಯು ಪತ್ರಕರ್ತರು ಬಿಟ್ಟು ಪ್ರಧಾನಿ ಕರೆ ಮಾಡಿದರೂ ಸ್ಪಂದಿಸಿದ ಸ್ಥಿತಿಯಿದೆ. ಕನಿಷ್ಟ ಕಾಳಜಿ ಹಾಗೂ ಚಿಂತನೆಯನ್ನು ತೋರದ ಸ್ಥಿತಿಯನ್ನು ನಾಗರಿಕರು ಕಳೆದುಕೊಂಡಾಗ ಇಂತಹ ಸಮಸ್ಯೆಗಳು ಬಿಗುಡಾಯಿಸುತ್ತದೆ. ಎಲ್ಲರಿಘು ಬೇಕಾದ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾದ ಈ ಹೋರಾಟ ಯಾರೊಬ್ಬರ ಅಥವಾ ಯಾವೊಂದೇ ಸಂಘಟನೆಗೆ ಸೀಮಿತವಲ್ಲ. ಇದೊಂದು ಕುಂದಾಪುರದ ಜನತೆ ಈ ಬಗ್ಗೆ ತುರ್ತಾಗಿ ಸ್ಪಂದಿಸಿ ಜಿಲ್ಲಾಡಳಿತವನ್ನು ಎಚ್ಚರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಲಾರಿ ಮಾಲಿಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ನವಯುಗ ಕಂಪೆನಿಯು ಜನರನ್ನು ಸಮಸ್ಯೆಯತ್ತ ಕೊಂಡೊಯ್ಯುತ್ತಿದೆ. ಕುಂದಾಪುರದ ಮಂದಿ ಸ್ವಯಂಪ್ರೇರಿತವಾಗಿ ಬಂದು ಸಮಸ್ಯೆಯತ್ತ ಹೋರಾಡಬೇಕಾದ ಅನಿವಾರ್ಯತೆಯಿದೆ. ಫ್ಲೈ ಓವರ್ ಕಾಮಗಾರಿ ಅರ್ಧಕ್ಕೆ ನಿಂತು ಹತ್ತು ವರ್ಷಗಳಾಗಿದ್ದು ರಾಡ್ ಸೇರಿದಂತೆ ವಿವಿಧ ಉತ್ಪನ್ನ ಮಳೆ, ಬಿಸಿಲಿಗೆ ಸಂಪೂರ್ಣ ಶಿಥೀಲಗೊಂಡು ಮುಂದಿನ ದಿನದಲ್ಲಿ ಅನಾಹುತಕ್ಕೆ ದಾರಿಮಾಡಿಕೊಡುವ ಸಾಧ್ಯತೆಯಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಕೆಂಚನೂರು ಸೋಮಶೇಖರ್ ಶೆಟ್ಟಿ, ರಾಜ್ಯ ಲಾರಿ ಮಾಲಿಕರ ಸಂಘದ ಪದಾಧಿಕಾರಿ ಮನ್ಸೂರು ಮರವಂತೆ, ನ್ಯಾಯವಾದಿ ಶಿರಿಯಾರ ಗೇೂಪಾಲಕೃಷ್ಣ ಶೆಟ್ಟಿ, ವಿವಿಧ ಸಂಘಟನೆ ಮುಖಂಡರಾದ ಅಬ್ಬು ಮಹಮ್ಮದ್ ಕುಂದಾಪುರ, ವಿನೋದ್ ಕ್ರಾಸ್ತಾ, ಶ್ರೀನಿವಾಸ ಕುಂದರ್, ರಾಜೇಂದ್ರ ಸಂಗಮ್, ಗಣೇಶ್ ಭಟ್ ಗೋಪಾಡಿ, ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಈ ಸಂದರ್ಭ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.