ಕರಾವಳಿ

ಲಾಬಿ ಮಾಡಿಲ್ಲ; ವಾಮಮಾರ್ಗದಲ್ಲಿ ಸಚಿವ ಸ್ಥಾನದ ಬೇಡಿಕೆಯಿಟ್ಟಿಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ (Video)

Pinterest LinkedIn Tumblr

ಉಡುಪಿ: ಸತತ ಐದು ಬಾರಿ ಗೆಲುವು ಸಾಧಿಸಿ ಕುಂದಾಪುರ ಶಾಸಕರಾಗಿದ್ದು ಅಭಿಮಾನಿಗಳಿಂದ ಕುಂದಾಪುರದ ವಾಜಪೇಯಿ ಎಂದು ಕರೆಸಿಕೊಳ್ಳುವ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದ್ದು ಅಭಿಮಾನಿಗಳು ಈ ಬಗ್ಗೆ ಗರಂ ಆಗಿದ್ದಾರೆ.

ಲಾಬಿ ಮಾಡಲ್ಲ…
ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಹಾಲಾಡಿ, ಲಾಬಿ ಮಾಡಿ ಸಚಿವ ಸ್ಥಾನ ಪಡೆಯೋದು ಗೊತ್ತಿಲ್ಲ. ಗುಂಪುಗಾರಿಕೆ, ವಾಮಮಾರ್ಗದ ಮೂಲಕ ನನ್ನ ಯಾವುದೇ ಬೇಡಿಕೆಯಿಲ್ಲ. ಜಾತಿ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ. ಪ್ರಮಾಣವಚನಕ್ಕೆ ನನಗೆ ಆಹ್ವಾನ ಇರಲಿಲ್ಲ ಅದಕ್ಕಾಗಿ ತೆರಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

ನಾನು ಬಿಜೆಪಿಗೆ ನಿಷ್ಟಾವಂತ…
ನಾನು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿಗೆ ಪಕ್ಷನಿಷ್ಠೆ ತೋರಿದ್ದೇನೆ. ಪಕ್ಷೇತರನಾಗಿದ್ದಾಗ ಬಿಜೆಪಿ ಬೆಂಬಲಿಸಿದ್ದು ಜಿಲ್ಲಾ ಪಂಚಾಯತ್, ಗ್ರಾಮ, ತಾಲೂಕು ಪಂಚಾಯತ್ ಸದಸ್ಯರೆಲ್ಲರೂ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಹೇಳಿದರು. ಸರಕಾರಿ ಕೆಲಸದ ವಿಚಾರದಲ್ಲಿ ಜಾತಿ, ಧರ್ಮ ನೋಡದೆ ಸಾಮಾಜಿಕ ನ್ಯಾಯದಡಿಯಲ್ಲಿ ಕೆಲಸ ಮಾಡುತ್ತಿರುವೆ. ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ…ಮಾಧ್ಯಮದವರು ಬಿಜೆಪಿಯ ಪ್ರಮುಖರನ್ನೇ ಕೇಳಿ ಎಂದರು.

ಆರ್.ಎಸ್.ಎಸ್. ನಾಯಕರಿಗೆ ನಿಮ್ಮ ಬಗ್ಗೆ ಒಲವಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಇದಕ್ಕೆ ನಾನು ಉತ್ತರಿಸಲ್ಲ. ಬಿಜೆಪಿಯ ಎಲ್ಲಾ ವ್ಯವಸ್ಥೆಗಳ ಜೊತೆ ನಾನಿದ್ದೇನೆ..ಆರ್.ಎಸ್.ಎಸ್. ಮನಸ್ಸಿನಲ್ಲಿ ನಾನಿಲ್ಲವೇ ಎಂಬುದನ್ನು ಅವರ ಬಳಿಯೇ ಕೇಳಿ ಎಂದರು. ಸಚಿವ ಸ್ಥಾನ ವಂಚಿತರು ಸಭೆಗೆ ಕರೆದಿದ್ದರು. ಬೆಂಗಳೂರಿಗೆ ನನ್ನನ್ನು ಸಭೆಗೆ ಬರುವಂತೆ ಕರೆ ಮಾಡಿದ್ದರು. ನಾನು ಎಲ್ಲೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದೇನೆ ಎಂದು ಹೇಳಿದರು.

ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಹಾಲಾಡಿಯವರ ಅಭಿಮಾನಿಗಳು, ಬಿಜೆಪಿಯ ಕಾರ್ಯಕರ್ತರು ನಿವಾಸಕ್ಕೆ ಆಗಮಿಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.