ಪ್ರಮುಖ ವರದಿಗಳು

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ತಂದೆಯಿಂದ ಜೀವ ಬೆದರಿಕೆ: ಬಿಜೆಪಿ ಶಾಸಕನ ಪುತ್ರಿ ವೀಡಿಯೋ ವೈರಲ್

Pinterest LinkedIn Tumblr

ಬರೇಲಿ: ತಂದೆಯಿಂದ ನನಗೆ ಜೀವ ಬೆದರಿಕೆ ಇದೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರ ಪುತ್ರಿ ವೀಡಿಯೋಗಳನ್ನು ಹರಿಯಬಿಟ್ಟಿದ್ದು, ಅದೀಗ ವೈರಲ್ ಆಗಿದೆ.

ಬರೇಲಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ದಲಿತ ಹುಡುಗನನ್ನು ಪ್ರೀತಿಸಿದ್ದು, ಆತನ ಜತೆ ಪರಾರಿಯಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ಮದುವೆ ನನ್ನ ಕುಟುಂಬದ ಒಪ್ಪಿಗೆಯ ವಿರುದ್ಧ ನಡೆದಿದ್ದು, ತಂದೆಯಿಂದ ಜೀವ ಬೆದರಿಕೆ ಇದೆ ಎಂದಾಕೆ ವೀಡಿಯೋದಲ್ಲಿ ತಿಳಿಸಿದ್ದಾರೆ.

ಬರೇಲಿ ಪೊಲೀಸ್ ಮುಖ್ಯಸ್ಥ ಮುನಿರಾಜ್ ಜಿ ಅವರನ್ನುದ್ದೇಶಿಸಿ ಮಾಡಿರುವ ವೀಡಿಯೋದಲ್ಲಿ ಶಾಸಕರ ಪುತ್ರಿ ಸಾಕ್ಷಿ (23) ಮತ್ತಾಕೆಯ ಪತಿ ಅಜಿತೇಶ್ ಕುಮಾರ್ ಅಲಿಯಾಸ್ ಅಭಿ (29) ತಮಗೆ ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಶಾಸಕರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ಎಸ್‌ಎಸ್‌ಪಿ, ವೀಡಿಯೋ ಬಗ್ಗೆ ಮಾಹಿತಿ ಇದೆ, ಆದರೆ ಅಧಿಕೃತ ದೂರು ದಾಖಲಾಗಿಲ್ಲ ಎಂದಿದ್ದಾರೆ.

ವೀಡಿಯೋವನ್ನು ಪರಿಶೀಲಿಸಿದ್ದು, ದಂಪತಿಗೆ ಭದ್ರತೆಯನ್ನೊದಗಿಸುವಂತೆ ಎಸ್‌ಎಸ್‌ಪಿಗೆ ನಿರ್ದೇಶಿಸಿದ್ದೇನೆ . ಆದರೆ ಆಕೆ ತಾನೆಲ್ಲಿರುವುದು ಎಂದು ತಿಳಿಸಿಲ್ಲ ಎಂದು ಡಿಐಜಿ ಆರ್ ಕೆ ಪಾಂಡೆ ಹೇಳಿದ್ದಾರೆ.

ಸಾಕ್ಷಿ 2 ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಕ್ಷಿ, ” ನಾನು ಸಾಕ್ಷಿ, ಮತ್ತಿವರು ನನ್ನ ಪತಿ ಅಭಿ. ನಾವು ಜೀವವನ್ನುಳಿಸಿಕೊಳ್ಳಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಿ ಓಡಿ ಹತಾಸರಾಗಿದ್ದೇವೆ. ನಮಗೆ ಭದ್ರತೆ ಒದಗಿಸಿ ಎಂದು ಎಸ್ಎಸ್‌ಪಿಯಲ್ಲಿ ಕೇಳಿಕೊಳ್ಳುತ್ತೇನೆ”, ಎಂದಿದ್ದಾಳೆ.

”ನಾವು ಹೋಟೆಲೊಂದರಲ್ಲಿ ತಂಗಿದ್ದು ಕೆಲವು ಜನರು ನಮ್ಮನ್ನು ಕೊಲ್ಲಲು ಬಂದಿದ್ದರು, ಅದೃಷ್ಟವಶಾತ್ ನಾವು ಅಲ್ಲಿಂದ ತಪ್ಪಿಸಿಕೊಂಡು ಬಂದೆವು. ನಾನು ದಲಿತ ಎಂಬುದೇ ಈ ಹತ್ಯೆ ಸಂಚಿಗೆ ಕಾರಣ”, ಎಂದು ಅಭಿ ಕೂಡ ವೀಡಿಯೋದಲ್ಲಿ ಹೇಳಿದ್ದಾನೆ.

ಇನ್ನೊಂದು ವೀಡಿಯೋದಲ್ಲವಳು, ನಮ್ಮನ್ನು ನೆಮ್ಮದಿಯಿಂದ ಬದುಕಲು ಕೊಡಿ ಎಂದು ತಂದೆ ಮತ್ತು ಸಹೋದರನಲ್ಲಿ ಕೇಳಿಕೊಂಡಿದ್ದಾಳೆ.

ಅಭಿ ತಂದೆ ಬ್ಯಾಂಕ್ ವ್ಯವಸ್ಥಾಪಕರಾಗಿದ್ದು, ಹಲವು ವರ್ಷಗಳಿಂದ ಶಾಸಕರಿಗೆ ಆಪ್ತರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಭಿ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾನೆ, ಎಂದು ತಿಳಿದು ಬಂದಿದೆ.

Comments are closed.