ಕರಾವಳಿ

ಮೋದಿ ಸರಕಾರಕ್ಕೆ 4 ವರ್ಷದ ಸಂಭ್ರಮ: ಭಟ್ಕಳದಲ್ಲಿ ಮಳೆಯ ನಡುವೆಯೂ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ

Pinterest LinkedIn Tumblr

ಕಾರವಾರ: ಕೇಂದ್ರದಲ್ಲಿ ಎನ್​ಡಿಎ ಸರಕಾರ 4 ವರ್ಷ ಪೂರೈಸಿದ್ದು ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೇಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಸುರಿದ ಬಾರೀ ಮಳೆಯನ್ನು ಲೆಕ್ಕಿಸದೆ ಭಟ್ಕಳ ತಾಲೂಕಿನ ಬಿಜೆಪಿ ಕಾರ್ಯಕರ್ತರು ನಡೆಸಿದ ರ್‍ಯಾಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಭಟ್ಕಳ ಶಾಸಕ ಸುನೀಲ್ ನಾಯ್ಕ ನೇತೃತ್ವದಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು. ಆದರೆ ಬೈಕ್ ರ‍್ಯಾಲಿಗೆ ಚಾಲನೆ ನೀಡುತ್ತಿದ್ದಂತೆ ಮಳೆ ಆರಂಭವಾಗಿದ್ದು ರ‍್ಯಾಲಿ ಬಂದ್ ಮಾಡದ ಕಾರ್ಯಕರ್ತರು ರ್‍ಯಾಲಿ ಮುಂದುವರೆಸಿ ಸಂಭ್ರಮಾಚರಣೆ ನಡೆಸಿದರು. ಕಾರ್ಯಕರ್ತರ ಈ ಉತ್ಸಾಹಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. “ಮಳೆಯನ್ನೂ ಲೆಕ್ಕಿಸದೇ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ಭಟ್ಕಳದ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಉತ್ಸಾಹ ನೋಡಿ ಸಂತೋಷವಾಯಿತು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಮೋದಿ ಸಾಧನೆ ಅಪಾರ: ಮಹೇಶ್ ಪೂಜಾರಿ
ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್‍ಯಕಾರಿಣಿ ಸದಸ್ಯ ಹಾಗೂ ಉತ್ತರ ಕನ್ನಡ ಜಿಲ್ಲೆ ಯುವಮೋರ್ಚಾ ಉಸ್ತುವಾರಿ ಮಹೇಶ್ ಪೂಜಾರಿ ಹಳೆಅಳಿವೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮೋದಿಯವರು ಜನರಿಗೆ ನೀಡಿದ ಜನೋಪಯೋಗಿ ಕಾರ್ಯಕ್ರಮಗಳನ್ನು ದೇಶದ ಜನರು ಮೆಚ್ಚಿಕೊಂಡಿದ್ದಾರೆ. ಅವರ ಸಾಧನೆಯ ಹಿನ್ನೆಲೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಗೆ ಒಗ್ಗೂಡಿಸಿ ಶ್ರಮಿಸಬೇಕು ಎನ್ನುವ ಕರೆ ನೀಡಿದರು.

ಭಟ್ಕಳ ಯುವಮೋರ್ಚಾ ಅಧ್ಯಕ್ಷ ಲಕ್ಷ್ಮಣ ನಾಯ್ಕ ಮಾತನಾಡಿ, ಮೋದಿಯವರ ಮೇಲಿನ ಅಭಿಮಾನದಿಂದಾಗಿ ಮಳೆಯಲ್ಲಿಯೂ ರ್‍ಯಾಲಿ ನಡೆಸಿದ್ದು ಕಾರ್ಯಕರ್ತರ ಬೆಂಬಲ ಅತೀವವಾಗಿದೆ. ರಾಜ್ಯ ಯುವಮೋರ್ಚಾದ ವತಿಯಿಂದ ಉಸ್ತುವಾರಿ ಮಹೇಶ್ ಪೂಜಾರಿ ಮೊದಲಾದವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಮುಂದಿನ ದಿನದಲ್ಲಿಯೂ ಕೂಡ ಪಕ್ಷ ಸಂಘಟನೆಗೆ ಯುವಮೋರ್ಚಾ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.

ಈ ಸಂದರ್ಭ ಭಟ್ಕಳ ಬಿಜೆಪಿ ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾಪ್ರಚಾರಕ ಅರುಣ್ ಬಿನ್ನಾಣಿ, ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗ, ಭಾಸ್ಕರ ದೈಮನೆ, ರವಿ ನಾಯ್ಕ ಚಾಲಿ, ತಾ.ಪಂ ಸದಸ್ಯ ಹನ್ಮಂತ ನಾಯ್ಕ, ಸ್ಥಳೀಯ ಹಲವಾರು ಮುಖಂಡರು, ನೂರಾರು ಕಾರ್ಯಕರ್ತರಿದ್ದರು.

Comments are closed.