ಅಂತರಾಷ್ಟ್ರೀಯ

ಸಾವಿನ ದವಡೆಯಿಂದ ಪಾರಾಗುವುದಂದರೆ ಇದು…! ಚಲಿಸುತ್ತಿದ್ದ ಬಸ್ಸಿನಡಿ ಗೆಳತಿಯನ್ನೇ ನೂಕಿದ ಯುವತಿ

Pinterest LinkedIn Tumblr

https://youtu.be/bKAvlgryNSU

ವಾರ್ಸಾ: ಮನುಷ್ಯನಿಗೆ ಸಾವು ಹೇಗೆ ಬರುತ್ತೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗೆ ಕೆಲವರು ಸಾವಿನ ಅಂಚಿನವರೆಗೂ ಹೋಗಿ ಬದುಕಿ ಉಳಿದಿರುವ ಘಟನೆಗಳು ನಮ್ಮ ಮುಂದೆ ಸಾಕಷ್ಟು ಇವೆ. ಸಾವಿನ ಮನೆಯ ಬಾಗಿಲು ತಟ್ಟಿ ಬರುವವರಿಗೆ ಅದೃಷ್ಟವಂತರೂ ಎನ್ನಬಹುದು. ಅದೇ ರೀತಿಯಲ್ಲಿ ಯುವತಿಯೊಬ್ಬಳು ಬಸ್ಸಿನ ಅಡಿ ಸಿಲುಕಿದ್ರೂ ಬದುಕಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏಪ್ರಿಲ್ 12ರಂದು ಯುರೋಪ್ ಖಂಡದ ಪೋಲಂಡ್ ದೇಶದ ಜೆಕೋವಿಸ್-ಡಿಜೈಡಿಸ್ ಎಂಬಲ್ಲಿ ಈ ಘಟನೆ ನಡೆದಿದ್ದು, ಬಸ್ಸಿನಡಿ ಸಿಲುಕಿದ ಯುವತಿ ಬದುಕಿ ಬಂದಿದ್ದಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸರು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಇಬ್ಬರು ಯುವತಿಯರು ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದರು. ಈ ವೇಳೆ ರಸ್ತೆ ಪಕ್ಕ ಬರ್ತಿದ್ದ ಯುವತಿಗೆ ಆಕೆಯ ಗೆಳತಿ ಭುಜದಿಂದ ನೂಕಿದ್ದಾಳೆ. ಈ ಸಮಯದಲ್ಲಿ ನಿಂತಿದ್ದ ಬಸ್ ಚಲಿಸಲಾರಂಭಿಸಿದೆ. ಬಸ್ಸಿನ ಕೊನೆಯ ಚಕ್ರಕ್ಕೂ ಕೇವಲ ಒಂದು ಇಂಚಿನಷ್ಟು ಅಂದ್ರೆ ಕೂದಲೆಳೆಯ ಅಂತರದಲ್ಲಿ ಯುವತಿ ಬಚಾವ್ ಆಗಿದ್ದಾಳೆ.

ಗೆಳತಿ ಬಸ್ ಕೆಳಗೆ ಬಿದ್ದಿದ್ದನ್ನು ನೋಡಿದ ಆಕೆಯ ಗೆಳತಿ ಕೂಡಲೇ ಮೇಲಕ್ಕೆ ಎಬ್ಬಿಸಿ ಅಪ್ಪಿಕೊಂಡು ಸಮಾಧಾನ ಹೇಳಿದ್ದಾಳೆ. ಈ ದೃಶ್ಯಗಳನ್ನು ನೋಡಿದ ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಸಹ ವಾಹನವನ್ನು ನಿಲ್ಲಿಸಿ ಯುವತಿಯ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

ಯುವತಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿಯನ್ನು ಬಸ್ ಕೆಳಗಡೆ ನೂಕಿದ ಆಕೆಯ ಗೆಳತಿಗೆ ದಂಡ ವಿಧಿಸಲಾಗಿದೆ. ಗೆಳತಿ ಸಲುಗೆಯಿಂದ ತಳ್ಳಿದಳೋ ಅಥವಾ ಉದ್ದೇಶಪೂರ್ವಕವಾಗಿ ನೂಕಿದಳೋ ಎಂಬುವುದು ಖಚಿತವಾಗಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಒಂದು ವೇಳೆ ಆರೋಪ ಸಾಬೀತಾದ್ರೆ ನೂಕಿದ ಯುವತಿಗೆ ಒಂದು ವರ್ಷದ ಜೈಲು ಶಿಕ್ಷೆ ಆಗಲಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

Comments are closed.