ಕರಾವಳಿ

ಕುಂದಾಪುರ ಖಾರ್ವಿ ಸಮಾಜದ ಹೋಳಿ ಆಚರಣೆ ಝಲಕ್ ; ಬಣ್ಣಗಳ ಎರಚಾಟದದಲ್ಲಿ ಜನಸಾಗರ! (ವೀಡಿಯೊ)

Pinterest LinkedIn Tumblr

ಕುಂದಾಪುರ: ನಾಡಿನೆಲ್ಲೆಡೆ ಈಗ ಹೋಳಿಹಬ್ಬದ ಗೌಜು. ಅಂತೆಯೇ ಕುಂದಾಪುರ ತಾಲೂಕಿನಲ್ಲಿ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವಾರಗಳ ಕಾಲ ವೈಶಿಷ್ಟ್ಯ ಪೂರ್ವಕವಾಗಿ ಆಚರಿಸುತ್ತಾರೆ. ಇವರು ಆಚರಿಸುವ ಹೋಳಿಯಲ್ಲಿ ಧಾರ್ಮಿಕತೆ, ಸಾಂಸ್ಕ್ರತಿಕದ ಜೊತೆಗೆ ಮನೋರಂಜನೆಯೂ ಇದೆ. ಖಾರ್ವಿ ಸಮಾಜದ ಹೋಳಿ ಹಬ್ಬದ ಝಲಕ್ ಇಲ್ಲಿದೆ.

 

ಕುಂದಾಪುರ ಪೇಟೆಯಲ್ಲಿ ವಾರಗಳಿಂದಲೂ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕುಂದಾಪುರದ ಖಾರ್ವಿ ಸಮಾಜದವರು ಆಚರಿಸುವ ಹೋಳಿಹಬ್ಬವು ಫೆಬ್ರವರಿ 26ರಿಂದ ಆರಂಭಗೊಂಡು ಆರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆದವು. ಹೋಳಿ ಹಬ್ಬದ ಕೊನೆಯ ದಿನವಾದ ಶನಿವಾರ ಓಕುಳಿ ಹಾಗೂ ಪುರ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೀತು. ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನದಿಂದ ಸಾಗಿಬಂದ ಮೆರವಣಿಗೆ ಪೇಟೆಯಲ್ಲಿ ಸಂಚರಿಸಿ ಬಳಿಕ ಪುನಃ ದೇವಸ್ಥಾನದ ಬಳಿ ತೆರಳಿ ಸಮಾಪನಗೊಂಡಿತು. ಈ ಬೃಹತ್ ಮೆರವಣಿಗೆಯಲ್ಲಿ ಬಣ್ಣಗಳ ಎರಚಾಟ, ಕುಣಿತ, ಗಾನಬಜಾನ ಕುಂದಾಪುರ ಪೇಟೆಯಲ್ಲಿ ಕಂಡು ಬಂದಿತು. ಯುವಕ-ಯುವತಿಯರು, ಹಿರಿಯರು ಮಕ್ಕಳು ಎಂಬ ಭೇದ ಭಾವಗಳಿಲ್ಲದೇ ಪರಸ್ಪರ ಬಣ್ಣ ಹಚ್ಚಿಕೊಂಡು ಡಿಜೇ ಮ್ಯೂಸಿಕ್ ಗೆ ಸ್ಟೆಪ್ ಹಾಕಿ ಸಂಭರ್ಮಿಸಿದರು. ಸಂಪೂರ್ಣ ಹೋಳಿ ಮೆರವಣಿಗೆಯಲ್ಲಿ ಒಂದಷ್ಟು ಮಂದಿ ವಿದೇಶಿಗರು ಪಾಲ್ಘೊಂಡು ಸಂಭ್ರಮಿಸಿದ್ರು. ಯುವ ಜನಾಂಗವನ್ನು ಆಕರ್ಷಿಸುವ ನಿಟ್ಟಿನಲ್ಲಿ ಡ್ರೆಸ್ ಕೋಡ್ ಸ್ಪರ್ಧೆ ಆಯೋಜಿಸಲಾಗಿತ್ತು. ಗುಂಪುಗಳನ್ನು ಮಾಡಿಕೊಂಡ ಯುವಕ ಯುವತಿಯರು ತಮ್ಮದೇ ಡಿಫರೆಂಟ್ ಡ್ರೆಸ್ ಮೂಲಕ ಮೆರವಣಿಗೆಯಲ್ಲಿ ಸಾಗಿಬಂದ್ರು.

ಅಂದ ಹಾಗೇ ಕುಂದಾಪುರದಲ್ಲಿ ಕೊಂಕಣ ಖಾರ್ವಿ ಸಮಾಜದವರು ಆಚರಿಸುವ ಹೋಳಿ ಹಬ್ಬಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಹೋಳಿ ಹಬ್ಬವನ್ನು ಈಶ್ವರನ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಖಾರ್ವಿ ಸಮಾಜದವರು ಆಚರಿಸುವ ಅತೀ ದೊಡ್ಡ ಹಾಗೂ ಪವಿತ್ರವಾದ ಹಬ್ಬ ಹೋಳಿಹಬ್ಬವಾಗಿದೆ. ಪ್ರಥಮ ದಿನದಂದು ಹೋಳಿ ಮನೆಯೆಂಬ ಆಚರಣೆಯೊಂದಿಗೆ ನಾಲ್ಕು ದಿನಗಳ ಕಾಲ ಗಡ್ಡೆ ಕಾರ್ಯಕ್ರಮ ನಡೆಯುತ್ತೆ. ಐದನೇ ದಿನ ಹೋಳಿ ಕಾಮದಹನ ನಡೆದರೆ ಕೊನೆಯ ದಿನ ಓಕುಳಿ ಹಾಗೂ ಪುರಮೆರವಣಿಗೆ ಸಾಂಪ್ರದಾಯಬದ್ಧವಾಗಿ ನಡೆಯುತ್ತೆ. ವರ್ಷದ ಎಲ್ಲಾ ದೋಷಗಳು ಈ ಹೋಳಿ ಹಬ್ಬದ ಮೂಲಕ ನಿವಾರಣೆಯಾಗುತ್ತೆ, ಸಮಾಜವು ಇದರಿಂದ ಅಭಿವ್ರದ್ಧಿಯಾಗುತ್ತೆ ಎಂಬ ನಂಬಿಕೆ ಖಾರ್ವಿ ಸಮಾಜದವರದ್ದು. ಪ್ರೀತಿ, ವಿಶ್ವಾಸ ಹಾಗೂ ವಿಶ್ವಶಾಂತಿಗಾಗಿ ಈ ಹಬ್ಬವನ್ನು ಆಚರಿಸುತ್ತಿದ್ದು ಸಮಾಜಬಾಂಧವರು ಮಾತ್ರವಲ್ಲದೇ ಇತರೇ ಸಮಾಜದ ಜನರು ಭಾಗವಹಿಸುವುದು ಇಲ್ಲಿನ ವಿಶೇಷ.

ಒಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೊಂಕಣ ಖಾರ್ವಿ ಸಮಾಜದವರು ಹೋಳಿ ಹಬ್ಬವನ್ನು ವರ್ಷಂಪ್ರತಿ ಅದ್ಧೂರಿಯಾಗಿ ಮಾಡುತ್ತಿದ್ದು ಧಾರ್ಮಿಕತೆ ಜೊತೆ ಮನೋರಂಜನೆಗೂ ಒತ್ತು ನೀಡಿದ್ದು ವಿಶೇಷವಾಗಿದೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.