ಕರಾವಳಿ

ಕುಂದಾಪುರ ಡಾ. ರಾಜ್ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ (Video)

Pinterest LinkedIn Tumblr

ಕುಂದಾಪುರ: ಇಲ್ಲಿನ ಡಾ. ರಾಜ್ ಸಂಘಟನೆಯವರು ಕನ್ನಡ ರಾಜ್ಯೋತ್ಸವ ಆಚರಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ಬಡ ಕುಟುಂಬಕ್ಕೆ ಧನ ಸಹಾಯ ನೀಡುವ ಮೂಲಕ ಡಾ. ರಾಜ್ ಹೆಸರಿನಲ್ಲಿರುವ ಈ ಸಂಘಟನೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕುಂದಾಪುರ ನೂತನ ಬಸ್ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭವನ್ನು ಕುಂದಾಪುರ ಕುಂದಾಪುರ ಠಾಣಾಧಿಕಾರಿ ಹರೀಶ್ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ಬಹಳಷ್ಟು ಇತಿಹಾಸವಿದ್ದು ಅದರ ಉಳಿವಿಗೆ ಯುವಕರ ಪ್ರೋತ್ಸಾಹ ಅಗತ್ಯ. ಕನ್ನಡದ ಬಗೆಗಿನ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಕಂಡುಬರುತ್ತಿದ್ದು ಕನ್ನಡ ಭಾಷೆ ಹಾಗೂ ಕರ್ನಾಟಕದ ಅಭಿವ್ರದ್ಧಿಗೆ ಯುವಕರ ಶ್ರಮ ಹಾಗೂ ಪ್ರತಿಭೆ ಅಗತ್ಯ. ನಮ್ಮಲ್ಲಿ ಭಾಷಾಭಿಮಾನ, ನೆಲ ಜಲದ ಬಗೆಗಿನ ಪ್ರೀತಿ ಜಾಸ್ಥಿಯಾಗಬೇಕು ಎಂದರು.

ಧಜಾರೋಹಣ ನೆರವೇರಿಸಿ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಕೇವಲ ಸರಕಾರಿ ಮಟ್ಟ ಹಾಗೂ ತಳಮಟ್ಟದಲ್ಲಿ ನಡೆಯುತ್ತಿದೆ. ನಮ್ಮ ನೆಲೆ ಜಲ ಭಾಷೆಯಾದ ಕನ್ನಡವನ್ನು ಪ್ರೀತಿಸುವ ಕಾರ್ಯವಾಗಬೇಕು. ಉಪಯೋಗಿಸುವ ಭಾಷೆಯಲ್ಲಿಯೇ ಅತಿಯಾಗಿ ನಶಿಸುತ್ತಿರುವ ಬಾಷೆ ಕನ್ನಡವಾಗಿದೆ. ಜಗತ್ತಿನಲ್ಲಿ ಬದಲಾವಣೆ ಎಂದಿಗೂ ಸಹಜ. ಹಿರಿಯರು ಬೆಳೆಸಿಕೊಟ್ಟ ಕನ್ನಡ ನಾಡು ನುಡಿಯನ್ನು ಬೆಳೆಸಬೇಕಿದೆ. ಯುವಕರಿಂದ ಮಾತ್ರವೇ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಡಾ. ರಾಜಕುಮಾರ್ ಹೆಸರಿಟ್ಟುಕೊಂಡು ಕೆಲಸ ಮಾಡುತ್ತಿರುವ ಈ ಸಂಘಟನೆ ಮೂಲಕ ಇನ್ನಷ್ಟು ಉತ್ತಮ ಕಾರ್ಯಗಳಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ಕುಟುಂಬಕ್ಕೆ ಆರ್ಥಿಕ ಧನಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ. ರಾಜ್ ಸಂಘಟನೆ ಕುಂದಾಪುರ ಇಲ್ಲಿಯ ಅಧ್ಯಕ್ಷ ರತ್ನಾಕರ ಪೂಜಾರಿ, ವಿ.ಕೆ. ರಾಘವೇಂದ್ರ ಪೂಜಾರಿ, ಕುಂದಾಪುರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ದುಂಡಿರಾಜ್, ಪತ್ರಕರ್ತ ಮಝರ್, ಶ್ರೀಧರ್ ಗಾಣಿಗ, ಸುನೀಲ್ ಖಾರ್ವಿ ತಲ್ಲೂರು, ಹುಸೇನ್ ಹೈಕಾಡಿ, ಗಣೇಶ್, ದಾನಿಗಳಾದ ಅಜೇಂದ್ರ ಶೆಟ್ಟಿ, ರಾಮಚಂದ್ರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕೋಟೇಶ್ವರದವೆರೆಗೂ ಬೈಕ್ ರ್‍ಯಾಲಿ ನಡೆಯಿತು.

 

 

Comments are closed.