ಕರ್ನಾಟಕ

ಕೇವಲ 30 ನಿಮಿಷದಲ್ಲೇ ಬೆಂಗಳೂರಿನಿಂದ ಚೆನ್ನೈ ತಲುಪಬಹುದು….ಕಾಲಿಡಲಿದೆ ಹೈಪರ್ ಲೂಪ್…!

Pinterest LinkedIn Tumblr

ಚೆನ್ನೈ:ವಾಹನಗಳ ದಟ್ಟಣೆಯಿಂದಾಗಿ ಮಹಾನಗರಗಳಲ್ಲಿ ಸಂಚಾರಿಸುವುದೇ ದುಸ್ತರವಾಗಿದೆ. ಆ ನಿಟ್ಟಿನಲ್ಲಿ ವಾಹನ ದಟ್ಟಣೆಯಿಂದ ಪಾರಾಗಿ ಶೀಘ್ರ ತಲುಪಬಲ್ಲ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಡಿ ಇಡತೊಡಗಿದೆ. ಇದರಲ್ಲಿ ಬುಲೆಟ್ ಟ್ರೈನ್ ಪ್ರಸ್ತಾಪ ಈಗಾಗಲೇ ಬಂದಾಗಿದೆ. ಅದರ ಜೊತೆಗೆ ಈಗ ನಿಮಗೆ ಊಹಿಸಲೂ ಸಾಧ್ಯವಾಗದ ಹಾಗೂ ಇದು ಸಾಧ್ಯವೇ ಎಂದು ಹುಬ್ಬೇರಿಸುವಂತಹ ಮತ್ತೊಂದು ಸಾರಿಗೆ ವ್ಯವಸ್ಥೆ ಬರಲಿದೆ ಅದರ ಹೆಸರು ಹೈಪರ್ ಲೂಪ್!

ಚೆನ್ನೈ ಟು ಬೆಂಗಳೂರಿಗೆ ಕೇವಲ 30 ನಿಮಿಷದಲ್ಲೇ ಹೋಗಬಹುದು! ಅರೇ ಇದು ಊಹಿಸಲು ಸಾಧ್ಯವಿಲ್ಲ ಅಥವಾ ಇದೇನು ವಿಡಿಯೋ ಗೇಮ್ ಬಗ್ಗೆ ಹೇಳುತ್ತಿದ್ದಾರೆ ಅಂದುಕೊಂಡಿದ್ದೀರಾ? ಅಲ್ಲ ಇದು ಪ್ರಸ್ತಾವಿತ ಸಾರಿಗೆ ವ್ಯವಸ್ಥೆಯ ಮುನ್ನೋಟ!

ಒಂದು ನಗರದಿಂದ ಮತ್ತೊಂದು ನಗರಕ್ಕೆ ತೆರಳಲು ಸಾಧ್ಯವಾಗುವಂತಹ ಬಹು ನಿರೀಕ್ಷೆಯ ಹಾಗೂ ಕ್ರಾಂತಿಕಾರಿ ವ್ಯವಸ್ಥೆಯ ಪ್ರಸ್ತಾವನೆಯನ್ನು ಅಮೆರಿಕ ಮೂಲದ ಕಂಪನಿಯೊಂದು ಮುಂದಿಟ್ಟಿದೆ. ಒಂದುವೇಳೆ ಹೈಪರ್ ಲೂಪ್ ತಂತ್ರಜ್ಞಾನವೇನಾದ್ರೂ ಭಾರತಕ್ಕೆ ಬಂದ್ರೆ ಕೇವಲ 30 ನಿಮಿಷಗಳಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು. ಅದಕ್ಕೆ ವಿಮಾನ ಪ್ರಯಾಣಕ್ಕೆ ಆದಷ್ಟು ವೆಚ್ಚವಾಗಲಿದೆ.

ಏನಿದು ಹೈಪರ್ ಲೂಪ್:
ಕಾಂಕ್ರೀಟ್ ಪಿಲ್ಲರ್ ಗಳ ಮೇಲೆ ನಿರ್ಮಿಸುವ ಹೈಪರ್ ಲೂಪ್ ಟ್ಯೂಬ್ ಮೂಲಕ ಸುಮಾರು 1200 ಕಿಮೀಟರ್ ವೇಗದಲ್ಲಿ ಪೋಡ್ ಅಥವಾ ರೈಲು ಚಲಾಯಿಸುವ ವ್ಯವಸ್ಥೆ ಇದಾಗಿದೆ. ಈ ಸುರಂಗದೊಳಗಿನ ನಿರ್ವಾತದಿಂದ ಅತೀ ವೇಗವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಇದು ಘರ್ಷಣೆ ಮುಕ್ತ ವ್ಯಾಕ್ಯೂಮ್ ವಾತಾವರಣದ ವ್ಯವಸ್ಥೆಯಾಗಿದೆ. ಇದರಲ್ಲಿ ಗಂಟೆಗೆ 1200 ಕಿಮೀ ವೇಗದಲ್ಲಿ ವಾಹನವನ್ನು ಚಲಾಯಿಸಬಹುದು. ವಿಮಾನಕ್ಕಿಂತಲೂ ಫಾಸ್ಟಾಗಿ ಹೋಗಬಹುದು. ಹೈಪರ್ ಲೂಪ್’ನಲ್ಲಿ ಕೂತು ಪ್ರಯಾಣಿಸಿದರೆ ಏರೋಪ್ಲೇನ್’ನಲ್ಲಿದ್ದಂತೆ ಭಾಸವಾಗುತ್ತದೆ ಎಂದು ವರದಿ ವಿವರಿಸಿದೆ. ಭವಿಷ್ಯದಲ್ಲಿ ಈ ಹೈಪರ್ ಲೂಪ್ ವ್ಯವಸ್ಥೆ ಜಾರಿಗೆ ಬಂದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಕೇವಲ 30 ನಿಮಿಷವಾದರೆ, ಮುಂಬೈಗೆ ಒಂದು ಗಂಟೆಯಲ್ಲಿ ತಲುಪಬಹುದಾಗಿದೆ!

ಇತ್ತೀಚೆಗೆ ಕಂಪನಿ ಮಾಡಿರುವ ಪ್ರಸ್ತಾವಿತ ಮಾರ್ಗಸೂಚಿಯ ಟ್ವೀಟ್ ಪ್ರಕಾರ, ಚೆನ್ನೈ ಬೆಂಗಳೂರು, ಚೆನ್ನೈ ಟು ಮುಂಬೈ, ಬೆಂಗಳೂರು ಟು ತಿರುವನಂತಪುರಂ ಮತ್ತು ಮುಂಬೈ ಟು ದೆಹಲಿಯ ಪ್ರಸ್ತಾಪವಿದೆ.
ಹೈಪರ್ ಲೂಪ್ ಸಂಸ್ಥೆ ಈ ಬಗ್ಗೆ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ಮೂಲಗಳು ತಿಳಿಸಿವೆ.ಈ ಪ್ರಸ್ತಾವಿತ ಮಾರ್ಗದಲ್ಲಿ ಬುಲೆಟ್ ರೈಲು ಓಡಿಸಲು ನಿರ್ಧರಿಸಲಾಗಿದೆ. ಅಲ್ಲದೇ ಜಪಾನ್ ಮತ್ತು ಚೀನಾ ತಂತ್ರಜ್ಞರ ತಂಡ ಹೈಸ್ಪೀಡ್ ರೈಲನ್ನು ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ದುಬಾರಿ ವೆಚ್ಚ!
1ಕಿಲೋ ಮೀಟರ್ ಹೈಸ್ಪೀಡ್ ಮಾರ್ಗ ನಿರ್ಮಾಣಕ್ಕೆ 300 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಆದರೆ ಹೈಪರ್ ಲೂಮ್ ಪ್ರಕಾರ ಸ್ಯಾನ್ ಫ್ರಾನ್ಸಿಸ್ಕೋ ಟು ಲಾಸ್ ಏಂಜಲೀಸ್ ನಡುವಿನ ಪ್ರಸ್ತಾವಿತ ಸಾರಿಗೆಯ ಪೋಡ್ ನ ಪ್ರತಿ ಕಿಲೋ ಮೀಟರ್ ಗೆ 72 ಕೋಟಿ ರೂಪಾಯಿ ಬೇಕಾಗುವುದಾಗಿ ತಿಳಿಸಿದೆ.
ಅಬುಧಾಬಿಯಲ್ಲಿ ಯೋಜನೆಗೆ ಅಂಗೀಕಾರ ದೊರೆತಿದ್ದು, ಕೆಲವೇ ವರ್ಷಗಳಲ್ಲಿ ಅಲ್ಲಿ ಯೋಜನೆ ಶುರುವಾಗಬಹುದು. ಅಮೆರಿಕದಲ್ಲಿ ಯೋಜನೆ ಕಾರ್ಯಗತಗೊಳಿಸಲು ಸಮೀಕ್ಷೆ ಮತ್ತು ಅಧ್ಯಯನಗಳು ನಡೆಯುತ್ತಿವೆ. ಭಾರತ ಸೇರಿದಂತೆ ಒಟ್ಟು 20 ದೇಶಗಳ ಮುಂದೆ ಹೈಪರ್’ಲೂಪ್ ಯೋಜನೆಯ ಪ್ರಸ್ತಾವವಿದೆ.

Comments are closed.