ಕರಾವಳಿ

ಮಂಗಳೂರು ನರಕ ಅಲ್ಲ, ಸ್ವರ್ಗ : ರಮ್ಯಾ ಯು ಟರ್ನ್ / ಪಾಕಿಸ್ತಾನ ಪರ ಹೇಳಿಕೆಗೆ ಈಗಲೂ ಬದ್ದ : ಪ್ರತಿಭಟನೆಗೆ ಐ ಡೋಂಟ್ ಕೇರ್ : ರಮ್ಯಾ

Pinterest LinkedIn Tumblr

https://youtu.be/gaM5VYetz30

ಮಂಗಳೂರು, ಆಗಸ್ಟ್ 26: ಮಂಗಳೂರುನ್ನು ನಾನು ನರಕ ಎಂದಿಲ್ಲ’ ಎಂದು ಮಾಜಿ ಸಂಸದೆ-ಚಿತ್ರನಟಿ ರಮ್ಯಾ ತಮ್ಮದೇ ಹೇಳಿಕೆಗೆ ಸ್ಪಷ್ಟನೆ ನೀಡುವ ಮೂಲಕ ಯು ಟರ್ನ್ ಹೊಡೆದಿದ್ದಾರೆ.

ಮಂಗಳೂರಿನಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, `ಮಂಗಳೂರಿನ ಕುರಿತಾಗಿ ಅಂತಹ ಯಾವುದೇ ಕೆಟ್ಟ ಪದವನ್ನು ಬಳಸಿಲ್ಲ. ಟಿವಿ ವಾಹಿನಿಯೊಂದು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದೆ. ಜಗತ್ತಿನಲ್ಲಿ ಯಾವುದೇ ಸ್ಥಳವನ್ನು ನರಕ ಅನ್ನುವುದು ಸರಿಯಲ್ಲ. ಅದರಲ್ಲೂ ನನ್ನ ಪ್ರೀತಿಯ ಊರಾದ ಮಂಗಳೂರನ್ನು ಯಾಕೆ ನರಕ ಎಂದು ಕರೆಯಲಿ ಎಂದು ಮರು ಪ್ರಶ್ನಿಸಿದ್ದಾರೆ.

ನಾನು ಇಂದಿಗೂ ಎಂದೆಂದಿಗೂ ಮಂಗಳೂರನ್ನು ಪ್ರೀತಿಸುತ್ತೇನೆ. ಯಾಕೆಂದರೆ ನನ್ನ ಪ್ರಥಮ ಚುನಾವಣಾ ಪ್ರಚಾರವನ್ನು ನಾನು ಆರಂಭಿಸಿದ್ದು ಮಂಗಳೂರಿನಲ್ಲಿ. ಆದ್ದರಿಂದ ಮಂಗಳೂರಿನ ಮೇಲೆ ನನಗೆ ಪ್ರೀತಿಯಿದೆ. ಅಲ್ಲದೆ ನನ್ನ ಹೆಚ್ಚಿನ ಗೆಳೆಯರು ಮಂಗಳೂರಿನವರು. ಮಂಗಳೂರು ನಾನು ಹಿಂದಿನಿಂದಲೂ ಪ್ರೀತಿಸುತ್ತೇವೆ. ಇಲ್ಲಿನ ಜನರು ಬುದ್ಧಿವಂತರು, ಉತ್ತಮ ಬಾಂಧವ್ಯ ಹೊಂದಿದವರು. ಮಂಗಳೂರಿನಿಂದಲೇ ನಾನು ಪ್ರಚಾರವನ್ನು ಪಡೆದಿರುವ ಕ್ಷೇತ್ರ. ಹಾಗಿರುವಾಗ ‘ಮಂಗಳೂರು ನರಕ’ ಎಂದು ನಾನು ಎಲ್ಲೂ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಟಿವಿ ಚಾನಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ಬಗ್ಗೆ ಕೇಳಿದಾಗ ”ಇಂತಹ ಘಟನೆಗಳು ದೇಶದ ಹಲವು ಕಡೆಗಳಲ್ಲಿ ನಡೆದಿವೆ. ಗುಜರಾತ್, ಕಾಶ್ಮೀರ ಅಥವಾ ಮಂಗಳೂರಿನಲ್ಲೂ ಗೋ ರಕ್ಷಣೆಯ ನೆಪದಲ್ಲಿ ಹಲ್ಲೆಗಳು, ಕೊಲೆಗಳು ನಡೆದಿವೆ ಎಂದು ಹೇಳಿದ್ದೆ.

ಇತ್ತೀಚೆಗೆ ಗೋ ರಕ್ಷಣೆ ವಿಷಯದಲ್ಲಿ ಸಂಘಪರಿವಾರದವರು ಬಿಜೆಪಿ ಮುಖಂಡರೊಬ್ಬರನ್ನು ಕೊಲೆ ಮಾಡಿರುವುದನ್ನು ಉಲ್ಲೇಖಿಸಿದ್ದೇನೆಯೇ ಹೊರತು ‘ಮಂಗಳೂರು ನರಕ’ ಅಂತ ಹೇಳಿಲ್ಲ. ದೃಶ್ಯ ಮಾಧ್ಯಮವೊಂದು ನನ್ನ ಹೇಳಿಕೆಯನ್ನು ತಿರುಚಿ ಈ ರೀತಿಯ ಅಪಪ್ರಚಾರ ನಡೆಸಿದೆ ಎಂದು ರಮ್ಯಾ ಪ್ರತಿಕ್ರಿಯಿಸಿದರು.

ಮಾಧ್ಯಮದವರು ಮತ್ತೆ ಮತ್ತೆ ನೀವು ‘ಮಂಗಳೂರು ನರಕ’ ಎಂದು ಹೇಳಿಕೆ ನೀಡಿದ್ದೀರಿ ಎಂದಾಗ ‘ನಾನು ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯನ್ನು ಸರಿಯಾಗಿ ಕೇಳಿಸಿಕೊಳ್ಳಿ. ಅವರು ಯಾವ ರೀತಿಯಲ್ಲಿ ಪ್ರಶ್ನೆ ಕೇಳಿದ್ದಾರೋ ಅದಕ್ಕೆ ಸರಿಯಾಗಿಯೇ ಉತ್ತರಿಸಿದ್ದೇನೆ ಎಂದರು.

ಪಾಕಿಸ್ತಾನ ಪರ ಹೇಳಿಕೆಗೆ ಈಗಲೂ ಬದ್ದ : ಪ್ರತಿಭಟನೆಗೆ ಐ ಡೋಂಟ್ ಕೇರ್ : ರಮ್ಯಾ

ಪಾಕ್ ಕುರಿತ ತನ್ನ ಹೇಳಿಕೆಗೆ ನಡೆಯುತ್ತಿರುವ ಪ್ರತಿಭಟನೆ , ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಮಾಜಿ ಸಂಸದೆ, ನಟಿ ರಮ್ಯಾ ನನ್ನ ಹೇಳಿಕೆಗೆ ನಾನು ಸಂಪೂರ್ಣ ಬದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ನಾವು ಯಾವತ್ತೂ ಎಲ್ಲರಲ್ಲೂ ಒಳ್ಳೆಯದನ್ನು ನೋಡಬೇಕು, ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಲು ಪ್ರಯತ್ನಿಸಬೇಕು. ನಾನು ಸಾರ್ಕ್ ಕಾರ್ಯಕ್ರಮಕ್ಕೆ ಪಾಕಿಸ್ತಾನಕ್ಕೆ ಹೋದಾಗ ನನ್ನನ್ನು ಅಲ್ಲಿ ಅತ್ಯಂತ ಆದರದಿಂದ ನೋಡಿಕೊಂಡಿದ್ದಾರೆ. ಅದನ್ನು ನಾನು ಹೇಳಿದ್ದೇನೆ.

ಆದರೆ ಇದರಲ್ಲಿ ಮಾಧ್ಯಮಗಳ ತಪ್ಪಿದೆ. ಕೆಲವು ಲೋಕಲ್ ಚಾನೆಲ್ ಗಳು ಅದನ್ನು ಬೇರೆಯೇ ರೂಪದಲ್ಲಿ ಶೀರ್ಷಿಕೆ ನೀಡಿ ಪ್ರಕಟಿಸಿದವು. ಈ ಬಗ್ಗೆ ನಾನು ಅವರಲ್ಲಿ ಕೇಳಿದಾಗ ” ಮೇಡಂ, ಹೆಡ್ಡಿಂಗ್ ಮಾತ್ರ ಆ ತರ ಇದೆ, ಒಳಗೆ ನೀವು ಹೇಳಿದ್ದನ್ನು ಸರಿಯಾಗಿ ಬರೆದಿದ್ದೇವೆ ” ಎಂದು ಹೇಳಿದ್ದಾರೆ.

ಆದರೆ ಇವತ್ತು ಹೆಡ್ಡಿಂಗ್ ನಿಂದಲೇ ಜನರಲ್ಲಿ ಗೊಂದಲ ಉಂಟಾಗುತ್ತದೆ. ಈ ಬಗ್ಗೆ ಆ ಚಾನೆಲ್ ನವರು ಯೋಚಿಸಬೇಕಿತ್ತು. ಆದರೆ ಪಾಕಿಸ್ತಾನದಲ್ಲೂ ಒಳ್ಳೆಯವರಿದ್ದಾರೆ ಎಂಬ ನನ್ನ ಹೇಳಿಕೆಗೆ ನಾನು ಸಂಪೂರ್ಣ ಬದ್ಧಳಾಗಿದ್ದೇನೆ. ಈಗ ನಡೆಯುತ್ತಿರುವ ಪ್ರತಿಭಟನೆಗಳಿಗೆ ಐ ಡೋಂಟ್ ಕೇರ್ . ನಾನು ಮಂಗಳೂರಿನ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಮಂಗಳೂರು ಇಷ್ಟ. ಮಂಗಳೂರು ಹೆವೆನ್ ( ಸ್ವರ್ಗ) ಇದನ್ನು ಸ್ಪಷ್ಟವಾಗಿ ಹೇಳ್ತೇನೆ ಎಂದು ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ವಿರುದ್ಧ ನಡೆದ ಪ್ರತಿಭಟನೆ, ಮೊಟ್ಟೆ ಎಸೆತದ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿಲ್ಲ. ನಾನು ಆಕ್ರೋಶಗೊಂಡಿಲ್ಲ. ಅವರ ಕೃತ್ಯಕ್ಕೆ ಹತ್ತಿರದಲ್ಲಿದ್ದವರೇ ಕೆಲವರು ನಗುತ್ತಿದ್ದರು ಎಂದು ಲೇವಾಡಿ ಮಾಡಿದರು..

Comments are closed.