ಕರಾವಳಿ

ಬೆಂಗಳೂರು-ಮಡಗಾಂವ್ ಸಂಪರ್ಕದ ‘ವಂದೇಭಾರತ್’ ರೈಲಿಗೆ ನ.15ಕ್ಕೆ ಕುಂದಾಪುರದಲ್ಲಿ ಅದ್ಧೂರಿ ಸ್ವಾಗತ: ಗಣೇಶ್ ಪುತ್ರನ್

Pinterest LinkedIn Tumblr

ಕುಂದಾಪುರ: ಬಹುಕಾಲದ ಕನಸ್ಸಾಗಿದ್ದ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇಭಾರತ ರೈಲು ಸಂಪರ್ಕಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹೋರಾಟವಿದೆ. ಇದರಿಂದಾಗಿ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ವಂದೇ ಭಾರತ್ ಮೂಲಕ ವೇಗವಾಗಿ ಬೆಂಗಳೂರು ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಹೇಳಿದರು.

ಬುಧವಾರ ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ಹಿತರಕ್ಷಣಾ ಸಮಿತಿ ಈವರೆಗೆ ಹೋರಾಟ, ಮನವಿಗಳ ಮೂಲಕ ಹಲವು ರೈಲುಗಳ ನಿಲುಗಡೆ ಜೊತೆಗೆ ಪ್ರಯಾಣಿಕರ ಅನುಕೂಲಕ್ಕೆ ಪ್ರತಿಫಲಾಫೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದೆ. ಇದರಿಂದ ಕರಾವಳಿ ಭಾಗದ ಜನರಿಗೆ ಸಹಾಯವಾಗಿದೆ. ನ.13ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿಗಳು ರೈಲಿಗೆ ಚಾಲನೆ ನೀಡಲಿದ್ದಾರೆ. ಮಡಗಾಂವ್‌ನಿಂದ ಅಧೀಕೃತ ಪ್ರಯಾಣ ಬೆಳೆಸುವ ರೈಲನ್ನು ಕುಂದಾಪುರದಲ್ಲಿ ನ.15 ರವಿವಾರ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ ಎಂದರು.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ ಮಾತನಾಡಿ, ಭಾರತೀಯ ರೈಲ್ವೆಯಲ್ಲಿಯೇ ವಂದೇಭಾರತ್ ಪ್ರತಿಷ್ಟಿತ ರೈಲಾಗಿದ್ದು ಹಲವಾರು ಸೇವಾಸೌಕರ್ಯಗಳನ್ನು ಹೊಂದಿದೆ. ಬೆಂಗಳೂರು-ಕರಾವಳಿಗೆ ಈ ರೈಲು ಯಾನ ಜೋಡಿಸುವ ಮೂಲಕ ಇಲ್ಲಿನ ಪ್ರವಾಸೋಧ್ಯಮ, ಶಿಕ್ಷಣ, ವಾಣಿಜ್ಯ, ಧಾರ್ಮಿಕ ಕ್ಷೇತ್ರಕ್ಕೂ ಅನುಕೂಲಕರವಾಗಲಿದ್ದು ಕರಾವಳಿ-ಬೆಂಗಳೂರು ನಡುವೆ ಸಂಚರಿಸುವ ವೇಗದ ರೈಲು ಇದಾಗಿದೆ. ಒಂದಷ್ಟು ಸಮಸ್ಯೆಗಳು ನಿವಾರಣೆಯಾದರೆ ಇನ್ನೂ 1 ಗಂಟೆ ಸಂಚಾರ ಕಡಿಮೆಯಾಗಲಿದೆ ಎಂದರು. ಇನ್ನೋರ್ವ ತಾಂತ್ರಿಕ ಸಲಹೆಗಾರ ಪ್ರಥ್ವಿ ಕುಂದರ್ ಮಾತನಾಡಿ, ಇದು ವಿಸ್ತರಣೆಯಾದ ರೈಲಲ್ಲ. ಬದಲಾಗಿ ಹೊಸದಾಗಿ ನಿಗದಿಯಾದ ರೈಲು ಎಂದರು.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಚಾಲಕ ವಿವೇಕ್ ನಾಯಕ್ ಮಾತನಾಡಿ, ಕರಾವಳಿ ಭಾಗದವರ ಕನಸಿನ ರೈಲು ವಂದೇಭಾರತ್. ಮಡಗಾಂವ್-ಮಂಗಳೂರು ನಡುವೆ ಸಿಂಗಲ್ ಟ್ರ್ಯಾಕ್ ಇರುವ ಕಾರಣ ಸದ್ಯ ಕುಂದಾಪುರ-ಬೆಂಗಳೂರಿಗೆ 9 ಗಂಟೆ ಪ್ರಯಾಣವಿರಲಿದೆ. ರೈಲು ಹಳಿ ಡಬ್ಬಲಿಂಗ್ ಆದರೆ ಪ್ರಯಾಣಿಕರಿಗೆ ಬಾರೀ ಅನುಕೂಲವಾಗಲಿದೆ ಎಂದರು.

Comments are closed.