ಕುಂದಾಪುರ: ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣಾರ್ಥ ಈದ್ ಮಿಲಾದ್ ಅಂಗವಾಗಿ ಬ್ರಹ್ಮಾವರ ತಾಲೂಕಿನ ಕೋಡಿಕನ್ಯಾಣ, ಪಾರಂಪಳ್ಳಿ ಹಾಗೂ ಕೋಟತಟ್ಟು ಭಾಗಗಳ ವತಿಯಿಂದ ಆ.25ರಂದು ಅದ್ದೂರಿ ಈದ್ ಮಿಲಾದ್ ರ್ಯಾಲಿ ನಡೆಯಿತು.

ಕೋಟತಟ್ಟಿನಿಂದ ಕೋಡಿಕನ್ಯಾಣದವರೆಗೆ ಸುಮಾರು 5 ಕಿ.ಮೀ. ದೂರ ನಡೆದ ರ್ಯಾಲಿಯಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿದಂತೆ ನೂರಾರು ಮಂದಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದು ಧಾರ್ಮಿಕ ಭಾವನೆಯೊಂದಿಗೆ ಗಮನ ಸೆಳೆಯಿತು.
ಈ ವೇಳೆ ಸೌಹಾರ್ದತೆಯ ಸಂದೇಶ ಸಾರಿದ ಅಪೂರ್ವ ಬೆಳವಣಿಗೆಯಲ್ಲಿ ರತ್ನಾಕರ ಶ್ರೀಯಾನ್ ಅವರ ನೇತೃತ್ವದಲ್ಲಿ ಹಿಂದೂ ಬಾಂಧವರು ರ್ಯಾಲಿಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರಿಗೆ ಸಿಹಿ ಹಂಚಿ ಶುಭಾಶಯ ಕೋರಿದರು. ಧರ್ಮಗಳ ನಡುವಿನ ಬಾಂಧವ್ಯ, ಪರಸ್ಪರ ಗೌರವ ಹಾಗೂ ಸಹೋದರತ್ವವನ್ನು ಸಾರಿದ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಹಬ್ಬದ ಸಂಭ್ರಮದಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಶುಭ ಹಾರೈಸಿದ ಈ ಕ್ಷಣವು ‘ಧರ್ಮ ಬೇರೆ, ಮಾನವೀಯತೆ ಒಂದೇ’ ಎಂಬ ಸಂದೇಶವನ್ನು ಸಾರುವಂತಿತ್ತು. ಕರಾವಳಿಯ ಸೌಹಾರ್ದ ಪರಂಪರೆಗೆ ಮತ್ತಷ್ಟು ಬಲ ತುಂಬಿದ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ನಡುವಿನ ಸ್ನೇಹ, ಸಹಬಾಳ್ವೆ ಹಾಗೂ ಪರಸ್ಪರ ಗೌರವದ ವಾತಾವರಣ ಕಂಡುಬಂತು.
ಈ ಸಂದರ್ಭದಲ್ಲಿ ಡಾ. ಕೃಷ್ಣ ಕಾಂಚನ್, ರಮೇಶ್ ಮೆಂಡನ್, ದೇವದಾಸ್ ಕಾಂಚನ್, ಅಶೋಕ್ ಬಡಹೊಳಿ, ಇಲಿಯಾಸ್ ಪಾರಂಪಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.
Comments are closed.